ಸರಕಾರದ ಆರ್ಥಿಕ ಇಲಾಖೆ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಮಂಡಿಸಲಾದ ಪ್ರಸ್ತಾವನೆಗೆ ಬ್ರೇಕ್ ಹಾಕಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರವಾರ (ಸೆ.15): ಉತ್ತರಕನ್ನಡ ಜಿಲ್ಲೆಯಲ್ಲಿ ದಶಕಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಕೇಳಿ ಬರುತ್ತಿತ್ತು. ಕಳೆದ ಬಾರಿ ಶಿರಾಲಿಯಲ್ಲಿ ನಡೆದ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಮೃತಪಟ್ಟ ಬಳಿಕವಂತೂ ಟ್ವಿಟ್ಟರ್ ಅಭಿಯಾನ, ಪ್ರತಿಭಟನೆ, ರಕ್ತಪತ್ರ ಮುಂತಾದ ಭಾರೀ ಹೋರಾಟಗಳು ನಡೆದಿದ್ದವು. ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಕೂಡಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳೋದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಇದೀಗ ಸರಕಾರದ ಆರ್ಥಿಕ ಇಲಾಖೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಮಂಡಿಸಲಾದ ಪ್ರಸ್ತಾವನೆಗೆ ಬ್ರೇಕ್ ಹಾಕಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕೃತಿ ಶ್ರೀಮಂತವಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ದಶಕಗಳಿಂದಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಕೇಳಿಬರುತ್ತಿದೆ. ಉಡುಪಿಯ ಶಿರಾಲಿಯ ಟೋಲ್‌ಗೇಟ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ನಾಲ್ವರು ಮೃತಪಟ್ಟ ಬಳಿಕವಂತೂ ಆಸ್ಪತ್ರೆಯ ಬೇಡಿಕೆ ಹೆಚ್ಚಾಗಿತ್ತು. ಜನರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಲ್ಲದೇ, ಟ್ವಿಟ್ಟರ್ ಅಭಿಯಾನ, ಪ್ರಧಾನಿಗೆ ರಕ್ತಪತ್ರಗಳಂತಹ ಹೋರಾಟವೂ ನಡೆದಿತ್ತು. ಬಳಿಕ ಭಟ್ಕಳದ ಮುಟ್ಟಳ್ಳಿಯಲ್ಲಿ ನಡೆದ ದುರ್ಘಟನೆಯ ವೇಳೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದರು.
ಈ ಅಧಿವೇಶನದಲ್ಲಿ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಗೆ ಗ್ರೀನ್ ಸಿಗ್ನಲ್ ದೊರೆಯಬಹುದು ಅಂತಾ ಜಿಲ್ಲೆಯ ಜನರು ಕಾತುರರಾಗಿದ್ರೂ, ಸರಕಾರದ ಆರ್ಥಿಕ ಇಲಾಖೆ ನೀಡಿದ ಉತ್ತರ ಜನರ ಆಸೆಗೆ ತಣ್ಣೀರು ಎರಚಿದಂತಾಗಿದೆಯಲ್ಲದೇ, ಆಕ್ರೋಶ ಮೂಡುವಂತೆ ಮಾಡಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಇತ್ಯಾದಿ ಮೂಲ ಸೌಲಭ್ಯಗಳು ಮತ್ತು ತಗಲುವ ವೆಚ್ಚದ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
undefined
ಇದರಿಂದ ಜಿಲ್ಲೆಯ ಜನರು ಕುಪಿತಗೊಂಡಿದ್ದು, ಜಿಲ್ಲೆಯಲ್ಲಿ ನಾಲ್ಕು ಶಾಸಕರು, ಒಬ್ಬರು ಸಚಿವರು, ಒಬ್ಬರು ಸ್ಪೀಕರ್ ಇದ್ದರೂ, ಇಷ್ಟು ವರ್ಷಗಳ ಕಾಲದ ಬೇಡಿಕೆ ಈಡೇರಿಲ್ಲ. ಈ ಅಧಿವೇಶನದಲ್ಲಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಗ್ರೀನ್ ಸಿಗ್ನಲ್ ಪಡೆಯದೇ ಯಾವುದೇ ಜನಪ್ರತಿನಿಧಿಗಳು ಜಿಲ್ಲೆಗೆ ಕಾಲಿಡುವುದೇ ಬೇಡ. ತೀವ್ರ ಪ್ರತಿಭಟನೆಯ ಮೂಲಕ ಯಾವ ರೀತಿ ಪಡೆದುಕೊಳ್ಳಬೇಕೆಂದು ನಮಗೆ ತಿಳಿದಿದೆ ಎಂದು ಎಚ್ಚರಿಸಿದ್ದಾರೆ.
ಪ್ರಸ್ತುತ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದ್ರೂ, ಮತ್ತೆ ಆರ್ಥಿಕ ಇಲಾಖೆಯ ಸಹಮತಿಗೆ ಪ್ರಸ್ತಾವನೆ ಕಳುಹಿಸುವ ನಿರ್ಧಾರ ಮಾಡಲಾಗಿದೆ. ಆರ್ಥಿಕ ಇಲಾಖೆಯ ಸಹಮತಿಯ ಬಳಿಕ ಅನುದಾನ ಲಭ್ಯತೆ ಅನುಗುಣವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕ್ರಮ ಕೈಗೊಳ್ಳೋದಾಗಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರಿಂದ ಉತ್ತರ ದೊರಕಿದೆ. ಆದರೆ, ಈ ಆಸ್ಪತ್ರೆ ಸಂಬಂಧಿಸಿ ಇಂದು ಅಧಿವೇಶನದಲ್ಲಿ ಮತ್ತೆ ಶಾಸಕಿ ರೂಪಾಲಿ ನಾಯ್ಕ್ ಬೇಡಿಕೆಯಿಟ್ಟಿರುವ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿನ ವಾರ ಆರೋಗ್ಯ ಸಚಿವರ ಮುಂದೆಯೇ ಪ್ರಸ್ತಾಪಿಸಿ ಉತ್ತರ ಪಡೆಯಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೂಗು: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಅಂದಹಾಗೆ, ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಈಗಾಗಲೇ 24 ಬಾರಿ ಸರಕಾರಕ್ಕೆ ಪತ್ರ ಬರೆಯುವ ಹಿಂದಿನ ಸರಕಾರದಿಂದ ಪ್ರಸ್ತುತ ಸರಕಾರದವರೆಗೆ ಆಸ್ಪತ್ರೆಗೆ ಬೇಡಿಕೆಯಿರಿಸಿದ್ದರು. ಆದರೆ, ಸರಕಾರದ ಮಟ್ಟದಲ್ಲಿ ಈ ಬೇಡಿಕೆಗೆ ಈವರೆಗೆ ಗ್ರೀನ್ ಸಿಗ್ನಲ್ ದೊರಕಿಲ್ಲ. ಸರಕಾರದ ಆರ್ಥಿಕ ಇಲಾಖೆ ಪ್ರಸ್ತಾವನೆ ತಿರಸ್ಕರಿಸಿರುವುದರಿಂದ ಜನರು ಮತ್ತೆ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ದನಿಗೂಡಿಸಿದಲ್ಲಿ ಆಸ್ಪತ್ರೆ ನಿರ್ಮಾಣ ಸಾಧ್ಯ. ಆದ್ರೆ, ಮತ ಕೇಳುವ ಸಮಯದಲ್ಲಿ ನೀಡುವ ಭರವಸೆ, ಅಧಿಕಾರ ದೊರೆತ ಬಳಿಕ ಜನಪ್ರತಿನಿಧಿಗಳಿಗೆ ಮರೆತು ಹೋಗುತ್ತದೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಆದ್ರೆ, ಈ ಆಸ್ಪತ್ರೆ ಜಿಲ್ಲೆಯಲ್ಲಿ ನಿರ್ಮಾಣವಾಗದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಜನರು ಎಚ್ಚರಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಹೆಚ್ಚಿದ ಕೂಗು..!
ಒಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯನ್ನು ಸರಕಾರದ ಆರ್ಥಿಕ ಇಲಾಖೆ ತಿರಸ್ಕರಿಸಿರುವುದರಿಂದ ಸರಕಾರ ಮತ್ತೆ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಾರಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ತಪ್ಪಿದಲ್ಲಿ ಮುಂದಿನ ಚುನಾವಣೆಯ ವೇಳೆ ಸರಕಾರಕ್ಕೆ ಕಂಟಕ ತಪ್ಪಿದ್ದಲ್ಲ.