Hyderabad-Karnataka Liberation Day: ಕಲ್ಯಾಣ ಕರ್ನಾಟಕದ ಅನುದಾನ ಬರೀ ಶೇ. 65 ಬಳಕೆ..!

By Kannadaprabha NewsFirst Published Sep 17, 2022, 9:35 AM IST
Highlights

9 ವರ್ಷಗಳಲ್ಲಿ ಮಂಜೂರಾಗಿದ್ದು 10,550 ಕೋಟಿ, ಖರ್ಚಾಗಿದ್ದು 6,900 ಕೋಟಿ ಮಾತ್ರ, ಕಲ್ಯಾಣ ಕರ್ನಾಟಕ ಅನುದಾನ ಬಳಕೆಗೂ ನೂರೆಂಟು ಷರತ್ತು, ಮಹತ್ವಾಕಾಂಕ್ಷಿ ಯೋಜನೆಗಳಿಗೂ ಇಲ್ಲ ಕಾಸು

ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.17):  ನಿಜಾಮರ ಆಡಳಿತದಲ್ಲಿ ಶೋಷಣೆಗೆ ಒಳಗಾಗಿ ರಾಜ್ಯದಲ್ಲಿಯೇ ತೀವ್ರ ಹಿಂದುಳಿದ ಪ್ರದೇಶವಾಗಿದ್ದ ಕಲ್ಯಾಣ ಕರ್ನಾಟಕಕ್ಕೆ ಸರ್ಕಾರದ ಅನುದಾನ ಕಾಲ ಕಾಲಕ್ಕೆ ಖರ್ಚಾಗುತ್ತಿಲ್ಲ. ಪರಿಣಾಮ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ. ಈ ಭಾಗಕ್ಕೆ 2013ರಲ್ಲಿ ವಿಶೇಷ ಸ್ಥಾನಮಾನ ಘೋಷಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲಾಯಿತು. ಆದರೆ ಸರ್ಕಾರ ನೀಡುವ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಕಳೆದ 9 ವರ್ಷಗಳಲ್ಲಿ 10550 ಕೋಟಿಯನ್ನು ರಾಜ್ಯ ಸರ್ಕಾರ ನೀಡಿದೆ. ಈ ಪೈಕಿ ಕೇವಲ .6893 ಕೋಟಿ(ಶೇ. 65) ವ್ಯಯವಾಗಿದೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ರಾಯಚೂರು, ವಿಜಯನಗರ, ಬೀದರ ಸೇರಿದಂತೆ 27238 ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಪೈಕಿ 22181 ಕಾಮಗಾರಿ ಪೂರ್ಣಗೊಳಸಲಾಗಿದೆ. 3037 ಕಾಮಗಾರಿ ಪ್ರಗತಿಯಲ್ಲಿದ್ದರೆ 2020 ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ

ಹಲವು ಷರತ್ತು:

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಬಿಡುಗಡೆ ಮಾಡುವ ಅನುದಾನಕ್ಕೆ ಹಲವಾರು ಷರತ್ತುಗಳಿವೆ. ವಿಶೇಷ ಸ್ಥಾನಮಾನದ ಅಡಿ ಅಭಿವೃದ್ಧಿಗೆ ಅನುಕೂಲವಾಗಲಿ ಎಂದು ವಿಶೇಷ ರಿಯಾಯಿತಿ ನೀಡುತ್ತಿಲ್ಲ. ಹೀಗಾಗಿ ಅನುದಾನದ ಬಳಕೆಗೆ ನೂರೆಂಟು ಸಮಸ್ಯೆಗಳಿವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಕೊಠಡಿಗಳು ಇಲ್ಲ. ಬೀಳುವಂತಾಗಿರುವ ಕೊಠಡಿಗಳಲ್ಲಿಯೇ ಅದೆಷ್ಟೋ ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಅದನ್ನು ಒದಗಿಸುವುದಕ್ಕೂ ನೂರಾರು ಷರತ್ತು ಇರುವುದರಿಂದ ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಅನುದಾನ ಇದ್ದೂ ಇಲ್ಲದಂತಾಗಿದೆ.

ಭೂಮಿ ಖರೀದಿಗೆ, ನಿವೇಶನ ಖರೀದಿಗೆ ಅವಕಾಶ ನೀಡಬೇಕು ಮತ್ತು ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಸಂಬಂಧಿಸಿದ ಕೊರತೆ ನೀಗಿಸಲು ಸಮರೋಪಾದಿಯಲ್ಲಿ ಅನುದಾನ ಬಳಕೆಗೆ ಅವಕಾಶ ನೀಡುವಂತಾಗಬೇಕು. ಇಲ್ಲದಿದ್ದರೆ ಘೋಷಣೆ ಮಾಡಿರುವ ಅನುದಾನವನ್ನು ಬರೀ ಲೆಕ್ಕಾಚಾರ ಮಾಡುತ್ತ ಕಾಲ ದೂಡಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಭೂ ಬ್ಯಾಂಕ್‌ ಬೇಕು:

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿ ಘೋಷಣೆ ಮಾಡಲಾಗಿದೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ವಿಶೇಷವಾಗಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸಲಾಗಿದೆ. ಇದ್ಯಾವುದಕ್ಕೂ ಸ್ವಂತ ನಿವೇಶನವೂ ಇಲ್ಲ. ಕಟ್ಟಡವೂ ಇಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರಿ ಭೂಮಿಯೇ ಇಲ್ಲ.

ಕಲ್ಯಾಣ ಕರ್ನಾಟಕ ವಿಮೋಚನೆಗಿಂದು 75 ವರ್ಷ: ಕಲಬುರಗಿಯಲ್ಲಿ ಹಬ್ಬದ ಕಳೆ

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ಜಿಲ್ಲಾ ಕೇಂದ್ರಗಳಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ಪ್ರಗತಿ ಯೋಜನೆಗಳಿಗಾಗಿ ಪ್ರತಿ ಜಿಲ್ಲೆಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 500 ಎಕರೆ ಭೂಮಿ ಖರೀದಿಸಿ ಕೇವಲ ಶಿಕ್ಷಣ ಮತ್ತು ಆರೋಗ್ಯ ಯೋಜನೆಗಳಿಗೆ ಮೀಸಲಿರಿಸುವಂತಾಗಬೇಕು.

ಜಿಲ್ಲಾವಾರು ಮಾಹಿತಿ (ಕೋಟಿ ರುಗಳಲ್ಲಿ)

ಜಿಲ್ಲೆ ಮಂಜೂರು ಬಳಕೆ ಶೇಕಡಾ
ಬೀದರ 1465 942 64
ಕಲಬುರಗಿ 3159 1953 62
ಯಾದಗಿರಿ 1145 754 66
ರಾಯಚೂರು 1689 1014 60
ಕೊಪ್ಪಳ 1201 864 72
ಬಳ್ಳಾರಿ 1357 920 68
ಕೆಕೆ 387 443 114
ವಿಜಯನಗರ 144 

ಜಿಲ್ಲಾ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲ, ಜಾಗವೂ ಇಲ್ಲ. ಇಂಥ ಅನೇಕ ಸಮಸ್ಯೆ ಇದ್ದರೂ ಅನುದಾನ ಬಿಡುಗಡೆಗೊಳಿಸಿ ಕಟ್ಟಡ ನಿರ್ಮಾಣ ಮಾಡುತ್ತಿಲ್ಲ. ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ. ಸಮಸ್ಯೆ ಗಂಭೀರವಾಗಿದ್ದರೂ ಸ್ಪಂದಿಸುತ್ತಿಲ್ಲ ಅಂತ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ. 

ಪ್ರಸಕ್ತ ಸರ್ಕಾರ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ನೂರೆಂಟು ಷರತ್ತು ಇರುವುದರಿಂದ ಅನುದಾನ ಬಳಕೆಗೂ ಸಮಸ್ಯೆಯಿದೆ. ಸಿಎಂ ಘೋಷಿಸಿದ ಅನುದಾನವೂ ಬರಲಿಲ್ಲ ಅಂತ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ. 
 

click me!