ಈ ಟೈಮಲ್ಲಿ ಮೋಜು-ಮಸ್ತಿ ಬೇಕಿತ್ತಾ : DC ರೋಹಿಣಿ ವಿರುದ್ಧ ಮತ್ತೊಂದು ಆರೋಪ

By Suvarna NewsFirst Published May 9, 2021, 12:57 PM IST
Highlights
  • ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ 
  • ಪಾರಂಪರಿಕ ಕಟ್ಟಡ ದುರುಪಯೋಗಪಡಿಸಿಕೊಂಡರಾ ಡೀಸಿ
  • ಡೀಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣ  

ಮೈಸೂರು (ಮೇ.09): ಇತ್ತೀಚಿನ ದಿನಗಳಲ್ಲಿ ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುವ ಮೈಸೂರು ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. 

 ಡೀಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣ  ಮಾಡಲಾಗುತ್ತಿದೆ. ಸಂಕಷ್ಟದ ಸ್ಥಿತಿ ಇದ್ದಾಗ ಇದೆಲ್ಲಾ ಬೇಕಿತ್ತಾ ಎಂದು  ಡಿಸಿ ರೋಹಿಣಿ  ವಿರುದ್ಧ ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಇಂದು ಮೈಸೂರಿನಲ್ಲಿ ಮಾತನಾಡುತ್ತಾ ಗಂಭೀರ ಆರೋಪ ಮಾಡಿದರು.

ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು..? ಸ್ಮಿಮ್ಮಿಂಗ್ ಫೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಿದ್ದೀರಿ ಬಹಿರಂಗಪಡಿಸಿ. ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ  ಅಥವಾ ಯಾರಾದರು ಪ್ರಾಯೋಜಕರ ಸಹಾಯ ಪಡೆದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ರಿಸ್ಕ್‌ ತಗೊಂಡು ಕೊಟ್ಟಿದ್ದೆ : ಗದ್ಗದಿತರಾದ ಡೀಸಿ ಸಿಂಧೂರಿ

ಕರೊನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡ್ತೇನೆ ಎನ್ನುವ ನಿಮಗೆ ಇಂತಹ ಮೋಜು ಮಸ್ತಿ ಮಾಡೋಕೆ ಟೈಮೆಲ್ಲಿ ಸಿಗುತ್ತದೆ. ಜನಪರವಾಗಿ ಚಿಂತಿಸುವ ಡೀಸಿ ಇಂತಹ ಕೆಲಸ ಮಾಡ್ತಾರಾ..?  ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ ಎಂದು ಖಡಕ್ ವಾಗ್ದಾಳಿ ನಡೆಸಿದರು. 

ನಾನು ಈ ಎಲ್ಲಾ ವಿಚಾರಗಳ ಬಗ್ಗೆ  ಆರ್.ಟಿ.ಐ. ಮೂಲಕ ಮಾಹಿತಿ ಬಯಸುವೆ. ನೀವು ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು.  ಜನರಿಗೆ ಒಳ್ಳೆಯದು ಮಾಡಲು ಆಗುವುದಿಲ್ಲ ಎಂದರೆ ಮೈಸೂರಿನಿಂದ ನಿರ್ಗಮಿಸಿ. ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡರೂ ನಿಮ್ಮ ಬಳಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ.  ಜನರ ಕೈಗೆ ನೀವು ಸಿಗುವುದಿಲ್ಲ ಎಂದು ಡೀಸಿ ವಿರುದ್ಧ ಮಲ್ಲೇಶ್ ಅಸಮಾಧಾನ ಹೊರಹಾಕಿದರು. 

ಮೈಸೂರು ಡೀಸಿ ವಿರುದ್ಧ ಸಾರಾ ಮತ್ತೊಂದು ಗಂಭೀರ ಆರೋಪ .
 
ನೀವು ಪಾರಂಪರಿಕ ಕಟ್ಟಡಗಳ ಸಮಿತಿ ಅಧ್ಯಕ್ಷರಾಗಿದ್ದೀರಿ. ಎಲ್ಲೆ ಪಾರಂಪರಿಕ ಕಟ್ಟದ ಪಕ್ಕ ನಿರ್ಮಾಣ ಕಾಮಗಾರಿಗಳು ನಡೆಯಬೇಕಿದ್ದರೂ ಡೀಸಿ, ಅನುಮತಿ ಕಡ್ಡಾಯ. ಈಗ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು. 

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಆಗಮಿಸಿದಂದಿನಿಂದಲೂ ಒಂದಲ್ಲ ಒಂದು ರೀತಿಯ ಆರೋಪಗಳು ಎದುರಾಗುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆಯೂ ಗಂಭೀರ ಆರೋಪ ಮಾಡಲಾಗಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!