NITK ಸುರತ್ಕಲ್‌: 3 ಕೋಟಿ ಲೀ. ಸಾಮರ್ಥ್ಯದ ಮಳೆನೀರು ಸಂಗ್ರಹ ವ್ಯವಸ್ಥೆ ಕಾರ್ಯಾರಂಭ

Published : Oct 14, 2026, 11:07 AM IST
Suratkal

ಸಾರಾಂಶ

ಎನ್‌ಐಟಿಕೆ ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಜಲಾಶಯ ಮತ್ತು 1 ಎಂಎಲ್‌ಡಿ ನೀರು ಶುದ್ಧೀಕರಣ ಘಟಕವನ್ನು ಉದ್ಘಾಟಿಸಲಾಗಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಜಲಾಶಯವನ್ನು 1 ಎಂಎಲ್‌ಡಿ (ಪ್ರತಿದಿನ 10 ಲಕ್ಷ ಲೀಟರ್ ಸಾಮರ್ಥ್ಯ) ನೀರು ಶುದ್ಧೀಕರಣ ಘಟಕದೊಂದಿಗೆ 850 ಮೀಟರ್ ಉದ್ದದ ಪೈಪ್‌ಲೈನ್ ಮೂಲಕ ಸಂಪರ್ಕಿಸುವ ಮೂಲಕ ಎನ್‌ಐಟಿಕೆರೆ ಯೋಜನೆ ಕಾರ್ಯಗತಗೊಳಿಸಲಾಗಿದೆ.

ಎನ್‌ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ.ಮುರುಗಪ್ಪನ್, ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಅವರು ಈ ಸೌಲಭ್ಯವನ್ನು ಉದ್ಘಾಟಿಸಿದರು. ಏರ್ ಮಾರ್ಷಲ್ ಬಿ.ಯು.ಚೆಂಗಪ್ಪ, ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿರಂಜನ್ ಮಹಾಬಳಪ್ಪ ಮತ್ತಿತರರು ಇದ್ದರು.

110 ಮೀಟರ್ ಉದ್ದ ಮತ್ತು 50 ಮೀಟರ್ ಅಗಲದಲ್ಲಿ ಸುಮಾರು 5 ಮೀಟರ್ ಆಳ

ಕ್ಯಾಂಪಸ್‌ನ ಈಶಾನ್ಯ ಭಾಗದಲ್ಲಿರುವ ತಗ್ಗು ಪ್ರದೇಶದಲ್ಲಿ 110 ಮೀಟರ್ ಉದ್ದ ಮತ್ತು 50 ಮೀಟರ್ ಅಗಲದಲ್ಲಿ ಸುಮಾರು 5 ಮೀಟರ್ ಆಳದವರೆಗೆ ಅಗೆದು 2025ರಲ್ಲಿ ಮಳೆನೀರು ಸಂಗ್ರಹ ಜಲಾಶಯ ನಿರ್ಮಿಸಲಾಯಿತು. ಈ ಕಾಮಗಾರಿಗೆ 1974, 1983 ಮತ್ತು 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಬೆಂಬಲ ನೀಡಿದೆ.

2026ರ ಫೆಬ್ರವರಿಯಲ್ಲಿ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಸಹಕಾರದಿಂದ ಪ್ರತಿದಿನ 10 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಕಾರ್ಯಾರಂಭ ಮಾಡಲಾಯಿತು. ಜಲಾಶಯದಿಂದ ಶುದ್ಧೀಕರಣ ಘಟಕದವರೆಗೆ ತೇಲುವ ಪಂಪಿಂಗ್ ಕೇಂದ್ರ ಹಾಗೂ 850 ಮೀಟರ್ ಉದ್ದದ ಭೂಗತ ಪೈಪ್‌ಲೈನ್ ನಿರ್ಮಾಣಕ್ಕೆ ಫಿನ್ನೋವೇಷನ್ ಟೆಕ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಹಕಾರ ನೀಡಿದೆ. ಶುದ್ಧೀಕರಿಸಿದ ನೀರನ್ನು ಕ್ಯಾಂಪಸ್‌ನ ನೀರು ಸರಬರಾಜು ಜಾಲಕ್ಕೆ ಸಂಪರ್ಕಗೊಂಡಿರುವ ಸಂಪ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.

15 ಎಚ್‌ಪಿ ತೆರೆದ ಬಾವಿ ಮಾದರಿಯ ಸಬ್‌ಮರ್ಸಿಬಲ್ ಪಂಪ್‌

ಈ ಪಂಪಿಂಗ್ ಕೇಂದ್ರ ಫೈಬರ್ ಬಲವರ್ಧಿತ ಪ್ಲಾಸ್ಟಿಕ್ ತೇಲುವ ತಟ್ಟೆಗಳ ಮೇಲೆ ಸ್ಥಾಪಿಸಲ್ಪಟ್ಟಿರುವುದರಿಂದ ಜಲಾಶಯದ ಜಿಯೋಮೆಂಬ್ರೇನ್ ಹೊಂದಿದ ತಳಭಾಗದಲ್ಲಿ ಪ್ರತ್ಯೇಕ ನೀರು ಸೆಳೆಯುವ ರಚನೆಯನ್ನು ನಿರ್ಮಿಸುವ ಅಗತ್ಯ ಉಂಟಾಗಿಲ್ಲ. ಪ್ರತಿ ಗಂಟೆಗೆ 25,200 ಲೀಟರ್ ನೀರನ್ನು ಪಂಪ್ ಮಾಡುವ ಸಾಮರ್ಥ್ಯದ ಎರಡು 15 ಎಚ್‌ಪಿ ತೆರೆದ ಬಾವಿ ಮಾದರಿಯ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಅಳವಡಿಸಲಾಗಿದೆ.

ನೀರಿನ ಸಮಸ್ಯೆ ತಪ್ಪಿಸಲಿದೆ

ಬೇಸಿಗೆ ಅವಧಿಯಲ್ಲಿ ಇಲ್ಲಿ ನೀರಿನ ಕೊರತೆ ಪ್ರತಿವರ್ಷ ಉಂಟಾಗುತ್ತಿದ್ದು, ಹಿಂದೆ ಕ್ಯಾಂಪಸ್ ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿಯೂ ಎದುರಾಗಿತ್ತು. ಈ ವರ್ಷ ರಾಜ್ಯಾದ್ಯಂತ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿರುವುದರಿಂದ ಬರದ ಆತಂಕವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ, ಶುದ್ಧೀಕರಣ ಘಟಕದ ಮೂಲಕ ಕ್ಯಾಂಪಸ್ ನೀರು ಸರಬರಾಜು ಜಾಲಕ್ಕೆ ಸಂಪರ್ಕಿಸಿರುವ ಈ ಯೋಜನೆ ಬೇಸಿಗೆ ಕಾಲದಲ್ಲಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು ನೆರವಾಗಲಿದೆ ಎಂದು ಎಸ್‌ಐಟಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಉತ್ತರಕನ್ನಡದಲ್ಲೇ ಬೃಹತ್ ಯೋಜನೆ: ₹220 ಕೋಟಿ ವೆಚ್ಚದ, 46 ಕೆರೆಗಳಿಗೆ ನೀರುಣಿಸುವ ಕಾಳಿ ನದಿ ನೀರಾವರಿ ಯೋಜನೆ ಶೀಘ್ರ ಆರಂಭ!

PREV
Read more Articles on
click me!

Recommended Stories

ಅಂಜನಾದ್ರಿ ಬೆಟ್ಟಕ್ಕೆ ಬೀಗ ಜಡಿದ ವಿದ್ಯಾದಾಸ್ ಬಾಬಾ; ಮುಜರಾಯಿ ಇಲಾಖೆ ಸಿಬ್ಬಂದಿ ಬೀದಿಪಾಲು!
ಮದುವೆಯಾಗುವುದಾಗಿ ನಂಬಿಸಿ ವಂಚನೆ: ಪ್ರೇಮಿಯ ಮನೆ ಮುಂದೆ ಯುವತಿಯ ಅಹೋರಾತ್ರಿ ಧರಣಿ!