KPSC ಅಕ್ರಮದ ಕಿಂಗ್‌ಪಿನ್ ಕನ್ನಾಳೆ ಜೊತೆ ಸ್ವೀಟ್ ಸವಿದ ಸಚಿವ ಖಂಡ್ರೆ; ಭಾಲ್ಕಿಯಲ್ಲಿ 'ಸಹೋದರರ ಸವಾಲ್' ಸ್ಪಷ್ಟೀಕರಣಕ್ಕೆ ಬಿಜೆಪಿ ಲೇವಡಿ!

Published : Sep 03, 2026, 03:53 PM IST
Eswar Khandre

ಸಾರಾಂಶ

ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಜೊತೆ ಸಚಿವ ಈಶ್ವರ್ ಖಂಡ್ರೆ ಸಿಹಿ ಸವಿದ ಫೋಟೋ ವೈರಲ್ ಆಗಿದ್ದು, ಭಾಲ್ಕಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಫೋಟೋವನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಸಚಿವರ ವಿರುದ್ಧ ರಾಜಕೀಯ ಗಿಮಿಕ್ ಆರೋಪ ಮಾಡಿದ್ದು, ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮದ ವಿಚಾರವು ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಅಕ್ರಮ ಹಗರಣದ ಕೊಂಡಿ ಭಾಲ್ಕಿಯ ರಾಜಕೀಯ ಅಂಗಳ ತಲುಪಿದ್ದು, ಬಿಜೆಪಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಕಾವೇರಿದ ವಾಗ್ದಾಳಿ ನಡೆಸಿದ್ದಾರೆ.

ಅಕ್ರಮದ ಕಿಂಗ್‌ಪಿನ್ ಜೊತೆಗಿನ ವೈರಲ್ ಫೋಟೋ!

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಸೂತ್ರಧಾರ ಅಥವಾ 'ಕಿಂಗ್‌ಪಿನ್' ಎಂದೇ ಬಿಂಬಿತವಾಗಿರುವ ಬಸವರಾಜ್ ಕನ್ನಾಳೆ ಜೊತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಿಹಿ ತಿನ್ನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋ ಬಹಿರಂಗಗೊಳ್ಳುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ರಂಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈಶ್ವರ ಖಂಡ್ರೆ ಸ್ಪಷ್ಟೀಕರಣಕ್ಕೆ ವ್ಯಂಗ್ಯ!

ಈ ಘಟನೆಗೆ ಸಚಿವ ಈಶ್ವರ್ ಖಂಡ್ರೆ ನೀಡಿದ ಸ್ಪಷ್ಟೀಕರಣವನ್ನು ಪ್ರಕಾಶ್ ಖಂಡ್ರೆ ಅವರು ತೀವ್ರವಾಗಿ ಹಾಸ್ಯಮಾಡಿದ್ದಾರೆ. "ಬಸವರಾಜ್ ಕನ್ನಾಳೆ ಅವರು ನನ್ನ ಬಳಿ ಬಂದು, ಭಾಲ್ಕಿ ಕ್ಷೇತ್ರದಲ್ಲಿ ನಿಮ್ಮೆದುರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ನಾನು ಸಿಹಿ ತನಿಸಿದೆ" ಎಂದು ಸಚಿವರು ನೀಡಿದ ಸಮಜಾಯಿಷಿಯನ್ನು ಮಾಜಿ ಶಾಸಕರು ಕಡ್ಡಾಯವಾಗಿ ತಳ್ಳಿಹಾಕಿದ್ದಾರೆ. "ಸಚಿವರಿಗೆ ಸ್ವೀಟ್ ತಿನ್ನಿಸಲು ಹೋದವರು ಯಾರಾದರೂ 'ನಾನು ನಿಮ್ಮ ವಿರುದ್ಧವೇ ಸ್ಪರ್ಧಿಸುತ್ತೇನೆ' ಎಂದು ಎದುರಿಗೇ ಹೇಳುತ್ತಾರೆಯೇ? ಇಂತಹ ಬಾಲಿಶ ಮಾತನ್ನು ಯಾರೂ ನಂಬಲು ಸಾಧ್ಯವಿಲ್ಲ" ಎಂದು ಅವರು ಲೇವಡಿ ಮಾಡಿದ್ದಾರೆ.

ಭಾಲ್ಕಿ ರಾಜಕೀಯ ಗಿಮಿಕ್ ಹಾಗೂ ಕುಮ್ಮಕ್ಕಿನ ಆರೋಪ!

ಭಾಲ್ಕಿ ಕ್ಷೇತ್ರದಲ್ಲಿ ಸ್ವಂತ ರಾಜಕೀಯ ಲಾಭಕ್ಕಾಗಿ ಸಚಿವ ಈಶ್ವರ್ ಖಂಡ್ರೆ ಅವರು ದೊಡ್ಡ ಗಿಮಿಕ್ ಮಾಡುತ್ತಿದ್ದಾರೆ ಎಂದು ಪ್ರಕಾಶ್ ಖಂಡ್ರೆ ಕಿಡಿಕಾರಿದ್ದಾರೆ. ಬಸವರಾಜ್ ಕನ್ನಾಳೆ ರಾಜಕೀಯವಾಗಿ ಮುನ್ನೆಲೆಗೆ ಬರಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಸ್ವತಃ ಈಶ್ವರ್ ಖಂಡ್ರೆ ಅವರೇ ಹಿನ್ನೆಲೆಯಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ವಿಪಕ್ಷಗಳ ಮತಗಳನ್ನು ಒಡೆಯುವ ಹಾಗೂ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಆದರೆ, ಈ ರೀತಿಯ ತಂತ್ರಗಳು ಭಾಲ್ಕಿಯಲ್ಲಿ ನಡೆಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಸೈದ್ಧಾಂತಿಕ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ!

ಅಲ್ಲದೆ, ಬಿಜೆಪಿ ಟಿಕೆಟ್ ನೀಡಿಕೆ ವಿಷಯವಾಗಿಯೂ ಸ್ಪಷ್ಟನೆ ನೀಡಿರುವ ಮಾಜಿ ಶಾಸಕರು, ಈಶ್ವರ್ ಖಂಡ್ರೆ ಅವರು ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಸೂಚಿಸುವ ಅಥವಾ ಬೆಂಬಲಿಸುವ ಯಾವುದೇ ಅಭ್ಯರ್ಥಿಗೆ ನಮ್ಮ ಬಿಜೆಪಿಯಲ್ಲಿ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆಯೇ ಹೊರತು ಕಾಂಗ್ರೆಸ್ ಸಚಿವರ ಗಿಮಿಕ್‌ಗಳ ಮೇಲಲ್ಲ" ಎಂದು ಖಡಕ್ಕಾಗಿ ನುಡಿದಿದ್ದಾರೆ.

ನೇಮಕಾತಿ ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ!

ಕೆಪಿಎಸ್‌ಸಿ ಅಧ್ಯಕ್ಷರ ನೇಮಕದ ವಿಚಾರವಾಗಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಕಾಶ್ ಖಂಡ್ರೆ, ಕೆಪಿಎಸ್‌ಸಿ ಅಧ್ಯಕ್ಷರನ್ನ ನೇಮಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇರಬಹುದು. ಆದರೆ, ಅಕ್ರಮ ನಡೆದಿರುವುದು ಮಾತ್ರ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಎಂದು ಪ್ರತಿಪಾದಿಸಿದರು. ಸರ್ಕಾರದ ಕಣ್ಣಳತೆಯಲ್ಲೇ ಅಕ್ರಮಗಳು ತಲೆಯೆತ್ತಿದ್ದು, ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ. ಹೀಗಾಗಿ ಈ ಬೃಹತ್ ನೇಮಕಾತಿ ಹಗರಣಕ್ಕೆ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅವರ ಸಚಿವರೇ ನೇರ ಹೊಣೆಗಾರರು ಎಂದು ಅವರು ಪ್ರತಿಪಾದಿಸಿದ್ದಾರೆ.

PREV
Read more Articles on
click me!

Recommended Stories

ಆಟೋ ಮೀಟರ್ ಜೊತೆಗೆ ಇವರ ಪ್ಯಾಷನ್ ಕೂಡ ಓಡುತ್ತೆ, ಹಗಲಿನಲ್ಲಿ ಚಾಲಕ, ಸಂಜೆಯಾದರೆ ಟೇಬಲ್ ಟೆನ್ನಿಸ್ ಕೋಚ್
Kodagu: ಮಳೆ ಕೊರತೆಯಿಂದ ಕೊಳೆರೋಗದ ಕರಾಳ ಛಾಯೆ; ಆತಂಕದಲ್ಲಿ ಕಾಫಿ ಬೆಳೆಗಾರರು, ಪರಿಹಾರಕ್ಕಾಗಿ ಆಗ್ರಹ