ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ

Published : Dec 22, 2025, 05:06 PM IST
Udachana math seer

ಸಾರಾಂಶ

ಕಲಬುರಗಿ ಜಿಲ್ಲೆಯ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಮಠದಲ್ಲಿ, ಎಂಟು ತಿಂಗಳ ನಂತರ ಮರಳಿದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದಾರೆ. ಹೊಸ ಪೀಠಾಧಿಪತಿ ನೇಮಕದ ಚರ್ಚೆಯ ನಡುವೆ ನಡೆದ ಈ ಘಟನೆ  ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿರುವ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದಲ್ಲಿ ನಡೆದ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ. ಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಹಾಜರಾತಿಗೆ ‘ಬಿಲ್ಡಪ್’ ಕೊಟ್ಟ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಮಠ ತೊರೆದು ಕಾಣೆಯಾಗಿದ್ದ ಶಾಂತಲಿಂಗ

ಕಳೆದ ಎಂಟು ತಿಂಗಳುಗಳಿಂದ ಮಠವನ್ನು ತೊರೆದು ಕಾಣೆಯಾಗಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಾರದ ಹಿಂದಷ್ಟೇ ಅಚ್ಚರಿಯಾಗಿ ಮಠಕ್ಕೆ ವಾಪಸ್ಸಾಗಿದ್ದರು. ಈ ನಡುವೆ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಕುರಿತು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಚರ್ಚೆಗಳು ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದ ಗದ್ದಲದ ನಡುವೆಯೇ ಸ್ವಾಮೀಜಿಯ ವಾಪಸ್ಸು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿಯ ವರ್ತನೆ, ಅವರ ವಿರೋಧಿಗಳಿಗೆ ಸಂದೇಶ ನೀಡುವ ಉದ್ದೇಶದಿಂದ ನಡೆದದ್ದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ತಮ್ಮ ವಿರುದ್ಧ ಮಾತನಾಡುತ್ತಿರುವವರನ್ನು ಹೆದರಿಸಲು ಅಥವಾ ತಮ್ಮ ಪ್ರಭಾವ ತೋರಿಸಲು ಈ ರೀತಿ ನಡೆದುಕೊಂಡರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಸ್ಥಳೀಯರ ಹೇಳಿಕೆಯ ಪ್ರಕಾರ, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣದಿಂದ ಕೆಲ ತಿಂಗಳುಗಳ ಹಿಂದೆ ಗ್ರಾಮಸ್ಥರು ಅವರನ್ನು ಮಠದಿಂದ ಹೊರಹಾಕಿದ್ದರು. ಕುಡಿದು ರಂಪಾಟ ಮಾಡುತ್ತಿದ್ದ ಸ್ವಾಮೀಜಿಯ ವರ್ತನೆಯಿಂದ ಮಠದ ಗೌರವಕ್ಕೆ ಧಕ್ಕೆ ಉಂಟಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಇದಾದ ಬಳಿಕ ಸ್ವಾಮೀಜಿ ಮಠವನ್ನು ಬಿಟ್ಟು ತೆರಳಿದ್ದು, ಎಂಟು ತಿಂಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಪೀಠಾಧಿಪತಿ ನೇಮಕ ಚರ್ಚೆ

ಆದರೆ ಇತ್ತೀಚೆಗೆ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಮಾಡುವ ಚರ್ಚೆಗಳು ಜೋರಾದ ಹಿನ್ನೆಲೆಯಲ್ಲೇ ಸ್ವಾಮೀಜಿ ಮಠಕ್ಕೆ ಮರಳಿ ಬಂದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮಠದ ಹಕ್ಕು ಮತ್ತು ಸ್ಥಾನ ಉಳಿಸಿಕೊಳ್ಳಲು ಅಥವಾ ವಿರೋಧಿಗಳನ್ನು ಬೆದರಿಸಲು ಈ ರೀತಿಯ ಪ್ರದರ್ಶನ ಮಾಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಸಂಸ್ಥೆಯ ಪೀಠಾಧಿಪತಿಯಾದ ವ್ಯಕ್ತಿಯೊಬ್ಬರು ಈ ರೀತಿಯ ಅಸ್ತ್ರ ಪ್ರದರ್ಶನ ನಡೆಸಿರುವುದು ಖಂಡನೀಯ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮಠದ ಶಾಂತಿ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಯಾವ ಕ್ರಮಗಳು ಕೈಗೊಳ್ಳಲಾಗುತ್ತವೆ ಎಂಬುದು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

'ಯಾವುದಾದರೂ ಪುಸ್ತಕ ಸುಟ್ಟುಹಾಕಿದ್ದರೆ ಅದರು ಹೇಳಿ ಹೋಗು ಕಾರಣ..' ಲೇಖಕಿಯ ಪೋಸ್ಟ್‌ಗೆ ಭಾರೀ ಕಾಮೆಂಟ್ಸ್‌!
ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!