ಗಣಿನಾಡು, ಬಿಸಿಲೂರು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ಬಿಸಿ ತಾರಕಕ್ಕೇರಿದೆ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಚತುಷ್ಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ.
(ಕೆ.ಎಂ.ಮಂಜುನಾಥ್)
ಬಳ್ಳಾರಿ (ಮೇ 1, 2023): ಗಣಿನಾಡು, ಬಿಸಿಲೂರು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ಬಿಸಿ ತಾರಕಕ್ಕೇರಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಈ ಬಾರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಅಭ್ಯರ್ಥಿಗಳು ಸಹ ರಾಜಕೀಯ ಭವಿಷ್ಯಕ್ಕಾಗಿ ಅಖಾಡ ಪ್ರವೇಶಿಸಿದ್ದು, ಚುನಾವಣಾ ಅಖಾಡ ಮತ್ತಷ್ಟುರಂಗೇರಿದೆ. ಪ್ರಚಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸಹ ಹಿಂದೆ ಬಿದ್ದಿಲ್ಲ. ಹೀಗಾಗಿ, ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಚತುಷ್ಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ.
ಬಳ್ಳಾರಿ ನಗರ: ಕಾಂಗ್ರೆಸ್‌ಗೆ ತೊಡಕಾದ ಅನಿಲ್ ಲಾಡ್
ಕೆಆರ್‌ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತಗೊಂಡು ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿರುವ ಮಾಜಿ ಶಾಸಕ ಅನಿಲ್ ಲಾಡ್ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಕಂಡು ಬರುತ್ತಿದೆ. ಲಾಡ್ ತೆಗೆದುಕೊಳ್ಳುವ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ತೊಡಕಾದರೆ ಅಚ್ಚರಿಯಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ಭರತ ರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಿ ಜಿ.ಸೋಮಶೇಖರ ರೆಡ್ಡಿ ಸ್ಪರ್ಧೆಯಲ್ಲಿದ್ದು, ಕೋಟಿ ಕುಳಗಳು ಈ ಬಾರಿ ಸ್ಪರ್ಧೆಯಲ್ಲಿರುವುದರಿಂದ ಅಖಾಡ ರಂಗು ಪಡೆದುಕೊಂಡಿದೆ. ಕೈ-ಕಮಲ-ಕೆಆರ್‌ಪಿಪಿ ಪಕ್ಷಗಳು ರೆಡ್ಡಿ ಸಮುದಾಯಕ್ಕೆ ಟಿಕೆಟ್ ನೀಡಿದ್ದು, ಈ ಮೂವರ ನಡುವೆ ಜೆಡಿಎಸ್‌ನ ಲಾಡ್ ಗೆಲುವಿಗೇನು ಕಮಾಲ್ ಮಾಡುತ್ತಾರೆ ಕಾದು ನೋಡಬೇಕಿದೆ.
ಇದನ್ನು ಓದಿ: ಕ್ಷೇತ್ರ ಸಮೀಕ್ಷೆ ವಿಜಯಪುರ: ಕಮಲ ಬಿಗಿ ಹಿಡಿತದಿಂದ ಪಾರಾಗಲು ‘ಕೈ’ ಕಸರತ್ತು
ಸಿರುಗುಪ್ಪ: ಕೈ-ಕಮಲದ ಗೆಲುವಿಗೆ ರೆಡ್ಡಿ ಪಕ್ಷದ ಅಡ್ಡಿ
ಹಾಲಿ ಬಿಜೆಪಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರುದ್ಧ ಸಡ್ಡು ಹೊಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ನಾಗರಾಜ್, ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹೆಸರು. ಕಳೆದ ಬಾರಿ ಚುನಾವಣೆಯಿಂದ ದೂರ ಉಳಿದಿದ್ದ ನಾಗರಾಜ್, ಈ ಬಾರಿ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಈ ಹಿಂದೆ ಶಾಸಕರಾಗಿದ್ದಾಗ ತಮ್ಮ ಪಾಡಿಗೆ ತಾವಿದ್ದು ಕ್ಷೇತ್ರದ ಕೆಲಸ ಮಾಡಿಕೊಂಡಿದ್ದ ನಾಗರಾಜ್‌ಗೆ ಗೆಲುವಿನ ವಿಶ್ವಾಸ ಹೆಚ್ಚು. ಸತತ ಗೆಲುವಿನ ರುಚಿ ನೋಡಿರುವ ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ, ಕ್ಷೇತ್ರದ ಪ್ರಗತಿಗೆ ಕೈಗೊಂಡಿರುವ ಕೆಲಸಗಳಿಂದ ಗೆಲುವಿನ ಹಾದಿ ಸುಗಮವಾಗಲಿದೆ ಎಂಬ ಅಚಲ ವಿಶ್ವಾಸ ಹೊಂದಿದ್ದಾರೆ. ಕೆಆರ್‌ಪಿಪಿ ಅಭ್ಯರ್ಥಿ ಗಮನಾರ್ಹ ಮತಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಕೈ-ಕಮಲ ಅಭ್ಯರ್ಥಿಗಳ ಸೋಲು-ಗೆಲುವಿಗೆ ಕೆಆರ್‌ಪಿಪಿ ಕಾರಣವಾದರೂ ಅಚ್ಚರಿಯಿಲ್ಲ.
ಕಂಪ್ಲಿ: ಗಣೇಶ್ ಗೆಲುವಿಗೆ ಸುರೇಶ್ ಬಾಬು ಅಡ್ಡಿ
ಜಿಲ್ಲಾ ಸಚಿವ ಬಿ.ಶ್ರೀರಾಮುಲು ಅಳಿಯ ಟಿ.ಎಚ್.ಸುರೇಶ್‌ಬಾಬು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಹಾಲಿ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಮತ್ತೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜು ನಾಯಕ್ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಸುರೇಶ್‌ಬಾಬು ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಜತೆಗೆ ಮಾವ ಶ್ರೀರಾಮುಲು ವರ್ಚಸ್ಸು ಗೆಲುವಿಗೆ ಸಹಾಯಕವಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದಾಗಲೂ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವುದರಿಂದ ತಮ್ಮ ಗೆಲುವು ನಿಶ್ಚಿತ ಎಂಬ ಅಪಾರ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಗಣೇಶ್‌ರದ್ದು. ಜೆಡಿಎಸ್‌ನ ರಾಜು ನಾಯಕ್, ಕ್ಷೇತ್ರದಲ್ಲಿ ಚುರುಕಾಗಿ ಓಡಾಟ ನಡೆಸಿದ್ದು, ಹೆಚ್ಚಿನ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಬಳ್ಳಾರಿಗೆ ಪ್ರವೇಶ ಇಲ್ಲದ್ದಕ್ಕೆ ಎಲ್‌ಇಡಿ ಮೋದಿ ಜನಾರ್ದನ ರೆಡ್ಡಿ..!
ಬಳ್ಳಾರಿ ಗ್ರಾಮೀಣ: ಕುತೂಹಲ ಮೂಡಿಸಿದ ರಾಮುಲು ಸ್ಪರ್ಧೆ
ಜಿಲ್ಲಾ ಸಚಿವ ಬಿ.ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರ ಈ ಬಾರಿ ಹೆಚ್ಚು ಕುತೂಹಲ ಮೂಡಿಸಿದೆ. ಜೆಡಿಎಸ್ ಈ ಕ್ಷೇತ್ರದ ಅಖಾಡ ಪ್ರವೇಶಿಸಿಲ್ಲ. ಹೀಗಾಗಿ, ಕೈ-ಕಮಲದ ನಡುವೆಯೇ ಜಿದ್ದಾಜಿದ್ದಿ. ಶ್ರೀರಾಮುಲುಗೆ ಎದುರಾಳಿಯಾಗಿ ಕಾಂಗ್ರೆಸ್‌ನ ಹಾಲಿ ಶಾಸಕ ಬಿ.ನಾಗೇಂದ್ರ ಕಣಕ್ಕಿಳಿದಿದ್ದು, ಶ್ರೀರಾಮುಲು ಅವರಂತೆ ಇವರೂ ಕೂಡ ಜನಾರ್ದನ ರೆಡ್ಡಿ ಗರಡಿಯಲ್ಲಿ ಪಳಗಿದವರು. ಹೀಗಾಗಿ, ಶ್ರೀರಾಮುಲು ಅವರಿಗೆ ಎದಿರೇಟು ನೀಡಿದರೂ ಅಚ್ಚರಿಯಿಲ್ಲ. ಮುಸ್ಲಿಂ, ಕುರುಬ, ಪರಿಶಿಷ್ಟ ಪಂಗಡದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾಂಗ್ರೆಸ್‌ಗೆ ಗೆಲುವಿನ ವಿಶ್ವಾಸ ಹೆಚ್ಚು. ಬಿಜೆಪಿ, ಪರಿಶಿಷ್ಟ ಪಂಗಡ ಹಾಗೂ ಲಿಂಗಾಯತ ಸೇರಿದಂತೆ ಸಂಪ್ರದಾಯದ ಮತಗಳನ್ನು ಹೆಚ್ಚು ನೆಚ್ಚಿಕೊಂಡಿದೆ. ಜೊತೆಗೆ, ಶ್ರೀರಾಮುಲು ಅವರ ವರ್ಚಸ್ಸು ಗೆಲುವು ತಂದು ಕೊಡಲಿದೆ ಎಂಬ ವಿಶ್ವಾಸ ಹೊಂದಿದೆ.
ಸಂಡೂರು: ಕೈ, ಕಮಲ, ಕೆಆರ್‌ಪಿಪಿ ತ್ರಿಕೋನ ಸ್ಪರ್ಧೆ
ಬಳ್ಳಾರಿ ಜಿಲ್ಲೆಯ ಪೈಕಿ ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತಿ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ‘ಕೈ’ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುವ ಇ.ತುಕಾರಾಂ ಸತತ ಗೆಲುವಿನ ಸರದಾರ ಎನಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಗೆಲುವಿನ ಕೋಟೆ ಛಿದ್ರಗೊಳಿಸಲು ಬಿಜೆಪಿ ಹಾಗೂ ಕೆಆರ್‌ಪಿಪಿ ಸಮರ ಸಾರಿವೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರಾಘವೇಂದ್ರ ಅವರು ಕೋವಿಡ್‌ನಲ್ಲಿ ಮೃತಪಟ್ಟಿದ್ದರಿಂದ, ಅವರ ಪತ್ನಿ ಶಿಲ್ಪಾಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ದಿವಾಕರ್, ಕೆಆರ್‌ಪಿಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಹಾಗೂ ಕೆಆರ್‌ಪಿಪಿ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಣಿಸಲು ಭಾರೀ ಕಸರತ್ತು ನಡೆಸಿವೆ. ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಹೊಂದಿರುವ ಮಾಜಿ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿಸಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದರಿಂದ ಇದುವೇ ಗೆಲುವಿಗೆ ಬಲ ನೀಡಲಿದೆ ಎಂಬ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇದೆ.
ಇದನ್ನೂ ಓದಿ: ಕುಸಿದು ಬಿದ್ದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ! ಬಿಸಿಲಿನ ತಾಪ ಲೆಕ್ಕಕ್ಕೇ ಇಲ್ಲ!
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಕಂಪ್ಲಿ: ಎಲೆಕ್ಷನ್ ಅಖಾಡದಲ್ಲಿ ಕರ್ನಾಟಕದ ಏಕೈಕ ಮಂಗಳಮುಖಿ ಟಿ. ರಾಮಕ್ಕ..!