ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸದ ಸರ್ಕಾರ

By Kannadaprabha News  |  First Published Oct 24, 2022, 4:49 AM IST

ರಾಜ್ಯ ಸರ್ಕಾರವು ಹನ್ನೊಂದು ಇಲಾಖೆಗಳ ಬಡ್ತಿ ಹೊಂದಿದ ಸಿಬ್ಬಂದಿಯ ವೇತನ ಶ್ರೇಣಿಯನ್ನು ಹೆಚ್ಚಿಸಿದರೂ, ಪದವಿಪೂರ್ವ ಕಾಲೇಜಿನ ಬಡ್ತಿ ಉಪನ್ಯಾಸಕರ ವೇತನ ಶ್ರೇಣಿಯನ್ನು ಪರಿಷ್ಕರಿಸಿದೆ ತಾರತಮ್ಯ ಧೋರಣೆ ಅನುಸರಿಸಿದೆ.


ಮಹೇಂದ್ರ ದೇವನೂರು

 ಮೈಸೂರು (ಅ.24):  ರಾಜ್ಯ ಸರ್ಕಾರವು ಹನ್ನೊಂದು ಇಲಾಖೆಗಳ ಬಡ್ತಿ ಹೊಂದಿದ ಸಿಬ್ಬಂದಿಯ ವೇತನ ಶ್ರೇಣಿಯನ್ನು ಹೆಚ್ಚಿಸಿದರೂ, ಪದವಿಪೂರ್ವ ಕಾಲೇಜಿನ ಬಡ್ತಿ ಉಪನ್ಯಾಸಕರ ವೇತನ ಶ್ರೇಣಿಯನ್ನು ಪರಿಷ್ಕರಿಸಿದೆ ತಾರತಮ್ಯ ಧೋರಣೆ ಅನುಸರಿಸಿದೆ.

Tap to resize

Latest Videos

ಯ (Edication)  ಆಧಾರದ ಮೇಲೆ ಪ್ರೌಢಶಾಲಾ ರಾಗಿ (Teacher)  ಕಾರ್ಯನಿರ್ವಹಿಸುತ್ತಿದ್ದವರನ್ನು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸರ್ಕಾರ ನಿಯೋಜಿಸಿದೆ. ಹೀಗೆ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಬಡ್ತಿ ಹೊಂದಿದ್ದ ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರವು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನವನ್ನು ಮಾತ್ರ ಪರಿಷ್ಕರಿಸದೆ ಹಾಗೆಯೇ ಬಿಟ್ಟಿದೆ.

ಈ ನಿರ್ಲಕ್ಷ್ಯತೆಯ ವಿರುದ್ಧ ಬಡ್ತಿ ಶಿಕ್ಷಕರು ಸಿಡಿದೆದಿದ್ದು, ಕೂಡಲೇ ತಮ್ಮ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿಯೂ ಈವರೆಗೂ ಬಡ್ತಿ ಉಪನ್ಯಾಸಕರ ಸಮಸ್ಯೆ ನಿವಾರಿಸುವಲ್ಲಿ ಯಾವ ಸರ್ಕಾರವು ಸಕಾರಾತ್ಮಕ ಹೆಜ್ಜೆಯನ್ನಿಟ್ಟಿಲ್ಲ.

ಕಳೆದ ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಡ್ತಿ ಉಪನ್ಯಾಸಕರಿಗೆ ಆಗಿರುವ ವೇತನ ತಾರತಮ್ಯ ಪರಿಹರಿಸಲು ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ. ಆದರೆ ಈವರೆಗೂ ಆರ್ಥಿಕ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಅಧಿಕಾರಿಯೊಬ್ಬರು ಬಡ್ತಿ ಉಪನ್ಯಾಸಕರ ವೇತನ ಸರಿಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈಗ ಅವರೇ ಆರ್ಥಿಕ ಇಲಾಖೆಯ ಪ್ರಮುಖ ಹುದ್ದೆಯಲ್ಲಿದ್ದರೂ ಸಮಸ್ಯೆ ಮಾತ್ರ ಜೀವಂತವಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಸರ್ಕಾರ ತನ್ನ ಆದೇಶದಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳ ಪ್ರಸಕ್ತ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ. ಇದರಲ್ಲಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಬಕಾರಿ, ಅರಣ್ಯ, ಪೊಲೀಸ್‌ ವಿಧಿವಿಜ್ಞಾನ ಪ್ರಯೋಗಾಲಯ, ಕಾರ್ಮಿಕ, ಕಾನೂನು ಮಾಪನಶಾಸ್ತ್ರ, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆ, ಸಮಾಜ ಕಲ್ಯಾಣ, ಬುಡಕಟ್ಟು ಕಲ್ಯಾಣ ಮತ್ತು ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಿಬ್ಬಂದಿ ವೇತನವನ್ನು ಪರಿಷ್ಕರಿಸಿ, ಬಡ್ತಿ ಉಪನ್ಯಾಸಕರ ವೇತನವನ್ನು ಮಾತ್ರ ಹಾಗೆಯೇ ಬಿಟ್ಟಿದೆ. ಆದ್ದರಿಂದ ಸಮಸ್ಯೆ ಬಗೆಹರಿಸಿ, ಇಲ್ಲವೇ ಪ್ರೌಢಶಾಲೆಗೆ ವರ್ಗಾಯಿಸಿ ಎಂಬುದು ಅವರ ಒಕ್ಕೊರಲಿನ ಆಗ್ರಹ.

ಇಷ್ಟಕ್ಕೂ ಸಮಸ್ಯೆ ಏನು?

ಪದವಿ ವಿದ್ಯಾರ್ಹತೆಯ ಮೇಲೆ ಬಿ.ಇಡಿ ಮಾಡಿದವರು ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾಗುತ್ತಾರೆ. ಹೀಗೆ ನೇಮಕವಾದ ಶಿಕ್ಷಕರು ಉದ್ಯೋಗದಲ್ಲಿರುವಾಗ ಎಂ.ಎ ಪದವಿ ಪಡೆದರೆ ಅಂತಹವರಿಗೆ ಕೋರಿಕೆಯ ಮೇರೆಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಬಡ್ತಿ ನೀಡಲಾಗುತ್ತದೆ. ಹೀಗೆ ಬಡ್ತಿ ಹೊಂದಿದ್ದ ಉಪನ್ಯಾಸಕರು ರಾಜ್ಯದಲ್ಲಿ ಸುಮಾರು 2,924 ಮಂದಿ ಇದ್ದಾರೆ.

ಇವರಿಗೆ ವೇತನದಲ್ಲಿ ಒಂದು ಇನ್‌ಕ್ರಿಮೆಂಟ್‌ ನೀಡಿ ಬಡ್ತಿ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ ಮಾಡದೆ ಬಡ್ತಿ ಪಡೆಯದಿದ್ದರೂ, ಸುಮಾರು 10 ರಿಂದ 12 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದವರಿಗೂ ಉಪನ್ಯಾಸಕರಿಗೆ ನೀಡುವಷ್ಟೇ ವೇತನ ನೀಡಲಾಗುತ್ತದೆ. ಜೊತೆಗೆ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗುತ್ತಿರುತ್ತದೆ. ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದರಂತೂ ಕನಿಷ್ಠ 1 ಲಕ್ಷದವರೆಗೆ ವೇತನ ಸಿಗುತ್ತದೆ.

ಆದರೆ ಬಡ್ತಿ ಪಡೆದ ಉಪನ್ಯಾಸಕರಿಗೆ ಸಾಮಾನ್ಯ ವೇತನವೇ ಸಿಗುತ್ತದೆ. ಹೇಳಿಕೊಳ್ಳಲಷ್ಟೇ ಉಪನ್ಯಾಸಕರು. ಉಳಿದಂತೆ ಯಾವುದೇ ರೀತಿಯ ಸ್ಥಾನಮಾನ ಸಿಗುವುದಿಲ್ಲ. ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಗೆಜೆಡೆಟ್‌ ಅಧಿಕಾರಿ ಎಂಬ ಹಣೆಪಟ್ಟಿಇರುತ್ತದೆ, ಹತ್ತಾರು ಮಂದಿ ಶಿಕ್ಷಕರನ್ನು ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಶಾಲೆಯ ಯಾವುದೇ ತೀರ್ಮಾನವನ್ನು ಮುಖ್ಯಶಿಕ್ಷಕರೆ ತೆಗೆದುಕೊಳ್ಳುತ್ತಾರೆ. ಆದರೆ ಉಪನ್ಯಾಸಕರು, ಉಪನ್ಯಾಸಕರಾಗಿಯೇ ಉಳಿಯುತ್ತಾರೆ.

ಅಷ್ಟೇ ಅಲ್ಲದೆ ನೇರ ನೇಮಕಾತಿಯ ಮೂಲಕ ಉಪನ್ಯಾಸಕರಾದ ಅನೇಕರ ವೇತನಕ್ಕೂ, ಬಡ್ತಿ ಉಪನ್ಯಾಸಕರ ವೇತನಕ್ಕೂ ಸಾಕಷ್ಟುವ್ಯತ್ಯಾಸವಿರುತ್ತದೆ. ಈ ತಾರತಮ್ಯವನ್ನು ಸರ್ಕಾರ ಸರಿಪಡಿಸಬೇಕು.

ಬಡ್ತಿ ಉಪನ್ಯಾಸಕರು ರಾಜ್ಯಪಾಲರನ್ನು ಬಿಟ್ಟು ಉಳಿದೆಲ್ಲರಿಗೂ ಮನವಿ ಸಲ್ಲಿಸಿದ್ದಾರೆ. 14 ಮಂದಿ ವಿಧಾನ ಪರಿಷತ್‌ ಸದಸ್ಯರು ಸದನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಸುಮಾರು 1558 + 650 ಉಪನ್ಯಾಸಕರಿಗೆ ಬೇಕಾಗುವ ಆರ್ಥಿಕ ಹೊರೆ ಸುಮಾರು 25 ರಿಂದ 30 ಲಕ್ಷ ಅಷ್ಟೇ. ಅದನ್ನೂ ಭರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸರ್ಕಾರ ಇದೆಯೇ? ಹಾಗಾದರೆ ಉಳಿದ ಹನ್ನೊಂದು ಇಲಾಖೆಯ ಸಿಬ್ಬಂದಿ ವೇತನವನ್ನು ಹೇಗೆ ಪರಿಷ್ಕರಿಸಿತು ಎಂಬ ಪ್ರಶ್ನೆ ಕಾಡುತ್ತಿದೆ.

ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ಕಾರಣ ಕಡಿಮೆ ಸಂಬಳ ಮತ್ತು ಸವಲತ್ತುಗಳು, ಕಡಿಮೆ ಅವಕಾಶಗಳು, ಪ್ರೌಢಶಾಲಾ ಸಹಶಿಕ್ಷಕರಂತೆ ನಾವೂ ಪ್ರೌಢಶಾಲೆಗಳಲ್ಲಿದ್ದರೆ, ಹೆಚ್ಚಿನ ವೇತನ ಸಿಗುತ್ತಿತ್ತು. ವೇತನ ಆಯೋಗದ ವರದಿ, ಇಲಾಖೆಯ ಎರಡು ವರದಿಗಳು ಕೆಎಟಿ ಆದೇಶಗಳು ನಮ್ಮ ಪರವಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದು ಅವರ ಅಳಲು.

ಯಾವುದೇ ಸವಲತ್ತುಗಳಿಲ್ಲದೇ ಸಾವಿರಾರು ಬಡ್ತಿ ಉಪನ್ಯಾಸಕರು ನಿವೃತ್ತಿಯಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ತಾರತಮ್ಯ ಸರಿಪಡಿಸುವಂತೆ ಸೂಚಿಸಿದ್ದಾರೆ, ಕೆಎಟಿ ವರದಿ ಕೂಡ ನಮ್ಮ ಪರವಾಗಿದೆ. ಹಾಗಿದ್ದರೂ ವೇತನ ತಾರತಮ್ಯ ಸರಿಪಡಿಸಿಲ್ಲ. ಸರ್ಕಾರ ಕೂಡಲೇ ಈ ಸಮಸ್ಯೆ ಬಗೆಹರಿಸಲಿ, ಇಲ್ಲವಾದರೆ ನಮ್ಮನ್ನು ಪ್ರೌಢಶಾಲೆಗೆ ಮತ್ತೆ ವರ್ಗಾಯಿಸಲಿ.

- ಡಿ.ಆರ್‌. ರಮೇಶ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ.

click me!