ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ್ದು, 38 ವರ್ಷದ ಕುರುಬರ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಡಿ.10): ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ್ದು, 38 ವರ್ಷದ ಕುರುಬರ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಜಿ. ಹಾವನೂರು ಆಯೋಗ ಇವರನ್ನು ಕಾಡು ಕುರುಬರೆಂದು ಪರಿಗಣಿಸಿತ್ತು. ಆದರೆ ಇವರುಗಳು ಬೆಟ್ಟ ಕುರುಬರು ಎಂದೇ ಬರೆಯುತ್ತಿದ್ದ ಕಾರಣ ಎಸ್ಟಿ ಸೌಲಭ್ಯ ದೊರಕುತ್ತಿರಲಿಲ್ಲ. ಮೋದಿ ಸರ್ಕಾರ ಇವರನ್ನು ಎಸ್ಟಿಗೆ ಸೇರಿಸುವ ಮಹತ್ವದ ತೀರ್ಮಾನ ಮಾಡಿದೆ ಎಂದರು.
undefined
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕುರುಬರ ಮತ್ತು ಕುರಿಗಾಹಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂಬ ಉದ್ದೇಶದಿಂದ "ಅಮೃತ್ ಸ್ವಾಭಿಮಾನಿ ಕುರಿಗಾಯಿ" ಯೋಜನೆಯನ್ನು ಜಾರಿ ಮಾಡಿದೆ. ರಾಜ್ಯದ್ಯಾಂತ ಈ ಯೋಜನೆಯಡಿ 20 ಸಾವಿರ ಕುರುಬರು ಮತ್ತು ಕುರಿಗಾಹಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಒಬ್ಬ ಕುರಿಗಾಹಿಗೆ 20 ಕುರಿ/ಮೇಕೆ ಮತ್ತು 1 ಟಗರು/ಹೋತ ಇರುವ ಒಂದು ಘಟಕಕ್ಕೆ 1.75 ಲಕ್ಷ ಹಣ ಮಂಜೂರು ಮಾಡಲಾಗುತ್ತದೆ. ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಉದ್ದೇಶಕ್ಕಾಗಿ 354.50 ಕೋಟಿ ಬಿಡುಗಡೆ ಮಾಡಿ, ಘಟನೋತ್ತರ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
ಕನಕ ಮೂರ್ತಿ ಪ್ರತಿಷ್ಠಾಪನೆ: ಹುನಗುಂದ ಶಾಸಕರ ನಡೆಗೆ ಖಂಡನೆ, ಕುರುಬ ಸಮಾಜದಿಂದ ತಕ್ಕ ಪಾಠದ ಎಚ್ಚರಿಕೆ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕುರುಬರ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದೆ. ಕುರಿ/ಮೇಕೆ ಸಾಕಾಣಿಕೆ ಅಭಿವೃದ್ಧಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ 100 ಕುರಿ/ಮೇಕೆ ಮತ್ತು 5 ಟಗರು/ಹೋತ ಇರುವ ಘಟಕಕ್ಕೆ 20 ಲಕ್ಷ ಮೊತ್ತದ ಪ್ರಾಜೆಕ್ಟ್ ನಿಗದಿ ಮಾಡಿದ್ದು, ಇದರಲ್ಲಿ ಶೇಕಡ 50 ರಷ್ಟು ಅಂದ್ರೆ 10 ಲಕ್ಷ ಸಹಾಯಧನ ಮತ್ತು ಇನ್ನುಳಿದ 10 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರಾತಿ ಮಾಡುವುದಾಗಿ ಘೋಷಣೆ ಮಾಡಿದೆ ಎಂದು ಮಾಹಿತಿ ನೀಡಿದರು.
Karnataka Assembly Elections: ಒಕ್ಕಲಿಗ ಕೋಟೆಯಲ್ಲಿ ಡಿಕೆ ಢಮರುಗ, ಕುರುಬರ ಕೋಟೆಯಲ್ಲಿ ಸಿದ್ದು ಸದ್ದು
ಇದೇ ರೀತಿ 200 ಕುರಿ/ಮೇಕೆ ಮತ್ತು 10 ಟಗರು/ಹೋತ ಇರುವ ಯೋಜನಾ ಘಟಕಕ್ಕೆ 40 ಲಕ್ಷ, 300 ಕುರಿ/ಮೇಕೆ ಮತ್ತು 15 ಟಗರು/ಹೋತ ಇರುವ ಯೋಜನಾ ಘಟಕಕ್ಕೆ 60 ಲಕ್ಷ, 400 ಕುರಿ/ಮೇಕೆ ಮತ್ತು 20 ಟಗರು/ಹೋತ ಇರುವ ಯೋಜನಾ ಘಟಕಕ್ಕೆ 80 ಲಕ್ಷ ಮತ್ತು 500 ಕುರಿ/ಮೇಕೆ ಮತ್ತು 25 ಟಗರು/ಹೋತ ಇರುವ ಯೋಜನಾ ಘಟಕಕ್ಕೆ 100 ಲಕ್ಷ ಯೋಜನಾ ವೆಚ್ಚ (ಪ್ರಾಜೆಕ್ಟ್ ಕಾಸ್ಟ್) (PROJECT COST) ನಿಗದಿ ಮಾಡಿದ್ದು, ಎಲ್ಲಾ ಘಟಕಕ್ಕೂ ಶೇಕಡ 50 ರಷ್ಟು ಸಹಾಯಧನ ಮತ್ತು ಶೇಕಡ 50 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರಾತಿ ಮಾಡುವ ಯೋಜನೆ ಜಾರಿ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುರುಬರ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಬಿ ಎಂ ಸತೀಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಲ್ ಆನಂದಪ್ಪ,ಕುಂದುವಾಡ ಗಣೇಶಪ್ಪ,ಕೆ.ಹೇಮಂತಕುಮಾರ್,ಹೆಚ್.ಎನ್ ಗುರುನಾಥ್,ಅಡಾಣಿ ಸಿದ್ದಪ್ಪ ಉಪಸ್ಥಿತರಿದ್ದರು.