ಅಂಜನಾದ್ರಿ ಬೆಟ್ಟಕ್ಕೆ ಬೀಗ ಜಡಿದ ವಿದ್ಯಾದಾಸ್ ಬಾಬಾ; ಮುಜರಾಯಿ ಇಲಾಖೆ ಸಿಬ್ಬಂದಿ ಬೀದಿಪಾಲು!

Published : Oct 14, 2026, 10:45 AM IST
koppal anjanadri hill controversy vidyadas baba locks

ಸಾರಾಂಶ

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಧಾರವಾಡ ಹೈಕೋರ್ಟ್ ಆದೇಶದ ಬೆನ್ನಲ್ಲೇ ಮತ್ತೆ ವಿವಾದ ಭುಗಿಲೆದ್ದಿದೆ. ವಿದ್ಯಾದಾಸ್ ಬಾಬಾ ಅವರು ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಹೊರಹಾಕಿ 8 ಕೊಠಡಿಗಳಿಗೆ ಬೀಗ ಜಡಿದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಬೆಟ್ಟದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕೊಪ್ಪಳ (ಅ.14): ಹನುಮ ಜನ್ಮಸ್ಥಳವೆಂದೇ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿರುವ ಐತಿಹಾಸಿಕ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯಿರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ. ಧಾರವಾಡ ಹೈಕೋರ್ಟ್ ಆದೇಶವೊಂದರ ಬೆನ್ನಲ್ಲೇ ಆಂಜನೇಯನ ದೇವಸ್ಥಾನದ ಆಡಳಿತದಲ್ಲಿ ಸಂಘರ್ಷ ಮುನ್ನಲೆಗೆ ಬಂದಿದ್ದು, ವಿದ್ಯಾದಾಸ್ ಬಾಬಾ ಅವರು ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಹಾಕಿ ಕಟ್ಟಡಗಳಿಗೆ ಬೀಗ ಜಡಿದ್ದಾರೆ.

8 ಕೊಠಡಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾ:

ದೇವಸ್ಥಾನದ ಗರ್ಭಗುಡಿಯನ್ನು ಹೊರತುಪಡಿಸಿ, ಬೆಟ್ಟದ ಮೇಲಿನ ಇತರೆ ಎಲ್ಲಾ ಪ್ರಮುಖ ಕಟ್ಟಡಗಳಿಗೆ ವಿದ್ಯಾದಾಸ್ ಬಾಬಾ ಬೀಗ ಹಾಕಿದ್ದಾರೆ. ದೇವಸ್ಥಾನದ ಆಡಳಿತ ಕಚೇರಿ, ಉಗ್ರಾಣ ಕೊಠಡಿ, ಸಂಸ್ಕೃತ ಪಾಠಶಾಲೆ ಹಾಗೂ ಅಡುಗೆ ಕೋಣೆ ಸೇರಿದಂತೆ ಒಟ್ಟು 8 ಕೊಠಡಿಗಳಿಗೆ ಬೀಗ ಜಡಿಯಲಾಗಿದೆ. ಅಲ್ಲದೆ, ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಬೆಟ್ಟದ ಮೇಲಿನಿಂದ ಕೆಳಗಿಳಿಸಿ, ಅವರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ.

ಹಿನ್ನೆಲೆ ಏನು?:

ಮೂಲಗಳ ಪ್ರಕಾರ, 2018ರಲ್ಲಿ ಅಂಜನಾದ್ರಿ ಬೆಟ್ಟ ಮತ್ತು ದೇವಸ್ಥಾನದ ನಿರ್ವಹಣೆಯನ್ನು ಮುಜರಾಯಿ ಇಲಾಖೆಗೆ ವಹಿಸಲಾಗಿತ್ತು. ಆದರೆ, ಅದಕ್ಕೂ ಪೂರ್ವದಲ್ಲಿ ಈ ದೇವಸ್ಥಾನವು ವಿದ್ಯಾದಾಸ್ ಬಾಬಾ ಅವರ ಅಧೀನದಲ್ಲಿತ್ತು. ಇತ್ತೀಚೆಗೆ ಈ ಸಂಬಂಧ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಜಿಲ್ಲಾಧಿಕಾರಿಗಳ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ. ಈ ತೀರ್ಪಿನ ಬೆನ್ನಲ್ಲೇ ವಿದ್ಯಾದಾಸ್ ಬಾಬಾ ಅವರು ದೇವಸ್ಥಾನದ ಆಡಳಿತದ ಮೇಲಿನ ತಮ್ಮ ಹಕ್ಕನ್ನು ಮಂಗಾಣಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬೆಟ್ಟದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್:

ಅಂಜನಾದ್ರಿ ಬೆಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ದೇವಸ್ಥಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ (Police Bandobast) ಕಲ್ಪಿಸಲಾಗಿದೆ. ಮುಜರಾಯಿ ಇಲಾಖೆಯ ಸಿಬ್ಬಂದಿಗೆ ಬೆಟ್ಟದ ಮೇಲೆ ಪ್ರವೇಶ ನಿರಾಕರಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯನ್ನು ನಿಯಂತ್ರಿಸಲು ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

PREV
Read more Articles on
click me!

Recommended Stories

ಮದುವೆಯಾಗುವುದಾಗಿ ನಂಬಿಸಿ ವಂಚನೆ: ಪ್ರೇಮಿಯ ಮನೆ ಮುಂದೆ ಯುವತಿಯ ಅಹೋರಾತ್ರಿ ಧರಣಿ!
222 ಹಂಗಾಮಿ ಕಾರ್ಮಿಕರ 80 ದಿನಗಳ ಕೂಲಿ ಮೊತ್ತ 1 ಕೋಟಿ ರೂ ಪಾವತಿಗೆ ನ್ಯಾಯಾಲಯ ಆದೇಶ