ಆರಂಭದಲ್ಲಷ್ಟೇ ಸರ್ಕಾರಿ ಬಸ್‌ನಲ್ಲಿ ಮಹಿಳಾ ‘ಶಕ್ತಿ’ ಇರಲಿದೆ. ಕ್ರಮೇಣ ಇಳಿಮುಖವಾಗಲಿದೆ’ ಎಂಬ ನಿರೀಕ್ಷೆ ಪೂರ್ಣ ಹುಸಿಯಾಗಿದೆ. ಆಷಾಢ ಮಾಸದಲ್ಲೂ ಮಹಿಳೆಯರು ರಾಜ್ಯದ ವಿವಿಧ ಪ್ರಮುಖ ದೇವಸ್ಥಾನಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಮಹಿಳೆಯರ ಪ್ರಯಾಣ ಅಧಿಕ ಶ್ರಾವಣ ಮಾಸದಲ್ಲೂ ಮುಂದುವರಿದಿದೆ. ಉಳಿದಂತೆ ದುಡಿಯುವ ವರ್ಗದ ಜನರು ಉಚಿತ ಬಸ್ ಪ್ರಯಾಣದ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.
ಕೆ.ಎಂ. ಮಂಜುನಾಥ್
ಬಳ್ಳಾರಿ(ಆ.11): ಮಹಿಳಾ ಸಬಲೀಕರಣ ಆಶಯ ಹೊತ್ತು ರಾಜ್ಯ ಸರ್ಕಾರ ಆರಂಭಿಸಿದ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಶುರುಗೊಂಡು ಎರಡು ತಿಂಗಳ ಬಳಿಕವೂ ಮಹಿಳೆಯರ ಉತ್ಸಾಹ ಕುಗ್ಗಿಲ್ಲ. ‘ಆರಂಭದಲ್ಲಷ್ಟೇ ಸರ್ಕಾರಿ ಬಸ್‌ನಲ್ಲಿ ಮಹಿಳಾ ‘ಶಕ್ತಿ’ ಇರಲಿದೆ. ಕ್ರಮೇಣ ಇಳಿಮುಖವಾಗಲಿದೆ’ ಎಂಬ ನಿರೀಕ್ಷೆ ಪೂರ್ಣ ಹುಸಿಯಾಗಿದೆ. ಆಷಾಢ ಮಾಸದಲ್ಲೂ ಮಹಿಳೆಯರು ರಾಜ್ಯದ ವಿವಿಧ ಪ್ರಮುಖ ದೇವಸ್ಥಾನಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಮಹಿಳೆಯರ ಪ್ರಯಾಣ ಅಧಿಕ ಶ್ರಾವಣ ಮಾಸದಲ್ಲೂ ಮುಂದುವರಿದಿದೆ. ಉಳಿದಂತೆ ದುಡಿಯುವ ವರ್ಗದ ಜನರು ಉಚಿತ ಬಸ್ ಪ್ರಯಾಣದ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.
undefined
ಮಹಿಳಾ ಓಡಾಟದ ಫಲಿತ ಎಂಬಂತೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಲಾಭದ ಕಡೆ ವಾಲಿದೆ. ಇಲಾಖೆ ಮೂಲಗಳೇ ಹೇಳುವ ಪ್ರಕಾರ ಸಾರಿಗೆ ಇಲಾಖೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ.ಕ.ರ.ಸಾ. ನಿಗಮದ ಒಟ್ಟು ಸಾರಿಗೆ ಆದಾಯ .54 ಕೋಟಿ ಮೀರಿದೆ!
ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಸಿಬ್ಬಂದಿಗಿಲ್ಲ ವೇತನ ಗ್ಯಾರಂಟಿ, ಪಗಾರ ಸಿಗದೆ ಪರದಾಟ..!
9 ದಿನದಲ್ಲಿ 74 ಸಾವಿರ ಪ್ರಯಾಣಿಕರು:
ಬಳ್ಳಾರಿ ನಗರದಲ್ಲಿ ಕಳೆದ 9 ದಿನಗಳಲ್ಲಿ(ಆ. 1ರಿಂದ ಈವರೆಗೆ) 1,39,978 ಮಹಿಳೆಯರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದರೆ, 74,776 ಪುರುಷರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಶುರುಗೊಂಡ ಬಳಿಕ ಬಳ್ಳಾರಿ ವಿಭಾಗದಿಂದಲೇ ದಿನವೊಂದಕ್ಕೆ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 67,7456!
ಜೂನ್ 11ರಂದು ‘ಶಕ್ತಿ’ ಯೋಜನೆ ಶುರುವಾದ ಬಳಿಕ ಈವರೆಗೆ ಮಹಿಳೆಯರ ಓಡಾಟದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ದಿನದಿನಕ್ಕೆ ಮಹಿಳಾ ಶಕ್ತಿ ಏರಿಕೆಯ ಕ್ರಮಾಂಕದಲಿಯೇ ವಿನಾ, ಇಳಿಕೆಯ ಯಾವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಸಾರಿಗೆ ಇಲಾಖೆಯ ಬಸ್‌ಗಳು ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ‘ಶಕ್ತಿ’ ಯೋಜನೆ ಜಾರಿಯಾದ ಬಳಿಕವೂ ದಿನವಿಡೀ ಬಸ್‌ಗಳು ಭರ್ತಿಯಾಗಿ ಸಂಚರಿಸಿವೆ. ಜೂನ್ ತಿಂಗಳಲ್ಲಿ ಬಳ್ಳಾರಿ ವಿಭಾಗದಲ್ಲಿ 9,40,111 ಮಹಿಳಾ ಪ್ರಯಾಣಿಕರು ಓಡಾಟ ಮಾಡಿದ್ದು, ಜುಲೈನಲ್ಲಿ 19,60,673 ಮಹಿಳೆಯರು ಪ್ರಯಾಣಿಸಿದ್ದಾರೆ. ಜೂನ್ ತಿಂಗಳಲ್ಲಿ ವಿಭಾಗಕ್ಕೆ .3.77 ಕೋಟಿ ಆದಾಯ ಬಂದಿದ್ದು, ಜುಲೈನಲ್ಲಿ .7.50 ಕೋಟಿ ಬಂದಿದೆ. ಸದರಿ ಮೊತ್ತವನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದೆ.
40 ಹೊಸ ಬಸ್‌ಗಳಿಂದ ಅನುಕೂಲ:
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭದ ಮೊದ ಮೊದಲು ಭಾರೀ ಸವಾಲು ಎದುರಾಯಿತು. ಒಂದು ಊರಿನಿಂದಲೇ 25ರಿಂದ 30 ಜನ ಮಹಿಳೆಯರು ಬಸ್ ಹತ್ತುತ್ತಿದ್ದರು. ಹೀಗಾದರೆ ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಡಿತು. ಒಂದೆಡೆ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು. ಮತ್ತೊಂದೆಡೆ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದು ದುಸ್ತರ ಎನಿಸಿತು. ರಾಜ್ಯ ಸರ್ಕಾರ ಬಳ್ಳಾರಿ ವಿಭಾಗಕ್ಕೆ 40 ಹೊಸ ಬಸ್‌ಗಳನ್ನು ನೀಡಿದ ಬಳಿಕ ಒತ್ತಡ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ವಿಭಾಗೀಯ ಸಂಚಾಲನಾಧಿಕಾರಿ ಬಿ. ಚಾಮರಾಜ್.
ಶಕ್ತಿ ಯೋಜನೆ ಬಸ್‌ಗಳಿಗೆ 2,000 ಖಾಸಗಿ ಡ್ರೈವರ್‌ಗಳ ನೇಮಕ: ರಸ್ತೆಗಿಳಿಯಲಿವೆ ದುರಸ್ತಿಗೊಂಡ 500 ಬಸ್‌ಗಳು
ಪ್ರಯಾಣಿಕರ ಅನುಕೂಲಕ್ಕಾಗಿ ಈ ಮೊದಲಿದ್ದ 388 ಶೆಡ್ಯೂಲ್ಡ್‌ಗಳನ್ನು 405ಕ್ಕೆ ಹೆಚ್ಚಳ ಮಾಡಿಕೊಳ್ಳಲಾಗಿದೆ. 15 ಹೊಸ ರೂಟ್‌ಗಳು ಹಾಗೂ 75 ಹೊಸ ಟ್ರಿಪ್‌ಗಳನ್ನು ಆರಂಭಿಸಲಾಗಿದೆ. 110 ನಿರ್ವಾಹಕರ ಕೊರತೆಯಿದೆ. ಏಜೆನ್ಸಿ ಮೂಲಕ 64 ಜನರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಇನ್ನು 36 ಜನ ನೇಮಕವಾಗಬೇಕಿದೆ ಎಂದು ಚಾಮರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
‘ಶಕ್ತಿ’ ಯೋಜನೆ ಮುನ್ನ ದಿನವೊಂದಕ್ಕೆ 15 ಸಾವಿರದಷ್ಟಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ 60 ಸಾವಿರ ದಾಟಿದೆ. ಮೊದಲು ಬಸ್‌ನಲ್ಲಿ ಶೇ. 70ರಷ್ಟುಪುರುಷರು ಹಾಗೂ 30ರಷ್ಟುಮಹಿಳೆಯರು ಪ್ರಯಾಣಿಸುತ್ತಿದ್ದರು. ಇದೀಗ ಶೇ. 50ರಷ್ಟು ಮಹಿಳೆಯರು ಹಾಗೂ ಶೇ. 50ರಷ್ಟು ಪುರುಷರು ಪ್ರಯಾಣಿಸುತ್ತಿದ್ದಾರೆ ಎಂದು ಬಳ್ಳಾರಿ ವಿಭಾಗೀಯ ಸಂಚಲನಾಧಿಕಾರಿ ಚಾಮರಾಜ್ ತಿಳಿಸಿದ್ದಾರೆ.