ರಾಜ್ಯಾದ್ಯಂತ 27 ರಂದು ರಸ್ತೆ ತಡೆ ಚಳವಳಿ

By Kannadaprabha News  |  First Published Oct 24, 2022, 4:42 AM IST

ಕಬ್ಬು ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ, ವರ್ತನೆಯನ್ನು ಖಂಡಿಸಿ ರಾಜ್ಯಾದ್ಯಂತ ಅ.27 ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.


  ಮೈಸೂರು (ಅ.24):  ಕಬ್ಬು ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ, ವರ್ತನೆಯನ್ನು ಖಂಡಿಸಿ ರಾಜ್ಯಾದ್ಯಂತ ಅ.27 ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, (Karnataka Govt), ಜನಪ್ರತಿನಿಧಿಗಳನ್ನು ಎಚ್ಚರಿಸಲು ರಾಜ್ಯಾದ್ಯಂತ ಅ.27ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ತಡೆ ಚಳವಳಿ, ಅ.31 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Latest Videos

undefined

ರಾಜ್ಯ ಸರ್ಕಾರ ಕಬ್ಬಿನ ಎಫ್‌ಆರ್‌ಪಿ (FRP)  ದರಕ್ಕೆ ಹೆಚ್ಚುವರಿ ದರ ನಿಗದಿಪಡಿಸಲು ಸಚಿವರು ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದೂಡುತ್ತಿರುವುದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹ. ರಾಜ್ಯದ ಕಬ್ಬು ಬೆಳೆಗಾರ ರೈತರು 4 ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಯಾವುದೇ ಶಾಸಕರು, ಸಂಸದರು, ಸಚಿವರು ಈ ಬಗ್ಗೆ ಮಾತನಾಡದೆ ಇರುವುದು ಅನುಮಾನ ಉಂಟು ಮಾಡುತ್ತಿದೆ ಎಂದು ಅವರು ದೂರಿದರು.

30 ಲಕ್ಷ ಕಬ್ಬು ಬೆಳೆಗಾರರ 40000 ಕೋಟಿ ವಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ? 5000 ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಸಂಸದರಿಗೆ ಕಬ್ಬು ಬೆಳೆಗಾರರ ಗೊಳಾಟ ಕಾಣುತ್ತಿಲ್ಲವೇ ಎಂದು ಅವರು ಕಿಡಿಕಾರಿದರು.

ಪಂಜಾಬ್‌ ರಾಜ್ಯದಲ್ಲಿ . 3800, ಉತ್ತರಪ್ರದೇಶದಲ್ಲಿ . 3500, ಗುಜರಾತ್‌ನಲ್ಲಿ . 4400 ದರ ನಿಗದಿ ಮಾಡಿದ್ದಾರೆ ಎಂಬುದು ರಾಜ್ಯ ಸರ್ಕಾರಕ್ಕೆ ವರದಿ ತರಿಸಿಕೊಂಡಿದ್ದು ತಿಳಿದ ವಿಚಾರವೇ ಆಗಿದೆ. ಇದನ್ನು ಗಮನಿಸಿ ಎಫ್‌ಆರ್‌ಪಿ ಬೆಲೆಯನ್ನ ಕನಿಷ್ಠ ಇಳುವರಿ ಟನ್‌ಗೆ . 3500 ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕಬ್ಬು ಕಟಾವು 16 ತಿಂಗಳಾಗುತಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್‌ ಆಧಾರದ ದರ ಕಡಿತ ಮಾಡಬೇಕು. ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್‌ ಕೇಸ್‌ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಸಕ್ಕರೆ ಉದ್ದಿಮೆ ಸಕ್ಕರೆ ಹಾಗೂ ಕಬ್ಬು ಬೇಸಾಯ ಸಂಪೂರ್ಣವಾಗಿ ಗಣಕೀಕರಣವಾಗಬೇಕು. ರೈತನ ಕಬ್ಬಿನ ನಾಟಿ ಒಪ್ಪಂದ, ಜೇಷ್ಠತೆ ಆಧಾರದ ಕಟಾವು ಅನುಮತಿ, ಕಬ್ಬಿನ ತೂಕ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ, ಎಲ್ಲವೂ ಗಣಕೀಕರಣವಾಗಿ ರೈತರ ಮೊಬೈಲ್‌ ಆಪ್‌ ಮೂಲಕ ನೋಂದಾಯಿಸುವ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಈಗ ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವುದು ಕಬ್ಬು ಬೆಳೆಗಾರರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್‌, ಮುಖಂಡರಾದ ಅತ್ತಹಳ್ಳಿ ದೇವರಾಜ್‌, ಬರಡನಪುರ ನಾಗರಾಜ್‌ ಇದ್ದರು.

ಜಿಲ್ಲಾ ಸಚಿವರ ಓಲೈಕೆ ಮಾಡದೆ ಗುಲಾಮರಂತೆ ನಡೆದುಕೊಳ್ಳದೆ, ಕಾನೂನು ಪಾಲನೆ ಮಾಡಿದ ಜಿಲ್ಲಾಧಿಕಾರಿಗಳನ್ನು ನೀತಿ ನಿಯಮಗಳನ್ನು ಗಾಳಿಗೆ ತೂರಿ ವರ್ಗಾವಣೆಗಳಾಗುತ್ತಿದೆ. ಇದು ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂಬುದನ್ನು ಅರಿಯಲಿ.

- ಕುರುಬೂರು ಶಾಂತಕುಮಾರ್‌, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

click me!