
Former Karnataka Deputy CM KS Eshwarappa Alleges Death Threats: ಇಬ್ಬರು ಅನ್ಯಕೋಮಿನ ವ್ಯಕ್ತಿಗಳಿಂದ ನನಗೆ ಕರೆ ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರಿಗೆ ದೂರು ಸಲ್ಲಿಸಿದರು.
ಅ.17 ರಂದು ರಾತ್ರಿ 8.49ಕ್ಕೆ ರಿಜ್ವಾನ್ ಬೇಗ್ ಎಂಬ ವ್ಯಕ್ತಿ 7019994981 ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು, ಅಂದೇ ದಿನ ರಾತ್ರಿ 10.49 ರಂದು ಸಮಯದಲ್ಲಿ ಡಿಜಿಟಲ್ ಫರಾನ್ ರಶೀದ್ ಎಂಬ ವ್ಯಕ್ತಿ 9823658527 ಸಂಖ್ಯೆಯಿಂದ ಕರೆ ಮಾಡಿ ವೈಯಕ್ತಿಕವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ತೊಂದರೆಯಾಗಿದೆ. ಇಂತಹ ದುಷ್ಟ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಭಕ್ತ ಬಳಗದವರ ಜೊತೆ ಸೇರಿ ಎಸ್‌ಪಿಗೆ ಮನವಿ ಸಲ್ಲಿಸಿದರು.
ಎಸ್ಪಿಗೆ ದೂರು ನೀಡಿದ ಬಳಿಕ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ನಾನು ಕುಟುಂಬದವರ ಜೊತೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ ಮೊದಲು 7019994981 ನಂಬರ್‌ನಿಂದ ಕರೆ ಬಂತು. ಕರೆ ಮಾಡಿದ ವ್ಯಕ್ತಿ "ನೀನು ಈಶ್ವರಪ್ಪನೇ, ಮಾಜಿ ಡಿಸಿಎಂ ಅವರಾ" ಎಂದು ಕೇಳಿದ. ಹೌದು ನಾನು ಈಶ್ವರಪ್ಪ ಮಾತನಾಡುತ್ತಿರುವುದು ಅಂದೆ. ಆಗ ಆತ ನನ್ನನ್ನು ನಿಂದಿಸಲು ಶುರು ಮಾಡಿದ. ನನಗೆ ಅದು ಸರಿಯಾಗಿ ಕೇಳುತ್ತಿರಲಿಲ್ಲ. ಆಗ ನಾನು, ಚಿತ್ರಮಂದಿರದಲ್ಲಿದ್ದೇನೆ. ಆಮೇಲೆ ಕರೆ ಮಾಡಿ ಎಂದೆ. ಆದರೂ ಆತ ಬಿಟ್ಟೂಬಿಡದೆ ಬೈಯುತ್ತಾ ಕರೆ ಕಟ್ ಮಾಡಿದ. ನಂತರ ಆತ ಮತ್ತೆ ಕರೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಇದಾದ 2 ಗಂಟೆ ಬಳಿಕ ಮತೊಬ್ಬ 9823658527 ನಂಬರ್‌ನಿಂದ ಕರೆ ಮಾಡಿ, ನೀವು ಈಶ್ವರಪ್ಪನವರೇ? ಎಂದು ಕೇಳಿದ. ನೀವು ಜಮೀರ್ ಅಹಮದ್ ಅವರ ಬಗ್ಗೆ ಏನೇನು ಮಾತನಾಡಿದ್ದೀರಿ, ನಾನು ನಿಮಗೆ ದಾಖಲೆ ಕೊಡುತ್ತೇನೆ ಎಂದ. ನಾನು ಕೊಡಿ ಎಂದೆ. ಆಗ ಆತ ಕೂಡ ಫೋನ್ ಕಟ್ ಮಾಡಿದ. ಇಲ್ಲಿ ಇಬ್ಬರು ಸಹ ನನಗೆ ಒಂದು ರೀತಿ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ತಕ್ಷಣ ಇಬ್ಬರನ್ನು ಗುರುತಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ನನಗೆ ಈ ಹಿಂದೆಯೂ ಬೆದರಿಕೆ ಬಂದಿವೆ. ಆಗಲೂ ಸಹ ನಾನು ಮನವಿ ಮಾಡಿಕೊಂಡಿದ್ದೆ. ಆದರೆ, ಈವರೆಗೂ ಆರೋಪಿಗಳನ್ನು ಹಿಡಿದಿಲ್ಲ. ಈಗಲಾದರೂ ಆರೋಪಿಗಳನ್ನು ಬಂಧಿಸಬೇಕು ಎಂದರು. ಭದ್ರತೆ ಬಗ್ಗೆ ನಾನು ಕೇಳಲ್ಲ. ಹಿಂದೆಯೇ ನಾನು ಕೇಳಿದ್ದೆ. ನಾನು ಪದೇ ಪದೆ ಭದ್ರತೆ ಕೇಳಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.