
ಕಲಬುರಗಿ: ಮಹಿಳೆಯರಿಗೆ ತವರಿನ ಮೇಲೆ ಅಗಾಧ ಪ್ರೀತಿ. ತಮ್ಮ ಮಕ್ಕಳು ಮದುವೆಯಾಗಿ ಹೋದ್ರೂ ತಾಯಂದಿರಿಗೆ ತನ್ನ ತವರಿಗೆ ಹೋಗಿ ಒಂದೆರಡು ದಿನ ಉಳಿದುಕೊಳ್ಳಬೇಕು ಎಂಬ ಆಸೆ ಇರುತ್ತೆ. ಹಾಗೆಯೇ ತಾಯಿ ಮತ್ತು ಅಜ್ಜಿಯ ಸೀರೆ, ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿರುತ್ತಾರೆ. ತಮ್ಮ ಬಳಿಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ಸೀರೆಗಳಿದ್ರೂ, ಅಮ್ಮನ ಹತ್ತಿರವಿರೋ 100 ರೂಪಾಯಿ ಸೀರೆ ಮೇಲೆ ಆಸೆಯಾಗುತ್ತದೆ. ಇದೀಗ ಇಂತಹವುದೇ ಒಂದು ಘಟನೆಯ ನೈಜ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನನಗೆ ನಿನ್ನಲ್ಲಿರುವ ರೇಷ್ಮೆ ಸೀರೆ ಬೇಕೆಂದು ಕೇಳಿದ ಮೊಮ್ಮಗಳಿಗೆ, ಅಜ್ಜಿ ತನ್ನ ತಿಜೋರಿಯಲ್ಲಿರುವ ಗಂಟು ತೆಗೆದು ತೋರಿಸಿ ಕಣ್ಣೀರು ಹಾಕಿದ್ದಾರೆ.
ಹೌದು, ಇಂತಹ ಮನಕಲುಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊಮ್ಮಗಳು ಸಲುಗೆಯಿಂದ ಕೇಳಿದ್ದಕ್ಕೆ, ಒಂದು ಕ್ಷಣವೂ ಯೋಚಿಸದ ಅಜ್ಜಿ ತಿಜೋರಿಯನ್ನೇ ತೆಗೆದು ತೋರಿಸಿದ್ದಾರೆ. ಅಜ್ಜಿ ಬಳಿಯಲ್ಲಿದ್ದ ಸೀರೆಗಳ ಕಲೆಕ್ಷನ್ ನೋಡಿ ಮೊಮ್ಮಗಳು ಸಹ ಬೇಸರದಿಂದ ನಾನು ಕೇಳಬಾರದಿತ್ತು ಅಂದ್ಕೊಂಡಿದ್ದಾರೆ. ಈ ವಿಡಿಯೋವನ್ನು Asharani Rati ಎಂಬವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ (creating_memories1502) ಶೇರ್ ಮಾಡಿಕೊಂಡಿದ್ದಾರೆ.
ಅಜ್ಜಿಯನ್ನು ಕರೆಯುವ ಆಶಾರಾಣಿ ಅವರು, ನಿನ್ನ ತಿಜೋರಿಯಲ್ಲಿರುವ ಹಳೆಯ ರೇಷ್ಮೆ ಸೀರೆಯನ್ನು ತೋರಿಸು ಎಂದು ಕರೆಯುತ್ತಾರೆ. ಕೈಯಲ್ಲೊಂದು ಕೋಲು ಹಿಡಿದುಕೊಂಡು ಪುಟ್ಟ ಹೆಜ್ಜೆಯನ್ನಿಡುತ್ತಾ ಅಜ್ಜಿ ಮನೆಯೊಳಗೆ ಬರುತ್ತಾರೆ. ತಿಜೋರಿ ತೆರೆಯುತ್ತಿದ್ದಂತೆ ಅಲ್ಲಿ ಕೌದಿಗಳು ಕಾಣಿಸುತ್ತವೆ. ನಂತರ ಕೆಳಭಾಗದಲ್ಲಿರುವ ಗಂಟನ್ನು ಅಜ್ಜಿ ಹೊರಗೆ ತೆಗೆದು, ಅದರಲ್ಲಿರುವ ತಮ್ಮ ಸೀರೆಗಳನ್ನು ತೋರಿಸುತ್ತಾರೆ.
ನಮ್ಮ ಬಳಿಯಲ್ಲಿ ಎಲ್ಲಿಯ ರೇಷ್ಮೆ ಸೀರೆ ಬರುತ್ತೆ? ಕೂಲಿ ಮಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರಿಗೊಂದು ಮದುವೆ ಮಾಡೋದರಲ್ಲಿಯೇ ಜೀವನದ ಮುಕ್ಕಾಲು ಭಾಗ ಕಳೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೇಷ್ಮೆ ಸೀರೆ ಎಲ್ಲಿಂದ ಖರೀದಿ ಮಾಡಬೇಕು ಎಂದು ಹೇಳುತ್ತಾ ಅಜ್ಜಿ ಕಣ್ಣೀರು ಹಾಕಿದರು. ಕೂಲಿ ಮಾಡಿಕೊಂಡಿಯೇ ತಮ್ಮೆಲ್ಲಾ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಿದ್ದಾರೆ ಎಂದು ಆಶಾರಾಣಿ ಹೇಳುತ್ತಾರೆ.
ಅಜ್ಜಿ ಮಗ ಮತ್ತು ಸೊಸೆ, ಮಗಳು ಮತ್ತು ಅಳಿಯ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಇಂದು ಮಕ್ಕಳಿಂದಾಗಿ ಅಜ್ಜಿ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದಾರೆ. ಇಡೀ ಜೀವನದುದ್ದಕ್ಕೂ ತನಗಾಗಿ ಒಂದು ಒಳ್ಳೆಯ ಸೀರೆಯನ್ನು ಖರೀದಿಸದ ಜೀವವನ್ನು ನೋಡಿ ಮಹಿಳಾ ನೆಟ್ಟಿಗರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಆಶಾರಾಣಿ ಅವರು ಪ್ರೊಫೈಲ್ ಪ್ರಕಾರ, ಕಲಬುರಗಿ ಜಿಲ್ಲೆಯ ಕೋಡ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ. ಆಶಾರಾಣಿಯವರ ಈ ವಿಡಿಯೋಗೆ 1 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ.
ಇದನ್ನೂ ಓದಿ: 300 ವರ್ಷದ ಹಳೆ ಮನೆಯಲ್ಲಿರುವ ಅಜ್ಜಿ ಬಚ್ಚಿಟ್ಟಿದ್ದ ಪೆಟ್ಟಿಗೆ ಓಪನ್ ಮಾಡಿದ ಮೊಮ್ಮಗ