ರಾಜ್ಯಪಾಲ ಗೆಹಲೋತ್‌ ಇಂದು ಕಾರವಾರಕ್ಕೆ: ನೌಕಾನೆಲೆಯಲ್ಲಿ ಗೌರವ ಸ್ವೀಕಾರ

By Girish GoudarFirst Published Sep 17, 2022, 9:23 AM IST
Highlights

ರಾಜ್ಯಪಾಲರು ಆಗಮಿಸುತ್ತಿರುವುದರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ತೀರದ ಪಕ್ಕದಲ್ಲೇ ಇರುವ ಮಯೂರವರ್ಮ ವೇದಿಕೆಯನ್ನು ಸುಸಜ್ಜಿತವಾಗಿ ಸಿದ್ಧಪಡಿಸಲಾಗಿದ್ದು, ಪೆಂಡಾಲ್‌ ಹಾಕಲಾಗಿದೆ

ಕಾರವಾರ(ಸೆ.17):  ನಗರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಇಂದು(ಶನಿವಾರ) ಅಂತರ್‌ ರಾಷ್ಟ್ರೀಯ ಕಡಲ ಸ್ವಚ್ಛತಾ ದಿನಾಚರಣೆಗೆ ಸಕಲ ಸಿದ್ಧತೆಯಾಗಿದೆ. ಪ್ರಸಕ್ತ ವರ್ಷದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲರು ಆಗಮಿಸುತ್ತಿರುವುದರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ತೀರದ ಪಕ್ಕದಲ್ಲೇ ಇರುವ ಮಯೂರವರ್ಮ ವೇದಿಕೆಯನ್ನು ಸುಸಜ್ಜಿತವಾಗಿ ಸಿದ್ಧಪಡಿಸಲಾಗಿದ್ದು, ಪೆಂಡಾಲ್‌ ಹಾಕಲಾಗಿದೆ. ಅದರ ಎದುರು ಸಾರ್ವಜನಿಕರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸ್ವಚ್ಛತೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡು 10 ತಂಡ ರಚನೆ ಮಾಡಲಾಗಿದೆ. ಈ ತಂಡಗಳಿಗೆ ಕಾಳಿ, ಶರಾವತಿ, ಅಘನಾಶಿನಿ, ಗಂಗಾವಳಿ, ಬೇಡ್ತಿ, ಶಾಲ್ಮಲಾ, ಕಾವೇರಿ, ವರದಾ, ಕೃಷ್ಣ, ವೆಂಕಟಾಪುರ ಎಂದು ಹೆಸರನ್ನು ಇಡಲಾಗಿದೆ. ಈ ನಿಯೋಜಿತ ತಂಡಗಳಿಗೆ ಸ್ವಚ್ಛತೆ ಮಾಡಬೇಕಾದ ಸ್ಥಳಗಳನ್ನು ನಿಗದಿ ಪಡಿಸಲಾಗಿದ್ದು, ನೋಡೆಲ್‌ ಅಧಿಕಾರಿಗಳನ್ನು, ಸಂಯೋಜಕರನ್ನು ನೇಮಕ ಮಾಡಲಾಗಿದೆ.

ಕಾರವಾರ: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ

ಬಿಗಿ ಭದ್ರತೆ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬದ್ರಿನಾಥ ಮಾರ್ಗದರ್ಶನದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 2 ಡಿಎಸ್‌ಪಿ, 6 ಇನ್‌ಸ್ಪೆಕ್ಟರ್‌, 30 ಸಬ್‌ಇನ್‌ಸ್ಪೆಕ್ಟರ್‌, 300 ಕಾನ್‌ಸ್ಟೇಬಲ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಕಾರ್ಯಕ್ರಮ:

ಬೆಳಗ್ಗೆ 7.30ಕ್ಕೆ ಟಾಗೋರ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಚಾಲನೆ ನೀಡಲಿದ್ದಾರೆ. ಬಳಿಕ 9 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಪ್ರಿಯಾಂಗಾ ಎಂ., ಎಸ್‌ಪಿ ಡಾ.ಸುಮನಾ ಪೆನ್ನೇಕರ ಮೊದಲಾದವರು ಉಪಸ್ಥಿತರಿರುವರು.
ಇದಕ್ಕೂ ಮುನ್ನ ನಿನ್ನೆ(ಶುಕ್ರವಾರ) ಸಂಜೆ ಗೋವಾದಿಂದ ರಸ್ತೆ ಮಾರ್ಗದಲ್ಲಿ ಬಂದ ಅವರನ್ನು ಉತ್ತರಕನ್ನಡ ಜಿಲ್ಲಾಡಳಿತದಿಂದ ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ಗೌರವವಂದನೆ ನೀಡಿ ಸ್ವಾಗತಿಸಿಕೊಳ್ಳಲಾಯಿತು. 
 

click me!