8 ಪಿಜಿ ಕೋರ್ಸ್ ರದ್ದುಗೊಳಿಸಿದ ಸರ್ಕಾರ; ಎಂಎ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಕ್ಕೆ ಅನುಮತಿಯೇ ಇಲ್ಲ!

Sathish Kumar KH   | Kannada Prabha
Published : Sep 10, 2026, 12:10 PM IST
Karnataka Folklore University Haveri

ಸಾರಾಂಶ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರ್ಕಾರದ ಅನುಮೋದನೆ ಇಲ್ಲದೆ 2018-19ರಿಂದ ಎಂಟು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಇಲಾಖೆಯು ಈ ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ವರದಿ- ನಾರಾಯಣ ಹೆಗಡೆ

ಹಾವೇರಿ: ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೇ, ನಿಯಮಾವಳಿಗಳನ್ನೂ ರಚಿಸದೆ 2018-19ನೇ ಸಾಲಿನಿಂದ ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆಸಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೀಗ ಈ ಎಲ್ಲ ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್‌ ಸೂಚನೆ ನೀಡಿದೆ.

ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಸೆ.8ರಂದು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ನೋಟಿಸ್‌ನಲ್ಲಿ ವಿಶ್ವವಿದ್ಯಾಲಯದ ಕಾರ್ಯವೈಖರಿ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 43(2)ರ ಉಪಬಂಧಗಳನ್ನು ಉಲ್ಲಂಘಿಸಿ ಅಗತ್ಯ ಅನುಮೋದನೆ ಪಡೆಯದೇ ಕೋರ್ಸ್‌ಗಳನ್ನು ಆರಂಭಿಸಿರುವುದು ಗಂಭೀರ ಲೋಪ ಎಂದು ಸರ್ಕಾರ ತಿಳಿಸಿದೆ.

ಯಾವ್ಯಾವ ಕೋರ್ಸ್‌ಗಳು?:

ವಿಶ್ವವಿದ್ಯಾಲಯವು ಸರ್ಕಾರ ಹಾಗೂ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಆರಂಭಿಸಿದ್ದಾಗಿ ಉಲ್ಲೇಖಿಸಿರುವ ಎಂಟು ಕೋರ್ಸ್‌ಗಳೆಂದರೆ, ಎಂ.ಎ. ಕನ್ನಡ ಮತ್ತು ಜಾನಪದ, ಎಂ.ಎ. ಇಂಗ್ಲಿಷ್‌, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಸಮಾಜಶಾಸ್ತ್ರ, ಮಾಸ್ಟರ್‌ ಆಫ್‌ ಸೋಷಿಯಲ್‌ ವರ್ಕ್‌, ಮಾಸ್ಟರ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌, ಮಾಸ್ಟರ್‌ ಆಫ್‌ ವಿಷ್ಯುಯಲ್‌ ಆರ್ಟ್ಸ್‌, ಎಂ.ಎ. ಮಹಿಳಾ ಅಧ್ಯಯನ.

ಈ ಕೋರ್ಸ್‌ಗಳಿಗೆ ಮೊದಲು ನಿಯಮಾವಳಿಗಳನ್ನು ರೂಪಿಸಿ ಕುಲಾಧಿಪತಿಗಳ ಅನುಮೋದನೆ ಪಡೆಯಬೇಕಿತ್ತು. ಆದರೆ ಅಂತಹ ಅನುಮೋದನೆ ಪಡೆಯುವ ಮೊದಲೇ 2018-19ರಿಂದ ಕೋರ್ಸ್‌ಗಳನ್ನು ಆರಂಭಿಸಿ, ಬಳಿಕ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಶಿಸ್ತು ಕ್ರಮದ ಎಚ್ಚರಿಕೆ: 

ಈ ಸಂಬಂಧ ವಿಶ್ವವಿದ್ಯಾಲಯದ ವಿರುದ್ಧ ನಿಯಮಾನುಸಾರ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಇಷ್ಟೇ ಅಲ್ಲದೆ, ಸರ್ಕಾರದ ಸೂಚನೆಗಳನ್ನು ಪಾಲಿಸದೇ ವಿಳಂಬ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಕುಲಸಚಿವರಿಗೆ ನೀಡಿದ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರವೇಶಕ್ಕೆ ತಕ್ಷಣ ಬ್ರೇಕ್‌:

ಅನುಮೋದನೆ ಇಲ್ಲದೆ 2018-19ರಿಂದ ನಡೆಸಲಾಗುತ್ತಿರುವ ಎಂಟು ಕೋರ್ಸ್‌ಗಳ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಇದರ ಜತೆಗೆ ಈ ಎಂಟು ಕೋರ್ಸ್‌ಗಳಿಗೆ ಈವರೆಗೆ ಎಷ್ಟು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ ಎಂಬುದರ ವಿಷಯವಾರು ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಬೋಧಕ, ಬೋಧಕೇತರ ಸಿಬ್ಬಂದಿಗೂ ಸಂಕಷ್ಟ

ಅನುಮೋದನೆ ಇಲ್ಲದ ಕೋರ್ಸ್‌ಗಳನ್ನು ನಡೆಸಲು ವಿಶ್ವವಿದ್ಯಾಲಯದಲ್ಲಿ ನಿಯೋಜನೆ ಅಥವಾ ನೇಮಕ ಮಾಡಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ತಕ್ಷಣದಿಂದಲೇ ವಿಶ್ವವಿದ್ಯಾಲಯದ ಸೇವೆಯಿಂದ ಬಿಡುಗಡೆ ಅಥವಾ ವಜಾಗೊಳಿಸುವಂತೆ ಸೂಚಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಘಟನೋತ್ತರ ಅನುಮೋದನೆಗೆ ಪ್ರಸ್ತಾವನೆ

ವಿಶ್ವವಿದ್ಯಾಲಯವು 2024ರ ಜೂನ್‌ ಹಾಗೂ 2025ರ ಮಾರ್ಚ್‌ನಲ್ಲಿ ಈ ಕೋರ್ಸ್‌ಗಳ ಕರಡು ನಿಯಮಾವಳಿಗಳಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿದಾಗ, ಅಗತ್ಯ ಅನುಮೋದನೆ ಇಲ್ಲದೆಯೇ ಹಲವು ವರ್ಷಗಳಿಂದ ಕೋರ್ಸ್‌ಗಳು ನಡೆಯುತ್ತಿರುವ ಅಂಶ ಬಹಿರಂಗವಾಗಿದೆ. ಋಣಾತ್ಮಕ ವಿಷಗಳಿಂದಲೇ ಸುದ್ದಿಯಲ್ಲಿರುವ ಜಾನಪದ ವಿವಿಯ ಈ ಎಡವಟ್ಟಿನಿಂದ ನೂರಾರು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. 8 ವರ್ಷಗಳಿಂದ ಈ ಕೋರ್ಸ್‌ ಓದಿರುವ ವಿದ್ಯಾರ್ಥಿಗಳ ಭವಿಷ್ಯವೂ ಅತಂತ್ರವಾಗುವ ಆತಂಕ ಎದುರಾಗಿದೆ.

ನೋಟಿಸ್‌ ನೀಡಿದೆ:

8 ಕೋರ್ಸ್‌ ಅನುಮೋದನೆ ಪಡೆಯಬೇಕಿತ್ತು. ಆದರೆ, ಆಗಿನ ಕುಲಸಚಿವರು ರಾಜ್ಯಪಾಲರ ಅನುಮೋದನೆ ಪಡೆಯದೇ 8 ಕೋರ್ಸ್‌ ಆರಂಭಿಸಿದ್ದರು. ಈಗ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಆ 8 ಕೋರ್ಸ್‌ಗಳನ್ನು ಸ್ಥಗಿತ ಮಾಡುವಂತೆ ತಿಳಿಸಿ ನೋಟಿಸ್‌ ನೀಡಿದೆ. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಜಾನಪದ ವಿವಿ ಕುಲಸಚಿವ ಗುರುಪ್ರಸಾದ್‌ ತಿಳಿಸಿದರು.

PREV
Read more Articles on
click me!

Recommended Stories

ಮಂಗಳೂರು-ಕುವೈತ್ ನೇರ ವಿಮಾನ ಸೇವೆ 6 ತಿಂಗಳು ಸ್ಥಗಿತ, ಕರಾವಳಿ ಭಾಗದ ಪ್ರಯಾಣಿಕರಿಗೆ ಮುಗಿಯದ ಗೋಳು!
ಕರ್ನಾಟಕ SIR ನೋಟಿಸ್, ದೋಷಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್ ಸೇರಿ ಹಲವು ಗಣ್ಯರ ಹೆಸರು