
ಧಾರವಾಡ (ಸೆ.27): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ನಡುವೆ ಸರಿಯಾದ ಸಮನ್ವಯತೆ ಇಲ್ಲದೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿಯಿಂದಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅ.1ರಿಂದ 4ರ ವರೆಗೆ ಸಾಲು ಸಾಲು ಪ್ರಮುಖ ಪರೀಕ್ಷೆಗಳು ನಿಗದಿಯಾಗಿದ್ದು, ಅ.1 ಮತ್ತು 3ರಂದು ನಡೆಯುವ ಪೊಲೀಸ್ ಪೇದೆಗಳ ದೈಹಿಕ ಪರೀಕ್ಷೆಯನ್ನು ತಕ್ಷಣವೇ ಮುಂದೂಡುವಂತೆ ಪರೀಕ್ಷಾರ್ಥಿಗಳು, ವಿದ್ಯಾರ್ಥಿ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ಅ.1ರಿಂದ 3ರವರೆಗೆ ಪೊಲೀಸ್ ಪೇದೆ ನೇಮಕಾತಿಯ ದೈಹಿಕ ಪರೀಕ್ಷೆ, ಅ.2ಕ್ಕೆ ಲ್ಯಾಂಡ್ ಸರ್ವೇಯರ್ (ಭೂ ಮಾಪಕರ) ಪರೀಕ್ಷೆ ಹಾಗೂ ಅ.4ಕ್ಕೆ ಗ್ರಾಮ ಆಡಳಿತಾಧಿಕಾರಿ (ವಿಎ) ಪರೀಕ್ಷೆ ಅಭ್ಯರ್ಥಿಗಳಿಗೆ ಎದುರಾಗಿವೆ.
ನಿರಂತರ ನಾಲ್ಕು ದಿನಗಳಲ್ಲಿ ದೈಹಿಕ ಪರೀಕ್ಷೆ ಹಾಗೂ 2 ಪ್ರಮುಖ ಲಿಖಿತ ಪರೀಕ್ಷೆಗಳು ನಿಗದಿಯಾಗಿವೆ. ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ ತಕ್ಷಣವೇ ದೂರಾದ ಕೇಂದ್ರಗಳಿಗೆ ಪ್ರಯಾಣಿಸಿ ಮರುದಿನವೇ ಲಿಖಿತ ಪರೀಕ್ಷೆ ಬರೆಯುವುದು ಅಭ್ಯರ್ಥಿಗಳಿಗೆ ಕಷ್ಟಸಾಧ್ಯ. ಇದರಿಂದಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಯಾವುದಾದರೂ ಒಂದೇ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡು, ಮತ್ತೊಂದನ್ನು ಕೈಬಿಡುವ ಅನಿವಾರ್ಯತೆ ಎದುರಾಗಿದೆ.
ದೈಹಿಕವಾಗಿ ದಣಿದ ಅಭ್ಯರ್ಥಿ ಮರುದಿನವೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಕೂಡಲೇ ಉನ್ನತಾಧಿಕಾರಿಗಳು ಮಧ್ಯಪ್ರವೇಶಿಸಿ ಪೊಲೀಸ್ ಪೇದೆ ದೈಹಿಕ ಪರೀಕ್ಷೆಯನ್ನು ಮುಂದೂಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿ ಸಂಘದ ಮುಖಂಡರು ಎಚ್ಚರಿಸಿದ್ದಾರೆ.