ಕ್ಷೇತ್ರ ಸಮೀಕ್ಷೆ ವಿಜಯಪುರ: ಕಮಲ ಬಿಗಿ ಹಿಡಿತದಿಂದ ಪಾರಾಗಲು ‘ಕೈ’ ಕಸರತ್ತು

By Kannadaprabha News  |  First Published May 1, 2023, 1:48 PM IST

2018ರ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಮೂರು ಕಡೆ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಜಯಗಳಿಸಿತ್ತು


(ರುದ್ರಪ್ಪ ಆಸಂಗಿ)
ವಿಜಯಪುರ (ಮೇ 1, 2023) : 2018ರ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಮೂರು ಕಡೆ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಜಯಗಳಿಸಿತ್ತು. ಆ ಮೂಲಕ ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಬಿಗಿ ಹಿಡಿತ ಕಾಯ್ದುಕೊಂಡಿದೆ. ಬಿಜೆಪಿಯ ಬಿಗಿಹಿಡಿತ ಸಡಿಲುಗೊಳಿಸಿ, ಗತವೈಭವವನ್ನು ಮರಳಿ ಪಡೆಯುವುದು ಕಾಂಗ್ರೆಸ್ಸಿಗೆ ಈಗ ದೊಡ್ಡ ಸವಾಲಾಗಿದೆ.

ವಿಜಯಪುರ ನಗರ: ಯತ್ನಾಳ್‌ಗೆ ಮುಸ್ಲಿಂ ಅಭ್ಯರ್ಥಿ ಸವಾಲು
ಹಿಂದು ಫೈರ್‌ ಬ್ರ್ಯಾಂಡ್‌ ಖ್ಯಾತಿಯ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈ ಬಾರಿಯೂ ಬಿಜೆಪಿಯಿಂದ ಕಣದಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ರೂ.ಗಳನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಕಳೆದ ಬಾರಿ ಕೇವಲ 6 ಸಾವಿರ ಮತಗಳ ಅಂತರಿಂದ ಸೋಲು ಅನುಭವಿಸಿದ ಕಾಂಗ್ರೆಸ್ಸಿನ ಅಬ್ದುಲ್‌ ಹಮೀದ ಮುಶ್ರೀಫ್‌ಗೆ ಮತ್ತೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಮುಶ್ರೀಫ್‌ ಅವರು ಸೋಲಿನ ಅನುಕಂಪದ ಮತ ಪಡೆದು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕ್ಷೇತ್ರದಲ್ಲಿ ಹಿಂದು - ಮುಸ್ಲಿಂ ಮತಗಳು ಸಮ, ಸಮನಾಗಿವೆ. ಜೆಡಿಎಸ್‌ನಿಂದ ಬಿ.ಎಚ್‌.ಮಹಾಬರಿ, ಆಮ್‌ ಆದ್ಮಿ ಪಾರ್ಟಿಯಿಂದ ಹಾಸಿಂಪೀರ ವಾಲೀಕಾರ ಕಣದಲ್ಲಿದ್ದಾರೆ. ಆದರೆ, ಯತ್ನಾಳ ಹಾಗೂ ಮುಶ್ರೀಫ್‌ ಮಧ್ಯೆ ನೇರ ಹಣಾಹಣಿ ಇದೆ.

Tap to resize

Latest Videos

ಇದನ್ನು ಓದಿ: ಕ್ಷೇತ್ರ ಸಮೀಕ್ಷೆ ​ಬಳ್ಳಾರಿ: ಗಣಿನಾಡಲ್ಲಿ ರೆಡ್ಡಿ ಪ್ರವೇಶದಿಂದ ಚತುಷ್ಕೋನ ಸಮರ

ಬಬಲೇಶ್ವರ: ಎಂಬಿಪಾ, ವಿಜುಗೌಡ ನೇರ ಹಣಾಹಣಿ
ಕಾಂಗ್ರೆಸ್ಸಿನ ಮಾಜಿ ಸಚಿವ, ಹಾಲಿ ಶಾಸಕ ಎಂ.ಬಿ.ಪಾಟೀಲ ಕಣಕ್ಕಿಳಿದಿರುವ ಕ್ಷೇತ್ರವಿದು. ತಿಕೋಟಾ ಕ್ಷೇತ್ರದಿಂದ ಎರಡು ಬಾರಿ ಹಾಗೂ ಬಬಲೇಶ್ವರದಿಂದ ಮೂರು ಬಾರಿ ಗೆದ್ದಿರುವ ಎಂ.ಬಿ.ಪಾಟೀಲ ಕೂಡು ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಪಂಚಮಸಾಲಿ ಸಮುದಾಯದ ವಿಜುಗೌಡ ಪಾಟೀಲ ಅವರು ಮತ್ತೆ ಬಿಜೆಪಿಯಿಂದ ಟಕ್ಕರ್‌ ನೀಡಲು ಸಜ್ಜಾಗಿದ್ದಾರೆ. ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕೆಲಸಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ವಿಜುಗೌಡ ಅವರು ಮೂರು ಬಾರಿ ಸೋತಿರುವ ತಮ್ಮನ್ನು ಈ ಬಾರಿ ಗೆಲ್ಲಿಸಿ ಎನ್ನುತ್ತಾ ಅನುಕಂಪದ ಮತ ಯಾಚಿಸುತ್ತಿದ್ದಾರೆ. ಜೆಡಿಎಸ್‌ನಿಂದ ಬಸವರಾಜ ಹೊನವಾಡ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಪಂಚಮಸಾಲಿ ಸಮುದಾಯ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದರೂ, ಹಿಂದಿನ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಜಾತಿ ಕೆಲಸ ಮಾಡಿಲ್ಲ. ಪಾಟೀಲ, ವಿಜುಗೌಡ ನಡುವೆ ನೇರ ಹಣಾಹಣಿಯಿದೆ.

ಸಿಂದಗಿ: ರಮೇಶ ಭೂಸನೂರಗೆ ಟಫ್‌ ಫೈಟ್‌
ಶಾಸಕ ರಮೇಶ ಭೂಸನೂರ ಅವರು ಮತ್ತೆ ಬಿಜೆಪಿಯಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನಿಂದ ಅಶೋಕ ಮನಗೂಳಿ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜೆಡಿಎಸ್‌ನ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ (ಸೋಮಜಾಳ) ಪ್ರಬಲ ಪೈಪೋಟಿ ಒಡ್ಡಿದ್ದಾರೆ. ರಮೇಶ ಭೂಸನೂರ ಹಾಗೂ ವಿಶಾಲಾಕ್ಷಿ ಇಬ್ಬರೂ ಗಾಣಿಗ ಸಮಾಜಕ್ಕೆ ಸೇರಿದವರು. ವಿಶಾಲಾಕ್ಷಿ ಅವರ ಪತಿ ಶಿವಾನಂದ ಅವರು ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಕಾಲಕ್ಕೆ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ಪತಿಯ ಅಗಲುವಿಕೆಯಿಂದಾಗಿ ವಿಶಾಲಾಕ್ಷಿ ಅವರಿಗೆ ಜೆಡಿಎಸ್‌ ಟಿಕೆಟ್‌ ಒಲಿದು ಬಂದಿದ್ದು, ಪತಿಯ ನಿಧನದ ಅನುಕಂಪ ಕೈ ಹಿಡಿಯಬಹುದು ಎಂದು ಲೆಕ್ಕಾಚಾರ ಇದೆ. ಅಶೋಕ ಮನಗೂಳಿ ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಗಾಣಿಗ ಸಮಾಜದ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಿದ್ದು, ರಮೇಶ ಭೂಸನೂರ ಅವರಿಗೆ ಈ ಚುನಾವಣೆ ಟಫ್‌ ಆಗಬಹುದು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇದನ್ನೂ ಓದಿ: ಹಿಂದೂ ಹುಲಿ ಯತ್ನಾಳ್‌, ಸೋಲಿಸಲು ಒಂದಾದ ಕೈ-ದಳದ ಮುಸ್ಲಿಂ ಅಭ್ಯರ್ಥಿಗಳು: ಕುಮಾರಣ್ಣಂಗೆ ಶಾಕ್‌!

ಇಂಡಿ: ಕಾಂಗ್ರೆಸ್‌-ಜೆಡಿಎಸ್‌ ನಡುವೆ ಹಣಾಹಣಿ
ಇಂಡಿಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪುನರಾಯ್ಕೆ ಬಯಸಿ ಚುನಾವಣೆ ಕಣಕ್ಕಿಳಿದಿದ್ದಾರೆ. ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಿಂದ ಬಸವರಾಜ ಪಾಟೀಲ ಹಂಜಗಿ ಕಣದಲ್ಲಿದ್ದಾರೆ. ಬಿಜೆಪಿಯು ಹೊಸಮುಖ, ಕಾಸುಗೌಡ ಬಿರಾದಾರ ಅವರನ್ನು ಕಣಕ್ಕಿಳಿಸಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡರೂ ನೇರ ಹಣಾಹಣಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಇದೆ. ಯಶವಂತರಾಯಗೌಡ ಪಾಟೀಲ ಅವರು ಆದಿ ಬಣಜಿಗ ಸಮಾಜದವರು. ಬಸವರಾಜ ಪಾಟೀಲ ಹಂಜಗಿಯವರು ಕುರುಬ ಸಮಾಜಕ್ಕೆ ಸೇರಿದವರು. ಕಾಸುಗೌಡ ಬಿರಾದಾರ ಅವರು ಪಂಚಮಸಾಲಿ ಸಮಾಜದವರು. ಕ್ಷೇತ್ರದಲ್ಲಿ ಕುರುಬ ಮತಗಳು ನಿರ್ಣಾಯಕ.

ಮುದ್ದೇಬಿಹಾಳ: ನಡಹಳ್ಳಿ, ಅಪ್ಪಾಜಿ, ಬಜಂತ್ರಿ ತ್ರಿಕೋನ ಕದನ
ಹಾಲಿ ಶಾಸಕ, ಬಿಜೆಪಿಯ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಮತ್ತೆ ಚುನಾವಣೆ ಅಖಾಡಕ್ಕಿಳಿದಿದ್ದು, ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ಸಿನ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅಪ್ಪಾಜಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಬಸವರಾಜ ಬಜಂತ್ರಿಯವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ನಡಹಳ್ಳಿ ಹಾಗೂ ನಾಡಗೌಡ ಅಪ್ಪಾಜಿ ಅವರು ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಲಿಂಗಾಯತರು, ಕುರುಬರು ಈ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ. ಹೀಗಾಗಿ, ಎಲ್ಲ ಸಮುದಾಯದ ಮತದಾರರ ಮನವೊಲಿಕೆಯಲ್ಲಿ ಯಶಸ್ವಿಯಾಗುವ ಅಭ್ಯರ್ಥಿಯ ಗೆಲುವಿನ ಹಾದಿ ಸುಗಮವಾಗಬಹುದು.

ಇದನ್ನೂ ಓದಿ: ಯತ್ನಾಳ ವಿಷ ಕಾರುವ ವ್ಯಕ್ತಿ: ಎಂ.ಬಿ.ಪಾಟೀಲ ಕಿಡಿ

ದೇವರ ಹಿಪ್ಪರಗಿ: ಮೂವರ ನಡುವೆ ಸಮಬಲದ ಸ್ಪರ್ಧೆ
ಹಾಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಬಿಜೆಪಿ ಟಿಕೆಟ್‌ ನೀಡಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಸೋಮನಗೌಡರು ಕಾಂಗ್ರೆಸ್‌ ಅಭ್ಯರ್ಥಿ. ಒಂದು ಬಾರಿ ಸಿಂದಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶರಣಪ್ಪ ಸುಣಗಾರ ಅವರು ಕ್ಷೇತ್ರ ಬದಲಿಸಿ ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕಿಳಿದು ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಜೆಡಿಎಸ್‌, ಪಂಚಮಸಾಲಿ ಸಮುದಾಯದ ಭೀಮನಗೌಡ (ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ, ಕೇವಲ 3,300 ಮತಗಳಿಂದ ಸೋತಿದ್ದ ಭೀಮನಗೌಡ ಪಾಟೀಲ, ರೆಡ್ಡಿ ಸಮುದಾಯದ ಶಾಸಕ ಸೋಮನಗೌಡ ಪಾಟೀಲಗೆ ಟಕ್ಕರ್‌ ಕೊಡುವಷ್ಟು ಪ್ರಬಲರಾಗಿದ್ದಾರೆ.

ನಾಗಠಾಣ: ಕಾಂಗ್ರೆಸ್‌-ಜೆಡಿಎಸ್‌ ನೇರಾನೇರ ಸಮರ
ನಾಗಠಾಣ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ನೇರ ಹಣಾಹಣಿ ಇದೆ. ಹಾಲಿ ಶಾಸಕ ದೇವಾನಂದ ಚವ್ಹಾಣ ಅವರು ಜೆಡಿಎಸ್‌ನಿಂದ ಪುನರಾಯ್ಕೆ ಬಯಸಿದ್ದು, ಲಂಬಾಣಿ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ವಿಠಲ ಕಟಕದೊಂಡ ಕಣದಲ್ಲಿದ್ದು, ಸಾಂಪ್ರದಾಯಿಕ ಮತಗಳನ್ನು ಅವಲಂಬಿಸಿದ್ದಾರೆ. ಬಿಜೆಪಿಯು ಹೊಸಮುಖ, ದಲಿತ ಎಡಗೈ ಸಮುದಾಯದ ಸಂಜೀವ ಐಹೊಳೆ ಅವರಿಗೆ ಟಿಕೆಟ್‌ ನೀಡಿದೆ. ಆದರೆ, ಈ ಕ್ಷೇತ್ರದಲ್ಲಿ ದಲಿತ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬಲಗೈ ದಲಿತ ಸಮುದಾಯಕ್ಕೆ ಟಿಕೆಟ್‌ ಸಿಗಲಿಲ್ಲ ಎಂಬ ಅಸಮಾಧಾನ ಮತದಾರರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಎರಡೂ ಎಂಜಿನ್‌ ಫೇಲ್‌: ಎಂ.ಬಿ.ಪಾಟೀಲ ವಾಗ್ದಾಳಿ

ಬಸವನ ಬಾಗೇವಾಡಿ: ಶಿವಾನಂದ ಪಾಟೀಲಗೆ ಬೆಳ್ಳುಬ್ಬಿ ಟಕ್ಕರ್‌
ಬಸವಣ್ಣನ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್‌ - ಬಿಜೆಪಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ ಪಕ್ಷ ಹಾಲಿ ಶಾಸಕ ಶಿವಾನಂದ ಪಾಟೀಲರನ್ನು ಕಣಕ್ಕಿಳಿಸಿದೆ. ಬಿಜೆಪಿಯು ಗಾಣಿಗ ಸಮಾಜದ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರಿಗೆ ಟಿಕೆಟ್‌ ನೀಡಿದೆ. ಕಳೆದ ಮೂರು ಚುನಾವಣೆಗಳಲ್ಲಿ ಸೋಲು ಕಂಡಿರುವ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿ. ಕಾಂಗ್ರೆಸ್ಸಿನ ಶಿವಾನಂದ ಪಾಟೀಲ ಹಾಗೂ ಜೆಡಿಎಸ್‌ನ ಮನಗೂಳಿ ಇಬ್ಬರೂ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಹ​ನು​ಮ ದೇಗುಲ ಇದ್ದೆಡೆ ರಾಮಮಂದಿರ ನಿರ್ಮಾಣ: ಯುಪಿ ಸಿಎಂ ಯೋಗಿ

click me!