ಜನ್ಮದಿನದಂದೇ ಶಿವಮೊಗ್ಗ ಏರ್‌ಪೋರ್ಟ್‌ ಉದ್ಘಾಟನೆ, ನನ್ನ ಜೀವನ ಸಾರ್ಥಕ: ಯಡಿಯೂರಪ್ಪ

By Kannadaprabha NewsFirst Published Feb 28, 2023, 8:00 AM IST
Highlights

ಜನ್ಮದಿನದಂದೇ ಶಿವಮೊಗ್ಗ ಏರ್‌ಪೋರ್ಟ್‌ ಉದ್ಘಾಟನೆಗೊಂಡಿದ್ದರಿಂದ ಅತೀವ ಸಂತಸ, 60ನೇ ಹುಟ್ಟುಹಬ್ಬಕ್ಕೆ ವಾಜಪೇಯಿ, 80ಕ್ಕೆ ಮೋದಿ ಹರಸಿದ್ದು ಖುಷಿ

ಶಿವಮೊಗ್ಗ(ಫೆ.28):  ‘ನಿನ್ನ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣ ಉದ್ಘಾಟನೆ ಆಗಬೇಕು. ನಾನು ಬರುತ್ತೇನೆ’ ಎಂದು ಮೋದಿ ಭರವಸೆ ನೀಡಿದ್ದರು. ಅದರಂತೆ ಖುದ್ದು ಅವರೇ ಬಂದು ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದು, ನನಗೆ ಅತೀವ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವನಾತ್ಮಕವಾಗಿ ನುಡಿದರು. ಇಲ್ಲಿನ ಸೋಗಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ದಿನದಂದೇ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿರುವುದು ನನಗೆ ಅತ್ಯಂತ ಸಂಭ್ರಮ ತಂದಿದೆ. ನನ್ನ ಜೀವನ ಸಾರ್ಥಕಗೊಂಡಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಹಲವು ಕನಸುಗಳು ನನಸಾಗುವ ಶುಭ ಸಂಕೇತ ಎಂದರು.

70ರ ದಶಕದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ. ನಾನು ಅಧಿಕಾರದಲ್ಲಿ ಇದ್ದಿದ್ದು 7 ವರ್ಷ ಮಾತ್ರ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ್ದೇನೆ. ಕಟ್ಟುವೆವು ನಾವು ಕನ್ನಡ ನಾಡೊಂದನ್ನು ಎಂಬ ಕವಿವಾಣಿಯಂತೆ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಶಿಕಾರಿಪುರದ ಜನರು ಸೇರಿದಂತೆ ಈ ನಾಡಿನ ಜನರಿಗೆ ನಾನು ಋುಣಿಯಾಗಿದ್ದೇನೆ. ಶಾಸಕನಾಗಿ, ಸಂಸದನಾಗಿ, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನಗೆ ಎಲ್ಲರೂ ಧೈರ್ಯ ತುಂಬಿದ್ದಾರೆ ಎಂದು ಹೇಳಿದರು.

Latest Videos

ಮೇಡ್‌ ಇನ್‌ ಇಂಡಿಯಾ ವಿಮಾನ ಶೀಘ್ರ, ಹವಾಯಿ ಚಪ್ಪಲಿ ಹಾಕಿದವರೂ ಈಗ ವಿಮಾನದಲ್ಲಿ ಓಡಾಟ, ಮೋದಿ

ಮೋದಿಯವರು ಇಡೀ ವಿಶ್ವವೇ ಮೆಚ್ಚಿದ ಆದರ್ಶ ನಾಯಕರಾಗಿದ್ದಾರೆ. ಮೋದಿಯವರು ಕೂಡ ಬಸವಣ್ಣನವರ ಕಾಯಕತತ್ವವನ್ನೇ ಅಭಿವೃದ್ಧಿಯ ಮಂತ್ರವನ್ನಾಗಿ ಇಟ್ಟುಕೊಂಡಿದ್ದಾರೆ ಇದು ನಮ್ಮ ಹೆಮ್ಮೆ. ನನ್ನ 60ನೇ ಹುಟ್ಟು ಹಬ್ಬಕ್ಕೆ ವಾಜಪೇಯಿ ಬೆಂಗಳೂರಿಗೆ ಬಂದು ಹರಸಿದ್ದರು. 80ನೇ ಹುಟ್ಟುಹಬ್ಬಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹರಸಿದ್ದಾರೆ. ಇದು ನನಗೆ ಖುಷಿಯ ಸಂಗತಿ ಎಂದರು.

ಕುವೆಂಪು ಅವರು 1930ರಲ್ಲಿಯೇ ವಿಶ್ವ ಮಾನವ ಸಂದೇಶ ಸಾರಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ವಸುದೈವ ಕುಟುಂಬಕಂ ಮಂತ್ರ ಹೇಳಿಕೊಡುತ್ತಿದ್ದಾರೆ. ಬಸವಣ್ಣನವರಿಂದ ಪ್ರಭಾವಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಡೆಗಳಲ್ಲಿ ಬಸವಣ್ಣನವರ ಮಾತುಗಳನ್ನು ಉಲ್ಲೇಖಿಸುತ್ತಾರೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ವಚನದಿಂದ ಪ್ರೇರಿತರಾಗಿ ಸ್ವದೇಶಿ ಉತ್ಪನ್ನ ಯೋಜನೆಯಾದ ಮೇಕ್‌ ಇನ್‌ ಇಂಡಿಯಾಗೆ ವಿಶೇಷ ಒತ್ತು ನೀಡಿದ್ದಾರೆ. ಅಬ್ದುಲ್‌ ಕಲಾಂ ರಾಷ್ಟ್ರಪತಿಯಾಗಿದ್ದಾಗ ಬೆಂಗಳೂರಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಕುರಿತು ಮಾತನಾಡಿದ್ದರು. ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದೇ ದಿಕ್ಕಿನಲ್ಲಿ ಹೆಜ್ಜೆ ಇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

click me!