ಕಲಬುರಗಿಗೆ ಮಂಜೂರು ಆಗಿದ್ದ ರೈಲ್ವೆ ವಿಭಾಗ ರದ್ದು!

By Kannadaprabha NewsFirst Published Mar 18, 2021, 7:55 AM IST
Highlights

ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ (ಕರ್ನಾಟಕ), ಜಮ್ಮು (ಜಮ್ಮು ಮತ್ತು ಕಾಶ್ಮೀರಿ) ಹಾಗೂ ಸಿಲ್ಚಾರ್‌ (ಆಸ್ಸಾಂ) ಗಳಿಗೆ ಮಂಜೂರಾಗಿದ್ದ ಮಹತ್ವಾಕಾಂಕ್ಷಿ ‘ರೇಲ್ವೆ ವಿಭಾಗ’ಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದೆ!

ವರದಿ : ಶೇಷಮೂರ್ತಿ ಅವಧಾನಿ

 ಕಲಬುರಗಿ (ಮಾ.18):  ಕಾಂಗ್ರೆಸ್‌ ನೇತೃತ್ವದ ಯುಪಿಎ -2 ಆಡಳಿತಾವಧಿಯಲ್ಲಿ ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ (ಕರ್ನಾಟಕ), ಜಮ್ಮು (ಜಮ್ಮು ಮತ್ತು ಕಾಶ್ಮೀರಿ) ಹಾಗೂ ಸಿಲ್ಚಾರ್‌ (ಆಸ್ಸಾಂ) ಗಳಿಗೆ ಮಂಜೂರಾಗಿದ್ದ ಮಹತ್ವಾಕಾಂಕ್ಷಿ ‘ರೇಲ್ವೆ ವಿಭಾಗ’ಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದೆ!

ಈ ಬೆಳವಣಿಗೆಯಿಂದಾಗಿ ಕಲಬುರಗಿ, ಜಮ್ಮು ಹಾಗೂ ಸಿಲ್ಚಾರ್‌ ಪ್ರದೇಶದಲ್ಲಿನ ರೇಲ್ವೆ ಸೌಲಭ್ಯಗಳ ವಿಸ್ತರಣೆಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ. ಕಲಬುರಗಿಯ ಡಾ. ಮಲ್ಲಿಕಾರ್ಜುನ ಖರ್ಗೆ ಯೂಪಿಎ- 2 ಸರಕಾರದಲ್ಲಿ ರೇಲ್ವೆ ಸಚಿವರಾಗಿದ್ದಾಗ 2014 ರಲ್ಲೇ ಈ 3 ವಿಭಾಗಳನ್ನು ಘೋಷಿಸಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದರು.

ಕಲಬುರಗಿಯಲ್ಲಿ ವಿಭಾಗೀಯ ಕಚೇರಿಗಾಗಿ ಗುರುತಿಸಲಾಗಿದ್ದ 42 ಎಕರೆ ಜಮೀನಿಗೆ ಬೇಲಿ ಹಾಕಲ್ಪಟ್ಟರೆ, ಜಮ್ಮು ಕಾಶ್ಮೀರದ ಮೊದಲ ವಿಭಾಗ ಹೆಗ್ಗಳಿಕೆಯ ಜಮ್ಮುವಿನಲ್ಲಿಯೂ ಯೋಜನೆ ಅನುಷ್ಠಾನಕ್ಕೆ ವಿಶೇಷಾಧಿಕಾರಿ ನಿಯುಕ್ತರಾಗಿದ್ದರು, ಆಸ್ಸಾಂ ರಾಜ್ಯದ ಸಿಲ್ಚಾರ್‌ನಲ್ಲಿಯೂ ವಿಭಾಗದ ಕೆಲಸಗಳು ಶುರುವಾಗಿದ್ದವು.

ಮಾರ್ಚ್ 31ರಿಂದ ಸ್ಪೆಷಲ್ ಟ್ರೈನ್ಗಳು ಕ್ಯಾನ್ಸಲ್? ರೈಲ್ವೇ ಇಲಾಖೆ ಹೇಳಿದ್ದಿಷ್ಟು ..

ಯೂಪಿಎ- 2 ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಮೊದಲ ಅವಧಿಯಲ್ಲಂತೂ ಈ ಮೂರು ವಿಭಾಗಗಳ ರಚನೆಗೆ ಬಿಡಿಗಾಸು ನೀಡಿರಲಿಲ್ಲ. ಇದೀಗ ಹಿರಿಯ ಅಧಿಕಾರಿಗಳ ಸಮೀತಿ ರಚಿಸಿ 2014 ರಲ್ಲಿ ಘೋಷಣೆಯಾದ ವಿಭಾಗೀಯ ಕಚೇರಿಗಳ ಕಾರ್ಯಸಾಧ್ಯತೆ ಬಗ್ಗೆ ಪುನರ್‌ ಪರಿಶೀಲನೆ ನಡೆಸಿ ಮೂರು ಯೋಜನೆಗಳನ್ನೇ ಕೈಬಿಟ್ಟಿದೆ.

2014ರಲ್ಲಿ ಘೋಷಣೆ ಮಾಡಲಾಗಿದ್ದ ಕಲಬುರಗಿ, ಜಮ್ಮು, ಸಿಲ್ಚಾರ್‌ ವಿಭಾಗ ರಚನೆಯಲ್ಲಿ ಅಗತ್ಯ ಸಂಪನ್ಮೂಲ, ಕಾರ್ಯಾಸಾಧುತ್ವ. ಆಡಳಿತಾತ್ಮಕ ಅಗತ್ಯದಂತಹ ವಿಚಾರಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಹಿರಿಯ ಅಧಿಕಾರಿಗಳ ಸಮೀತಿ ರಚಿಸಲಾಗಿತ್ತು, ಕಲಬುರಗಿಯೂ ಒಳಗೊಂಡಂತೆ 2014 ರಲ್ಲಿ ಘೋಷಣೆಯಾದಂತಹ ಮೂರೂ ವಿಭಾಗಗಳನ್ನು ಸದ್ಯಕ್ಕೆ ಕೈಬಿಡುವುದೇ ಸೂಕ್ತ ಎಂದು ಸಮೀತಿ ಸಲ್ಲಿಸಿದ ವರದಿ ಯಥಾವತ್ತಾಗಿ ಅಂಗೀಕರಿಸಿದ್ದೇವೆ’ ಎಂದು ರೇಲ್ವೆ ಸಚಿವ ಪಿಯೂಷ್‌ ಗೋಯಲ್‌ ಸಂಸತ್ತಿನಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಾಯಗಡ ಹೊಸ ವಿಭಾಗ ಸೃಷ್ಟಿಗೆ ಧಾವಂತ:

ಕೊರೋನಾ ಆರ್ಥಿಕ ಬಿಕ್ಕಟ್ಟಿನ ಕಾರಣ ಮುಂದೊಡ್ಡಿ 2014 ರಲ್ಲೇ ಘೋಷಣೆಯಾಗಿದ್ದ  3 ರೇಲ್ವೆ ವಿಭಾಗೀಯ ಕಚೇರಿ ಯೋಜನೆಗಳನ್ನು ರದ್ದು ಪಡಿಸಿರುವ ರೇಲ್ವೆ ಸಚಿವಾಲಯ ಯಾವುದೂ ಹೊಸ ವಿಭಾಗ ರಚಿಸೋದಿಲ್ಲವೆಂದು ಹೇಳುತ್ತಲೇ ಪೂರ್ವ ಕರಾವಳಿ ರೇಲ್ವೆ ವಲಯದಡಿ ರಾಯಗಡ ಹೊಸ ವಿಭಾಗ ರಚನೆಗೆ ಮುಂದಾಗಿದ್ದಲ್ಲದೆ ಪ್ರಸಕ್ತ ಬಜೆಟ್ಟಲ್ಲೇ 170 ಕೋರು ಅನುದಾನ ನೀಡಿದೆ. ಪೂರ್ವ ಕರಾವಳಿ ರೇಲ್ವೆ ವಲಯದ ಮುಖ್ಯ ಸಾರಿಗೆ ಯೋಜನಾಧಿಕಾರಿಯನ್ನೇ ರಾಯಗಡ ವಿಭಾಗ ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಿ ವಿಭಾಗ ಆರಂಭದ ಬಗ್ಗೆ ನೀಲನಕಾಶೆ ರೂಪಿಸಿ ಪೂರ್ವಭಾವಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿ ಸಂಸತ್ತಿನಲ್ಲಿ ರೇಲ್ವೆ ಖಾತೆ ಸಚಿವ ಪಿಯೂಷ್‌ ಗೋಯಲ್‌ ಅವರೇ ಉತ್ತರಿಸಿದ್ದಾರೆ. ಆದರೆ 7 ವರ್ಷಗಳ ಹಿಂದೆಯೇ ಅನುಮೋದನೆಗೊಂಡಿದ್ದ ಕಲಬುರಗಿ ರೇಲ್ವೆ ವಿಭಾಗ ಯೋಜನೆ ಕೇಂದ್ರಕ್ಕೆ ಅಪಥ್ಯವಾಗಿದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬಂತಾಗಿದೆ ಕಲಬುರಗಿಯವರ ಹಣೆಬರಹ, 2011ರಲ್ಲೇ ಮಂಜೂರಗಿದ್ದ ಟೆಕ್ಸಟೈಲ್‌ ಪಾರ್ಕ್ ರದ್ದಾದ ಬೆನ್ನಲ್ಲೇ 2014ರಲ್ಲೇ ಮಂಜೂರಾಗಿರುವ ರೇಲ್ವೆ ವಿಭಾಗ ಯೋಜನೆ ಕೈಬಿಡಲಾಗಿದೆ. ಈಗಾಗಲೇ ಏಮ್ಸ್‌ ಕೈ ತಪ್ಪಿ ಹೋಗಿದೆ, ಹೇಗಿದೆ ನೋಡಿ ಕಲ್ಯಾಣ ನಾಡಲ್ಲಿ ಡಬ್ಬಲ್‌ ಇಂಜಿನ್‌ ಆಡಳಿತ. ಕಲಬುರಗಿ ಸಂಸದರೇ ಜನತೆಗೆ ಉತ್ತರಿಸಬೇಕು

- ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವರು/ ಚಿತ್ತಾಪುರ ಶಾಸಕರು

click me!