
ಬೆಂಗಳೂರು (ಸೆ.10) ಕರ್ನಾಟಕದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ದಾಖಲೆ ಸಂಗ್ರಹ ಪಟ್ಟಿ ಮಾಡಿ ಪಟ್ಟಿ ರೆಡಿ ಮಾಡಲಾಗಿದೆ. ಈ ಪೈಕಿ ಕೆಲ ಮತದಾರರ ಹೆಸರು ಲೋಪದೋಷದ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಹೆಸರು ಮಿಸ್ ಮ್ಯಾಚ್, ಪೋಷಕರು ಹೆಸರು ಸೇರಿದಂತೆ ಕೆಲ ಸಣ್ಣ ಕಾರಣಗಳಿಂದ ಲೋಪದೋಷದ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಹೀಗೆ ಲೋಪ ಪಟ್ಟಿಯಲ್ಲಿ ಸೇರ್ಪಡೆಯಾದವರ ಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್ ಹೆಸರು ಇದೆ ಎಂದು ವರದಿಯಾಗಿದೆ. ಹೀಗಾಗಿ SIR ನೋಟಿಸ್ ನೀಡಲಾಗಿದೆ.
ಆಧಾರ್ ಸೃಷ್ಟಿಕರ್ತ ನಂದನ್ ನೀಲೆಕಣಿ, ಉದ್ಯಮಿ ನಿಖಿಲ್ ಕಾಮತ್ ಸೇರಿದಂತೆ ಹಲವು ಗಣ್ಯರಿಗೆ SIR ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 26 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 6.24 ಲಕ್ಷ ಮತದಾರರ ಹೆಸರು, ಪೋಷಕರ ಹೆಸರು, ಪೋಷಕರು ಮಕ್ಕಳ ನಡುವಿನ ವಯಸ್ಸಿನ ವ್ಯತ್ಯಾಸ ಸೇರಿದಂತೆ ಸಣ್ಣ ಕಾರಣಗಳಿಂದ ನೋಟಿಸ್ ನೀಡಲಾಗಿದೆ. ನಟ ಶಿವರಾಜ್ ಕುಮಾರ್ ಹೆಸರಿನಲ್ಲಿ ಕೆಲ ಲೋಪದೋಷಗಳು ಪತ್ತೆಯಾಗಿರುವ ಕಾರಣ ಪೂರಕ ದಾಖಲೆ ಸಲ್ಲಿಸಲು ಸೂಚಿಸಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಭಾರತ ರತ್ನ ಪುರಸ್ಕೃತ, ಪ್ರೊಫೆಸರ್ ಸಿಎನ್ಆರ್ ರಾವ್‌ಗೆ SIR ನೋಟಿಸ್ ನೀಡಿಲ್ಲ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರೊಫೆಸರ್ ರಾವ್‌ಗೆ ನೋಟಿಸ್ ನೀಡಲಾಗಿದೆ ಎಂದು ಹರಿದಾಡಿತ್ತು. ಇದರ ಬೆನ್ನಲ್ಲೇ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಭಾರತ ರತ್ನ ಪ್ರೊಫೆಸರ್ ಸಿ.ಎನ್. ರಾವ್ ಅವರ 2002ನೇ ಸಾಲಿನ 76-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಭಾಗ ಸಂಖ್ಯೆ 129ರಲ್ಲಿ ಕ್ರಮ ಸಂಖ್ಯೆ 431ರ ಮತದಾರರಾಗಿರುತ್ತಾರೆ.ಆಗ ಅವರ ಹೆಸರು ‘ರಾಮ’ ಎಂದು ನಮೂದಾಗಿತ್ತು. ಪ್ರಸ್ತುತ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಕ್ರಮ ಸಂಖ್ಯೆ 187ರಲ್ಲಿ ‘ಪ್ರೊಫೆಸರ್ ಸಿ.ಎನ್. ರಾವ್ ಎಂ’ ಎಂಬ ಹೆಸರಿನೊಂದಿಗೆ ಮತದಾರರಾಗಿ ನೋಂದಾಯಿತರಾಗಿದ್ದಾರೆ. ಅದರಂತೆ, ಕರಡು ಮತದಾರರ ಪಟ್ಟಿಯಲ್ಲಿಯೂ ಸಹ ಹೆಸರು ಸೇರ್ಪಡೆಯಾಗಿದೆ. ಮತದಾರರ ಪಟ್ಟಿಯಲ್ಲಿ ರಾಚ್ ಅವರ ಹೆಸರು ವ್ಯತ್ಯಾಸವಿದೆ. ಆದರೆ ಬೂತ್ ಮಟ್ಟದ ಅಧಿಕಾರಿ (BLO) ಅವರು ಯಾವುದೇ ನೋಟೀಸ್ ಜಾರಿ ಮಾಡದೆ ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರಿಸಲು ಶಿಫಾರಸು ಮಾಡಿದ್ದಾರೆ. ಅದರಂತೆ, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹೇಶ್ವರ್ ರಾವ್ ಹೇಳಿದ್ದಾರೆ.
ಗಣ್ಯರು, ವಿವಿಐಪಿಗಳ ಮತದಾರರ ಪಟ್ಟಿಯಲ್ಲಿ ಲೋಪ ಕಂಡು ಬಂದರೆ ಬಿಎಲ್ಒ ಮಟ್ಟದಲ್ಲಿ ಹಾಗೂ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಗಣ್ಯರು ಬಿಎಲ್ಒ, ಆಯೋಗ, ಕಚೇರಿಗೆ ಬಂದರೆ ಭದ್ರತಾ ಸಮಸ್ಯೆಗಳು ಮಾತ್ರವಲ್ಲ, ಇತರ ಮತದಾರರ ಲೋಪ ಸರಿಪಡಿಸುವ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ಬಿಎಲ್ಒಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.