ಕಾಂಗ್ರೆಸ್‌ ಸಂಸದನಿಂದ ಲೈಂಗಿಕ ಕಿರುಕುಳ: ಬೀದಿಗಿಳಿದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಪ್ರತಿಭಟನೆ

Kannadaprabha News   | Kannada Prabha
Published : Oct 14, 2026, 11:24 AM IST
Shivamogga BJP protest

ಸಾರಾಂಶ

ಜೆಎನ್‌ಯು ಪ್ರಾಧ್ಯಾಪಕ ಹಾಗೂ ಕಾಂಗ್ರೆಸ್ ಸಂಸದ ಡಾ.ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಮಣಿಪುರದ 11 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಪ್ರಾಧ್ಯಾಪಕನೋರ್ವನ ಲೈಂಗಿಕ ಕಿರುಕುಳವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಂಗಳವಾರ ನಗರದ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಬಳಿಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಜೆಎನ್‌ಯು ಪ್ರಾಧ್ಯಾಪಕ, ಮಣಿಪುರದ ಕಾಂಗ್ರೆಸ್ ಸಂಸದ ಡಾ.ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಎಂಬುವವರು ಅಲ್ಲಿನ 11 ವಿದ್ಯಾರ್ಥಿನಿಯರ ಮೇಲೆ ನೆಡೆಸಿದ ಲೈಂಗಿಕ ಕಿರುಕುಳವನ್ನು ಶಿವಮೊಗ್ಗ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಗೌರವ, ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ಒದಗಿಸಬೇಕು. ಇಂಥಹ ಆರೋಪಗಳು ಬಂದಾಗ ನಿರ್ಲಕ್ಷಿಸದೆ ಕಾನೂನು ಮತ್ತು ವಿವಿ ನಿಯಮಗಳ ಪ್ರಕಾರ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದ್ದು, ಸಂಬಂಧಪಟ್ಟ ಪ್ರಾಧ್ಯಾಪಕರ ವಿರುದ್ಧ ಇರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಒದಗಿಸಿ, ಯಾವುದೇ ರೀತಿಯ ಒತ್ತಡ ಅಥವಾ ಪ್ರತೀಕಾರಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಸುರಕ್ಷತಾ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪಾರದರ್ಶಕ ವಿಚಾರಣೆ ನಡೆಸಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಜಾಗೃತಿ ಹಾಗೂ ದೂರು ಪರಿಹಾರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ನ್ಯಾಯಯುತ ಹೋರಾಟ ಹತ್ತಿಕ್ಕುತ್ತಿದೆ

ಅಲ್ಲದೇ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸೋಮವಾರ ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಮುನ್ಸೂಚನೆ ನೀಡದೆ ಏಕಾ ಏಕಿ ಕಪ್ಪು ಪಟ್ಟಿ ತೋರಿಸಿ ಸಚಿವರ ಕಾರನ್ನು ಅಡ್ಡಗಟ್ಟಿ ಕಾನೂನು ಉಲ್ಲಂಘಿಸಿ ಅವಮಾನಿಸಿದ್ದಾರೆ. ಕಾಂಗ್ರೆಸ್ ಸಂಸದನ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲು ಯತ್ನಿಸಿದಾಗ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿಗೆ ಬಿಗಿ ಭದ್ರತೆ ಒದಗಿಸಿ ಒಂದು ಪಕ್ಷದ ಪರ ನಿಂತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ನಗರ ಮೋರ್ಚಾ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ಕಾರ್ಯದರ್ಶಿ ಸುರೇಖಾ ಮುರಳೀಧರ, ಮಂಗಳಾ ನಾಗೇಂದ್ರ, ಶಾಂತಾ ಸುರೇಂದ್ರ, ಗೀತಾ ರವೀಂದ್ರ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ಹರಿಕೃಷ್ಣ, ಸಿ.ಎಚ್.ಮಾಲತೇಶ್, ದೀನದಯಾಳ್, ಪ್ರಭಾಕರ್ ಮತ್ತಿತರರು ಇದ್ದರು.

PREV
Read more Articles on
click me!

Recommended Stories

NITK ಸುರತ್ಕಲ್‌: 3 ಕೋಟಿ ಲೀ. ಸಾಮರ್ಥ್ಯದ ಮಳೆನೀರು ಸಂಗ್ರಹ ವ್ಯವಸ್ಥೆ ಕಾರ್ಯಾರಂಭ
ಅಂಜನಾದ್ರಿ ಬೆಟ್ಟಕ್ಕೆ ಬೀಗ ಜಡಿದ ವಿದ್ಯಾದಾಸ್ ಬಾಬಾ; ಮುಜರಾಯಿ ಇಲಾಖೆ ಸಿಬ್ಬಂದಿ ಬೀದಿಪಾಲು!