ತಮಿಳುನಾಡಿನ ಹೊಸೂರಿಗೆ ಮೆಟ್ರೋ ರೈಲು: ಕನ್ನಡಿಗರ ಆಕ್ರೋಶ

Published : Feb 28, 2023, 08:52 AM ISTUpdated : Feb 28, 2023, 09:00 AM IST
ತಮಿಳುನಾಡಿನ ಹೊಸೂರಿಗೆ ಮೆಟ್ರೋ ರೈಲು: ಕನ್ನಡಿಗರ ಆಕ್ರೋಶ

ಸಾರಾಂಶ

ತಮಿಳುನಾಡಿಗೆ ಮೆಟ್ರೋ ವಿಸ್ತರಣೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ಒಪ್ಪಿಗೆ ನೀಡಿದ ಕೇಂದ್ರ ವಿರುದ್ಧ ಕನ್ನಡಿಗರ ಆಕ್ರೋಶ, ಮೆಟ್ರೋ ಯೋಜನೆ ಜಾರಿಯಿಂದ ತಮಿಳುನಾಡಿಗಷ್ಟೇ ಅನುಕೂಲ, ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೆ ಮೆಟ್ರೋ ವಿಸ್ತರಿಸಲು ಆಗ್ರಹ.

ಬೆಂಗಳೂರು(ಫೆ.28): ಕನ್ನಡಿಗರ ವಿರೋಧದ ನಡುವೆ ತಮಿಳುನಾಡಿನ ಹೊಸೂರಿನವರೆಗೆ ‘ನಮ್ಮ ಮೆಟ್ರೋ’ ಮಾರ್ಗ ವಿಸ್ತರಿಸುವ ‘ಕಾರ್ಯಸಾಧ್ಯತಾ ವರದಿ’ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ. ಕನ್ನಡಪರ ಸಂಘಟನೆಗಳು ಕೇಂದ್ರದ ಈ ನಿಲುವು ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿವೆ.

ಬೆಂಗಳೂರು, ಸುತ್ತಮುತ್ತಲ ಜಿಲ್ಲೆಗಳ ಅಭಿವೃದ್ಧಿ, ಮೆಟ್ರೋ ಮಾರ್ಗ ಸಂಪರ್ಕ ಕಲ್ಪಿಸುವುದನ್ನು ಕಡೆಗಣಿಸಿ ತಮಿಳುನಾಡಿನ ಹೊಸೂರುವರೆಗೆ ಮೆಟ್ರೋ ವಿಸ್ತರಿಸಿದಲ್ಲಿ ಸರ್ಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಮೆಟ್ರೋ ವಿಸ್ತರಣೆಯ ಅಧ್ಯಯನಕ್ಕೆ ನೀಡಿರುವ ಅನುಮತಿ ವಾಪಸ್ಸು ಪಡೆಯಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿದೆ. ಟ್ವಿಟ್ಟರ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Bengaluru: ಜೆಪಿ ನಗರ ಡೆಲ್ಮಿಯಾ ಫ್ಲೈಓವರ್‌ ಬಚಾವ್‌: ಅದರ ಮೇಲೆಯೇ ಮೆಟ್ರೋ ಮಾರ್ಗ

ಈ ಬಗ್ಗೆ ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಆರಂಭದಿಂದಲೂ ಈ ಯೋಜನೆಗಿದ್ದ ಕನ್ನಡಿಗರ ವಿರೋಧ ನಿರ್ಲಕ್ಷಿಸಿ ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ ಒಪ್ಪಿಗೆ ನೀಡಿರುವುದು ಸರಿಯಲ್ಲ. ಹಿಂದೆಯೇ ನಾವೆಲ್ಲರೂ ಇದನ್ನು ಖಂಡಿಸಿದ್ದೇವೆ. ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಿದರೆ ಕನ್ನಡಿಗರಿಗೆ ತೊಂದರೆಯಾಗಲಿದೆ. ಇದರಿಂದ ರಾಜ್ಯದ ಗಡಿಯಲ್ಲಿ ತಮಿಳರ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದರು.
ಮೆಟ್ರೋ ಸಂಪರ್ಕ ಕಲ್ಪಿಸಿದರೆ ಇನ್ನೂ ಸುಲಭವಾಗಿ ಬೆಂಗಳೂರಿಗೆ ಬರುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳುವುದು ಮಾತ್ರವಲ್ಲ, ಕನ್ನಡಿಗರ ಉದ್ಯೋಗ ಕಸಿದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಕರವೇ ಪ್ರವೀಣ್‌ ಶೆಟ್ಟಿಮಾತನಾಡಿ, ಕನ್ನಡಿಗರು ಏನೇ ಯೋಜನೆ ಮಾಡಿದರೂ ತಮಿಳುನಾಡಿನವರು ಅಡ್ಡಗಾಲು ಹಾಕುತ್ತಾರೆ. ಬೆಂಗಳೂರು ನಗರ, ಗ್ರಾಮಾಂತರಕ್ಕೆ ಕುಡಿಯುವ ನೀರಿನ ಯೋಜನೆಗೆ, ಹೊಗೆನಕಲ್‌ ಯೋಜನೆಗೆ ಬಹಳಷ್ಟು ಅಡ್ಡಿಪಡಿಸಿದ್ದಾರೆ. ಹಿಂದೆ ತಮಿಳು ಸಂಘಟನೆ ಬೆಂಗಳೂರು ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಹೊಸೂರಿನವರೆಗೆ ಮೆಟ್ರೋ ಆದಲ್ಲಿ ತಮಿಳು ಕಾರ್ಮಿಕರು ಬೆಂಗಳೂರಿನ ಸುತ್ತಮುತ್ತಲ ಕಾರ್ಖಾನೆಗಳಲ್ಲಿ ತುಂಬಿಕೊಳ್ಳುತ್ತಾರೆ. ಕನ್ನಡಿಗರ ಉದ್ಯೋಗ ಕಿತ್ತುಕೊಳ್ಳುತ್ತಾರೆ. ರಾಜ್ಯ ಸರ್ಕಾರಕ್ಕೆ ಇದರ ಅರಿವಿರಲಿ ಎಂದು ಎಚ್ಚರಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಆಕ್ರೋಶ

ಟ್ವಿಟ್ಟರ್‌ನಲ್ಲಿ ಜನತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮೊದಲು ಬೆಂಗಳೂರು ಹಾಗೂ ಅದರ ಸುತ್ತಮುತ್ತ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವಂತೆ ಮೆಟ್ರೋ ವಿಸ್ತರಿಸಿ. ರಾಮನಗರ, ತುಮಕೂರು, ಹೊಸಕೋಟೆ, ಕುಣಿಗಲ್‌, ದೇವನಹಳ್ಳಿ, ನರಸಾಪುರದಲ್ಲಿ ಮೆಟ್ರೋ ಲೈನ್‌ ರೂಪಿಸಿ. ಚುನಾವಣೆಯಲ್ಲಿ ತಮಿಳರ ಓಲೈಕೆಗಾಗಿ ಈ ಮಾರ್ಗ ಘೋಷಿಸಬೇಡಿ ಎಂದು ಕಿಡಿಕಾರಿದ್ದಾರೆ.

ಹೊಸೂರಿನವರೆಗೆ ವಿಸ್ತರಣೆ

ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆ ಇದು. ಬಿಎಂಆರ್‌ಸಿಎಲ್‌ನಿಂದ ನಡೆಯುತ್ತಿರುವ ಮೆಟ್ರೋ ಹಳದಿ ಮಾರ್ಗ 2ನೇ ಹಂತದ ಆರ್‌.ವಿ.ರಸ್ತೆ-ಬೊಮ್ಮಸಂದ್ರ(ರೀಚ್‌- 5) ಮುಕ್ತಾಯ ಹಂತದಲ್ಲಿದೆ. ಈ ಮಾರ್ಗವನ್ನು ಹೊಸೂರು ವರೆಗೆ ವಿಸ್ತರಿಸುವ ಯೋಜನೆಗೆ ಒಪ್ಪಿಗೆ ಕೇಳಿ ಚೆನ್ನೈ ಮೆಟ್ರೋ ರೈಲ್‌ ಲಿ. (ಸಿಎಂಆರ್‌ಎಲ್‌) ತಮಿಳುನಾಡು ಸರ್ಕಾರದ ಮೂಲಕ ಕಳೆದ ವರ್ಷ ಕೋರಿತ್ತು. ಇದಕ್ಕೆ ಕಳೆದ ಜೂನ್‌ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು.

ನಮ್ಮ ಮೆಟ್ರೋ: ಕೇವಲ 12 ನಿಮಿಷದಲ್ಲಿ ಕೆ.ಆರ್‌.ಪುರಂನಿಂದ ವೈಟ್‌ಫೀಲ್ಡ್‌ಗೆ ಪ್ರಯಾಣ..!

ಬಳಿಕ ಕೇಂದ್ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಲ್ಲಿನ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ವಾರದ ಹಿಂದೆ ಇದಕ್ಕೆ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ತಮಿಳುನಾಡಿನ ಕೃಷ್ಣಗಿರಿ ಸಂಸದ ಡಾ
ಎ.ಚೆಲ್ಲಕುಮಾರ್‌ ತಿಳಿಸಿದ್ದಾರೆ. ಈ ಯೋಜನೆ ಪ್ರಕಾರ ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಬೇಕಿದೆ. ರಾಜ್ಯದಲ್ಲಿ 11.7 ಕಿ.ಮೀ. ಹಾಗೂ 8.8 ಕಿಮೀ ರಾಜ್ಯದ ಹೊರಭಾಗದಲ್ಲಿ ನಿರ್ಮಾಣ ಆಗಲಿದೆ.

ಎರಡೂ ರಾಜ್ಯದ ಜನತೆಗೆ ಅನುಕೂಲ: ಚೆಲ್ಲಕುಮಾರ್‌

‘ಕನ್ನಡಪ್ರಭ’ ಜತೆ ಮಾತನಾಡಿದ ತಮಿಳುನಾಡಿನ ಕೃಷ್ಣಗಿರಿ ಸಂಸದ ಡಾ. ಎ.ಚೆಲ್ಲಕುಮಾರ್‌, ‘ಈ ಯೋಜನೆಯಿಂದ ಎರಡೂ ರಾಜ್ಯದ ಜನತೆಯ ಸಂಚಾರಕ್ಕೆ ಹೆಚ್ಚಿನ ಅನುಕೂಲ ಆಗಲಿದೆ. ಹೊಸೂರು ಭಾಗದಿಂದ ಪ್ರತಿನಿತ್ಯ ಕನಿಷ್ಠ 25 ಸಾವಿರ ಜನ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಂಗಳೂರಿನಿಂದಲೂ ಸಾವಿರಾರು ಜನರು ಈ ಭಾಗಕ್ಕೆ ಬರುತ್ತಾರೆ. ಸಾಮಾನ್ಯ ಜನತೆಗೆ ಇದರಿಂದ ಪ್ರಯೋಜನ ಆಗಲಿದೆ. ಹೀಗಾಗಿ ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೆ’ ಎಂದಿದ್ದಾರೆ.
ತಮಿಳುನಾಡಿನ ಹೊಸೂರಿನವರೆಗೆ ಮೆಟ್ರೋ ವಿಸ್ತರಿಸಿದಲ್ಲಿ ಸರ್ಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಮೆಟ್ರೋ ವಿಸ್ತರಣೆಯ ಅಧ್ಯಯನಕ್ಕೆ ನೀಡಿರುವ ಅನುಮತಿ ವಾಪಸ್ಸು ಪಡೆಯಬೇಕು ಅಂತ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಡೇಂಜರ್ ಡಿಸೆಂಬರ್: ಧಾರವಾಡದಲ್ಲಿ ಧಗಧಗನೇ ಹೊತ್ತಿ ಉರಿದ ಕಾರು, ಇಬ್ಬರು ಪ್ರಾಣಾಪಾಯದಿಂದ ಪಾರು!
ಗುಂಡ್ಲುಪೇಟೆಯಲ್ಲಿ ಹನುಮ ಭಕ್ತರ ಆಕ್ರೋಶ; ಡಿಜೆ ವಶಕ್ಕೆ ಪಡೆದ ಪೊಲೀಸರ ವಿರುದ್ಧ ಭಾರಿ ಪ್ರತಿಭಟನೆ!