Revenue Department: ಕಂದಾಯ ಇಲಾಖೆ ನಿರ್ಲಕ್ಷ್ಯ; ಹಾವೇರಿ ಸಮಾವೇಶ ಕಳೆದು 6 ತಿಂಗಳಾದ್ರೂ ಶೇ. 50 ಬಡವರ ಕೈಗೆ ಸಿಕ್ಕಿಲ್ಲ ಹಕ್ಕು ಪತ್ರ?

Published : Aug 28, 2026, 08:06 PM IST
E-Swattu

ಸಾರಾಂಶ

ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದ ಆರು ತಿಂಗಳ ನಂತರವೂ, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ 9 ಜಿಲ್ಲೆಗಳ ಶೇ. 50ರಷ್ಟು ಬಡವರಿಗೆ 'ಇ-ಸ್ವತ್ತು' ಹಕ್ಕು ಪತ್ರಗಳು ತಲುಪಿಲ್ಲ. ಈ ವಿಳಂಬದಿಂದಾಗಿ ಬಡವರು ಬ್ಯಾಂಕ್ ಸಾಲ ಪಡೆಯಲು ಮತ್ತು ತಮ್ಮ ಮನೆಯ ಕನಸನ್ನು ನನಸಾಗಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ದಾಖಲೆ ರಹಿತ ವಾಸಸ್ಥಳಗಳಾಗಿದ್ದ 6,500 ಹಳ್ಳಿಗಳ ಪೈಕಿ 4,500 ಗ್ರಾಮಗಳನ್ನು ‘ಕಂದಾಯ ಗ್ರಾಮ’ಗಳನ್ನಾಗಿ ಪರಿವರ್ತಿಸಿ, ತಲೆತಲಾಂತರದಿಂದ ಸ್ವಂತ ಮನೆಯಿದ್ದರೂ ಕಾಗದಪತ್ರಗಳಿಲ್ಲದೆ ಬದುಕುತ್ತಿದ್ದ ಬಡಜನರಿಗೆ ಭೂಮಿಯ ಹಕ್ಕನ್ನು ಒದಗಿಸಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಕ್ರಾಂತಿಕಾರಿ ಹೆಜ್ಜೆ. ಈ ಮಹತ್ಕಾರ್ಯದ ಭಾಗವಾಗಿ ಕಳೆದ ಫೆಬ್ರವರಿಯಲ್ಲಿ ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ, 9 ಜಿಲ್ಲೆಗಳ ಜನರಿಗೆ ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ವೇದಿಕೆಯ ಭಾಷಣ, ಚಪ್ಪಾಳೆ ಮತ್ತು ಫೋಟೋ ಪೋಸ್‌ಗಳು ಮುಗಿದ ನಂತರ ಕಂದಾಯ ಇಲಾಖೆಯ ಅಸಲಿ ನಾಟಕ ಮತ್ತು ಆಡಳಿತ ವೈಫಲ್ಯ ಬಯಲಾಗಿದೆ.

ಡಿಜಿಟಲ್ ಕಾಗದದ ಶಕ್ತಿ ಮತ್ತು ವಾಸ್ತವ ಸ್ಥಿತಿ!

ಕಂದಾಯ ಇಲಾಖೆ ರೂಪಿಸಿರುವ ಈ ಇ-ಸ್ವತ್ತು ಆಧಾರಿತ ಡಿಜಿಟಲ್ ಹಕ್ಕು ಪತ್ರವು ಬರಿ ಬಿಳಿ ಕಾಗದವಲ್ಲ. ಇದು ಆನ್‌ಲೈನ್‌ನಲ್ಲಿ ಲಭ್ಯವಿರುವ ಫಾರಂ 9 ಮತ್ತು 11 ರನ್ನೊಳಗೊಂಡ ಅತ್ಯಂತ ಶಕ್ತಿಶಾಲಿ ಹಾಗೂ ಅಧಿಕೃತ ದಾಖಲೆಯಾಗಿದೆ. ಈ ದಾಖಲೆ ಕೈಯಲ್ಲಿದ್ದರೆ ಒಬ್ಬ ಸಾಮಾನ್ಯ ಬಡವ ಬ್ಯಾಂಕಿನಿಂದ ಗೌರವಯುತವಾಗಿ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು, ಮಕ್ಕಳ ಹೆಸರಿಗೆ ಆಸ್ತಿ ಹಸ್ತಾಂತರಿಸಬಹುದು ಮತ್ತು ತಲೆತಲಾಂತರದ ಆಸ್ತಿ ವಿವಾದಗಳಿಗೆ ಮುಕ್ತಿ ಕಾಣಬಹುದು. ಅಂದರೆ, ಯೋಜನೆ ರೂಪಿಸಿ ಕಾಗದ ಸಿದ್ಧಪಡಿಸಿದ ಸರ್ಕಾರದ ಕೆಲಸ ನೂರಕ್ಕೆ ನೂರರಷ್ಟು ಮುಗಿದಿದೆ. ಆದರೆ, ಅದನ್ನು ಅರ್ಹರ ಕೈಗೆ ತಲುಪಿಸಬೇಕಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಸ್ಟಮ್ ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

6 ತಿಂಗಳು ಕಳೆದರೂ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ ಹಕ್ಕು ಪತ್ರಗಳು!

ಕಳೆದ 6 ತಿಂಗಳಿಂದ ಆನ್‌ಲೈನ್‌ನಲ್ಲಿ ಇ-ಸ್ವತ್ತು ಜನರೇಟ್ ಆಗಿ, ಕಂಪ್ಯೂಟರ್‌ನಿಂದ ಮುದ್ರಿತಗೊಂಡ ಹಕ್ಕು ಪತ್ರಗಳು ಕಂದಾಯ ಕಚೇರಿಗಳ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಅರ್ಧ ವರ್ಷ ಕಳೆದರೂ ಆ 9 ಜಿಲ್ಲೆಗಳಲ್ಲಿ ಅಂದ್ರೆ, ಹಾವೇರಿ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ಚಿತ್ರದುರ್ಗ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಶೇಕಡಾ 50 ರಷ್ಟು ಬಡಜನರಿಗೆ ಇಂದಿಗೂ ಹಕ್ಕು ಪತ್ರಗಳು ತಲುಪಿಲ್ಲ. ಧಾರವಾಡ ತಾಲೂಕಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಆಶ್ರಯ ಪೋರ್ಟಲ್‌ನಲ್ಲಿ ಬರೀ ಎರಡೇ ಗ್ರಾಮಗಳ ಹೆಸರು ಕಾಣಿಸುತ್ತಿದೆ. ಸರ್ವರ್‌ನ ಗೊಂದಲ ಹಾಗೂ ಮಾಹಿತಿ ಕೊರತೆಯಿಂದಾಗಿ ಇಡೀ ತಾಲೂಕಿನ ನೂರಾರು ಹಳ್ಳಿಗಳ ಬಡಜನರು ಪ್ರತಿದಿನ ಕಂದಾಯ ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.

ಇರುವ ಅನುಮಾನವೇನು?

ಜಿಲ್ಲಾಧಿಕಾರಿಗಳು (DC) ಅಥವಾ ಉಪವಿಭಾಗಾಧಿಕಾರಿಗಳು (AC) ಹೋಬಳಿ ಮಟ್ಟದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ವಿತರಿಸೋಣ ಎಂಬ ಸಬೂಬು ಹೇಳಿ ಇವುಗಳನ್ನು ತಡೆಹಿಡಿದಿದ್ದಾರೆಯೇ ಎಂಬ ಬಲವಾದ ಅನುಮಾನ ಮೂಡುತ್ತಿದೆ. ಕಾನೂನುಬದ್ಧವಾಗಿ 15 ದಿನದೊಳಗೆ ಸಾರ್ವಜನಿಕ ಸೇವೆ ಒದಗಿಸಬೇಕಾದ ‘ಸಕಾಲ’ ಕಾಯ್ದೆಯ ನಿಯಮಗಳಿರುವಾಗ, ಬಡವನ ಹಕ್ಕು ಪತ್ರವನ್ನು ಕಾಯ್ದಿರಿಸಲು ಅಧಿಕಾರಿಗಳಿಗಿರುವ ಅಡೆತಡೆಯಾದರೂ ಏನು? ಜನಪ್ರತಿನಿಧಿಗಳ ಕಾಲ್-ಶೀಟ್ ಹಾಗೂ ಪ್ರೋಟೋಕಾಲ್ ನಾಟಕಕ್ಕಾಗಿ ಬಡಜನರು 6 ತಿಂಗಳಿಂದ ಅಲೆಯಬೇಕೇ? ಬ್ಯಾಂಕ್ ಸಾಲ ಸಿಗದೆ ಬಡವನ ಸ್ವಂತ ಮನೆಯ ಕನಸು ಕರಗಿಹೋಗುತ್ತಿದ್ದು, ಅಧಿಕಾರಿಗಳ ‘ಶೋ ಆಫ್’ ಸಂಸ್ಕೃತಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಯೋಜನೆಗಳನ್ನು ಪ್ರಕಟಿಸುವುದು ಸರ್ಕಾರದ ಕೆಲಸವಾದರೆ, ಅದನ್ನು ಕಾಲಮಿತಿಯಲ್ಲಿ ಬಡವನ ಕೈಗೆ ತಲುಪಿಸುವುದು ಆಡಳಿತ ಯಂತ್ರದ ಹೊಣೆ. ಆದ್ದರಿಂದ ಇನ್ನಾದರೂ ಹಕ್ಕು ಪತ್ರ ಸಿಗುತ್ತೋ ಏನೋ ಎನ್ನುವುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

226 ಸೇತುವೆ, 57 ಸುರಂಗ, 108 ತಿರುವು, ಪ್ರಕೃತಿ ನಡುವೆ ಬೆಂಗಳೂರು ಮಂಗಳೂರು ವಂದೇ ಭಾರತ್ ಬ್ಯೂಟಿ
B Nagendra Resign: ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಗಳಗಳನೇ ಅತ್ತ ಸಚಿವ ನಾಗೇಂದ್ರ!