
ಕಲಬುರಗಿ (ಸೆ.3): ರೌಡಿಶೀಟರ್‌ಗಳಿಗೆ ಗಡಿಪಾರು ಮಾಡುವುದಾಗಿ ಹೆದರಿಸಿ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಪೊಲೀಸ್ ಪೇದೆಗಳು ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಪರಶುರಾಮ್ ಮತ್ತು ವೀರೇಶ್ ಲೋಕಾಯುಕ್ತ ಬಲೆಗೆ ಬಿದ್ದಿರೋ ಪೇದೆಗಳು.
ಬ್ರಹ್ಮಪುರ ಪೊಲೀಸ್ ಠಾಣೆಯ ಪೇದೆಗಳಾದ ವೀರೇಶ್, ಪರಶುರಾಮ್ ಇಬ್ಬರು ಸೇರಿಕೊಂಡು ರೌಡಿಶೀಟರ್ ಖನ್ನಾ ಪಟೇಲ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಕೇಳಿದಷ್ಟು ಹಣ ಕೊಡದಿದ್ದರೆ ಗಡಿಪಾರು ಮಾಡುವುದಾಗಿ ಹೆದರಿಸಿದ್ದಾರೆ. ಖನ್ನಾ ಪಟೇಲ್‌ಗೆ ಗಡಿಪಾರಿನ ಬೆದರಿಕೆ ಹಾಕಿ ಮೊದಲಿಗೆ 50,000 ಲಂಚ ಪಡೆದಿದ್ದಾರೆ. ಅಷ್ಟು ಸಾಲದ್ದಕ್ಕೆ ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಇತ್ತ ಲೋಕಾಯುಕ್ತ ಎಸ್‌ಪಿ ಸಿದ್ದರಾಜ್ ನೇತೃತ್ವದಲ್ಲಿ ಬಲೆಗೆ ಕೆಡವಲು ಸಿದ್ಧತೆ ನಡೆಸಿದ್ದಾರೆ.
ಇತ್ತ ಮೊದಲು 50000 ರೂಪಾಯಿ ಪಡೆದು ಲಂಚದ ರುಚಿ ಹತ್ತಿಸಿಕೊಂಡಿದ್ದ ಇಬ್ಬರು ಪೇದೆಗಳು ಖನ್ನಾ ಪಟೇಲ್‌ನ ತಾವಿದ್ದಲ್ಲಿಗೆ ಕರೆಸಿಕೊಂಡು ಉಳಿದ ಲಂಚ ಪಡೆಯಲು ಪ್ಲಾನ್ ಮಾಡಿದ್ದಾರೆ. ಅದರಂತೆ ಬ್ರಹ್ಮಪುರ ಪೊಲೀಸ್ ಠಾಣೆ ಕಾಂಪೌಂಡಿನಲ್ಲೇ 20,000 ರೂಪಾಯಿ ಲಂಚ ಪಡೆಯಲು ಕೈಚಾಚಿದಾಗಲೆ.. ಇತ್ತ ಇದೇ ಕ್ಷಣಕ್ಕೆ ಕಾದು ಕುಳಿತಿದ್ದ ಲೋಕಾಯುಕ್ತ ಎಸ್ಪಿ ಸಿದ್ಧರಾಜು ಟೀಂ ದಾಳಿ ನಡೆಸಿದೆ.
ಮೊದಲಿಗೆ 50,000 ಲಂಚ ಪಡೆದಾಗ ಯಾವುದೇ ದಾಳಿ ನಡೆದಿರಲಿಲ್ಲ. ಈ ಬಾರಿ ಠಾಣೆ ಬಳಿಯೇ ಲಂಚ ಪಡೆಯುವುದೇ ಸೇಫ್ ಎಂದುಕೊಂಡಿದ್ದ ಕಾನ್‌ಸ್ಟೇಬಲ್‌ಗಳು, ಲೋಕಾಯುಕ್ತ ಪೊಲೀಸರನ್ನ ಕಂಡು ಬೆಚ್ಚಿಬಿದ್ದಾರೆ. ಈ ವೇಳೆ ಪರಶುರಾಮ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆ ಸ್ಥಳದಿಂದ ಪೊಲೀಸ್ ಪೇದೆ ವೀರೇಶ್ ತಪ್ಪಿಸಿಕೊಂಡಿದ್ದಾರೆ. ಸದ್ಯ ಸೆರೆ ಸಿಕ್ಕಿರುವ ಪೇದೆ ಪರಶುರಾಮರನ್ನ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ.