ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿಯ ಸಂಬಂಧಿಯಿಂದ ಆಗ್ರಹ| ದೊಡ್ಡ ದೊಡ್ಡ ರಾಜಕಾರಣಿಗಳ ಪ್ರಭಾವ ಇರುವುದರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕೆ ಬೇಕು| ಘಟನೆ ಆದಾಗಿನಿಂದ ನಮ್ಮ ಊರಿಗೆ ನಮ್ಮ ಸಹೋದರನ ಕುಟುಂಬ ಬಂದಿಲ್ಲ| ಈಗ ಕುಟುಂಬ ಎಲ್ಲೆ ಇರಲಿ ಅವರಿಗೆ ರಕ್ಷಣೆ ನೀಡಬೇಕು|
ಬಾಗಲಕೋಟೆ(ಮಾ.18): ನಿನ್ನೆಯಷ್ಟೇ ಕುಟುಂಬದ ಪ್ರಮುಖರು ಗುಡೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಕೊಂಚ ನಿರಾಳ ತಂದಿದೆ. ಇಷ್ಟು ದಿನವಾದರೂ ನಮ್ಮ ಕುಟುಂಬ ಗ್ರಾಮಕ್ಕೆ ಬಂದಿರಲಿಲ್ಲ. ನಿನ್ನೆಯವರೆಗೆ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಮ್ಮ ಕುಟುಂಬದವರು ಸಿಕ್ಕಿರಲಿಲ್ಲ. ಆದರೆ ಮಂಗಳವಾರ ಅವರನ್ನು ನೋಡಿ ಕೊಂಚ ನಿರಾಳವಾಗಿದೆ ಎಂದು ಮಾಜಿ ಸಚಿವರ ಸಿಡಿ ಪ್ರಕರಣದ ಯುವತಿ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಇಳಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಜೊತೆ ನಮ್ಮ ಕುಟುಂಬದವರನ್ನೂ ಕಿಡ್ನಾಪ್ ಮಾಡಿರಬಹುದು ಅಂದುಕೊಂಡಿದ್ದೆವು. ಆದರೆ ಕುಟುಂಬದವರು ಕಾಣಿಸಿಕೊಂಡಿದ್ದಾರೆ. ಈಗ ಯುವತಿ ಕಾಣಿಸುತ್ತಿಲ್ಲ. ಈಗ ನಮ್ಮ ಮಗಳನ್ನು ಪತ್ತೆ ಹಚ್ಚಿ ಕೊಡಬೇಕು. ಜೊತೆಗೆ ನಮ್ಮ ಸಹೋದರನ ಕುಟುಂಬಕ್ಕೂ ಸರ್ಕಾರ ಭದ್ರತೆ ಕೊಡಬೇಕು ಎಂದು ಸಂತ್ರಸ್ತೆಯ ಸಂಬಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದರಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಪ್ರಭಾವ ಇರುವುದರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕೆ ಬೇಕು. ಘಟನೆ ಆದಾಗಿನಿಂದ ನಮ್ಮ ಊರಿಗೆ ನಮ್ಮ ಸಹೋದರನ ಕುಟುಂಬ ಬಂದಿಲ್ಲ. ಈಗ ಕುಟುಂಬ ಎಲ್ಲೆ ಇರಲಿ ಅವರಿಗೆ ರಕ್ಷಣೆ ನೀಡಬೇಕು ಮತ್ತು ಆಗಾಗ ನಮ್ಮ ಕುಟುಂಬದ ಬಗ್ಗೆ ಮಾಹಿತಿಯನ್ನು ನಮಗೂ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸೀಡಿ ಸಂತ್ರಸ್ತೆಗೆ ತಂದೆಯ ಊರಲ್ಲಿ ಬೆಂಬಲ
ಧೈರ್ಯ ತುಂಬಿದ ಗ್ರಾಮಸ್ಥರು:
ನ್ಯಾಯ ಕೊಡಲು ನಮ್ಮೂರು ಸದಾ ನಿಮ್ಮ ಹಿಂದೆ ಇರುತ್ತದೆ ಎಂದಿರುವ ಗುಡೂರ ಗ್ರಾಮಸ್ಥರು ಸರ್ಕಾರಕ್ಕೂ ಮನವಿ ಮಾಡುತ್ತೇವೆ. ಯುವತಿಯನ್ನು ಪತ್ತೆ ಹಚ್ಚಿ, ಕುಟುಂಬಕ್ಕೆ ಭದ್ರತೆ ಕೊಡಬೇಕೆಂದು ಕೇಳುತ್ತೇವೆ. ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಿ ನೊಂದ ಕುಟುಂಬಕ್ಕೆ ನ್ಯಾಯ ನೀಡಲಿ ಎಂದು ಆಶಿಸಿದ್ದಾರೆ.
ಗೃಹ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕುಟುಂಬದವರು ಅಜ್ಞಾತ ಸ್ಥಳಕ್ಕೆ ಹೋಗಿದ್ದನ್ನು ನೋಡಿದರೆ ಸಾಕಷ್ಟುಪ್ರಭಾವಿ ರಾಜಕಾರಣಿಗಳ ಪ್ರಭಾವ ಇದೆ ಎನಿಸುತ್ತದೆ. ಸರ್ಕಾರ ಸಿಡಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ ನ್ಯಾಯ ಕೊಡಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.