
ಬೆಂಗಳೂರಿನ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಇದೀಗ ಪ್ರವೇಶಿಸಿದೆ. ಬೆಂಗಳೂರಿನಲ್ಲೇ ಆರಂಭವಾಗಿರುವ Daxido ಆಟೋ ಮತ್ತು ಕ್ಯಾಬ್ ಬುಕ್ಕಿಂಗ್ ಸೇವೆಯನ್ನು ಪರಿಚಯಿಸಿದ್ದು, ಪ್ರಯಾಣಿಕರು ಹಾಗೂ ಚಾಲಕರಿಬ್ಬರಿಗೂ ಹೆಚ್ಚು ಪಾರದರ್ಶಕ ಅನುಭವ ನೀಡುವ ಉದ್ದೇಶ ಹೊಂದಿದೆ ಎಂದು ಕಂಪನಿ ತಿಳಿಸಿದೆ. ‘Fair rides, Fair earnings’ ಎಂಬ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ Daxido, ಚಾಲಕರಿಗೆ ಕಮಿಷನ್-ಮುಕ್ತ ಮಾದರಿಯನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಪ್ರತಿ ರೈಡ್‌ನ ದರದಿಂದ ಶೇಕಡಾವಾರು ಕಮಿಷನ್ ಕಡಿತ ಮಾಡುವ ಬದಲು, Daxido ಫ್ಲ್ಯಾಟ್ ಪ್ಲಾಟ್‌ಫಾರ್ಮ್ ಫೀ ಮಾದರಿಯನ್ನು ಬಳಸುತ್ತಿದೆ ಎಂದು ಕಂಪನಿ ಹೇಳಿದೆ.
ಡ್ರೈವರ್‌ಗಳಿಗೆ ಕಮಿಷನ್ ಇಲ್ಲ!
Daxido ಮಾದರಿಯ ಪ್ರಮುಖ ಅಂಶವೆಂದರೆ ಜೀರೋ ಕಮಿಷನ್ ಮಾದರಿ. ಅಂದರೆ, ಚಾಲಕರು ಗಳಿಸುವ ರೈಡ್ ದರದಲ್ಲಿ ಶೇಕಡಾವಾರು ಮೊತ್ತವನ್ನು ಕಮಿಷನ್ ರೂಪದಲ್ಲಿ ಕಡಿತ ಮಾಡುವುದಿಲ್ಲ. ಬದಲಾಗಿ, ಚಾಲಕರು ನಿಗದಿತ ಪ್ಲಾಟ್‌ಫಾರ್ಮ್ ಫೀ ಪಾವತಿಸುವ ಮಾದರಿಯನ್ನು ಅನುಸರಿಸಲಾಗುತ್ತದೆ. ಇದರಿಂದ ತಮ್ಮ ಗಳಿಕೆಯ ಬಗ್ಗೆ ಚಾಲಕರಿಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ.
ಪ್ರಯಾಣಿಕರಿಗೂ ಫೇರ್ ಬಗ್ಗೆ ಮೊದಲೇ ಮಾಹಿತಿ
ಪ್ರಯಾಣಿಕರಿಗೆ ಬುಕ್ಕಿಂಗ್ ಮಾಡುವ ಮುನ್ನವೇ ದರದ ಮಾಹಿತಿ ನೀಡುವ ವ್ಯವಸ್ಥೆಯನ್ನು Daxido ಹೊಂದಿದೆ. ಇದರ Price Lock ಫೀಚರ್ ಮೂಲಕ ಟ್ರಾಫಿಕ್‌ನಿಂದಾಗಿ ಪ್ರಯಾಣದ ಅವಧಿ ಹೆಚ್ಚಾದರೂ, ಬುಕ್ಕಿಂಗ್ ವೇಳೆ ತೋರಿಸಿದ ದರ ಏರಿಕೆಯಾಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಕಂಪನಿ ಹೇಳಿದೆ. ಸುರಕ್ಷತೆಗೂ ಒತ್ತು ನೀಡಲಾಗಿದ್ದು, Live Trip Sharing ಹಾಗೂ ಒಂದು ಟ್ಯಾಪ್‌ನಲ್ಲಿ ಬಳಸಬಹುದಾದ SOS ಆಯ್ಕೆಯನ್ನು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾಗಿದೆ.
ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಸೇವೆ
ಬೆಂಗಳೂರಿನ ಭಾಷಾ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು Daxido ಆ್ಯಪ್‌ನಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಆರು ಭಾಷೆಗಳಿಗೆ ಬೆಂಬಲ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಸದ್ಯ ಬೆಂಗಳೂರಿನಲ್ಲಿ ಮಾತ್ರ ಸೇವೆ
Daxido ಸದ್ಯ ಬೆಂಗಳೂರಿನಲ್ಲಿ ಆಯ್ದ ಪ್ರದೇಶಗಳಲ್ಲಿ ಆಟೋ ಮತ್ತು ಕ್ಯಾಬ್ ಬುಕ್ಕಿಂಗ್ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಇನ್ನಷ್ಟು ಭಾಗಗಳಿಗೆ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಮುಂದಿನ ಹಂತದಲ್ಲಿ ರೈಂಟಲ್ಸ್, ಪಾರ್ಸೆಲ್ ಡೆಲಿವರಿ ಹಾಗೂ ಮಹಿಳೆಯರಿಗಾಗಿ ವಿಶೇಷ ರೈಡ್ ಸೇವೆ ಸೇರಿದಂತೆ ಮತ್ತಷ್ಟು ಮೊಬಿಲಿಟಿ ಮತ್ತು ಡೆಲಿವರಿ ಸೇವೆಗಳನ್ನು ಪರಿಚಯಿಸುವ ಉದ್ದೇಶವಿದೆ ಎಂದು ತಿಳಿಸಲಾಗಿದೆ.
Daxido ಆರಂಭವಾಗಿದ್ದು ಹೇಗೆ?
Daxido ಸಂಸ್ಥಾಪಕ ನಯಾಜ್ ಫೈಯಾಜ್ ಅಹ್ಮದ್ ಅವರ ಪ್ರಕಾರ, ಬೆಂಗಳೂರಿನ ಆಟೋ ಚಾಲಕರೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವದಿಂದ ಈ ಪ್ಲಾಟ್‌ಫಾರ್ಮ್ ಕಲ್ಪನೆ ಮೂಡಿದೆ. ಚಾಲಕರು ದೀರ್ಘ ಸಮಯ ಕೆಲಸ ಮಾಡಿದರೂ ಮುಂದಿನ ರೈಡ್‌ನಿಂದ ಎಷ್ಟು ಆದಾಯ ಬರಲಿದೆ ಎಂಬುದು ಸ್ಪಷ್ಟವಾಗದಿರುವುದು ಹಾಗೂ ಪ್ರಯಾಣಿಕರು ಬುಕ್ಕಿಂಗ್‌ಗಾಗಿ ಕಾಯುವುದು, ಕ್ಯಾನ್ಸಲ್ ಮಾಡುವುದು ಮುಂತಾದ ಸಮಸ್ಯೆಗಳನ್ನು ಗಮನಿಸಿ ಈ ಮಾದರಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Daxido Technologies Services Private Limited ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಮೊಬಿಲಿಟಿ ಟೆಕ್ನಾಲಜಿ ಸ್ಟಾರ್ಟ್‌ಅಪ್ ಆಗಿದ್ದು, DPIIT-ಮಾನ್ಯತೆ ಪಡೆದ ಸ್ಟಾರ್ಟ್‌ಅಪ್ ಎಂದು ಕಂಪನಿ ತಿಳಿಸಿದೆ. ಸದ್ಯ ಇದರ ಪ್ಲಾಟ್‌ಫಾರ್ಮ್ ಸ್ವತಂತ್ರ ಚಾಲಕ-ಪಾಲುದಾರರನ್ನು ಪ್ರಯಾಣಿಕರೊಂದಿಗೆ ಸಂಪರ್ಕಿಸುವ ಮೂಲಕ ಆಟೋ ಮತ್ತು ಕ್ಯಾಬ್ ಸೇವೆ ಒದಗಿಸುತ್ತಿದೆ.