* ವಿಂಡ್ ಪವರ್ ಕಂಪನಿಯಿಂದ ಕೊರೋನಾ ನಿಯಮ ಉಲ್ಲಂಘನೆ
* ಕೆಲಸ ಸ್ಥಗಿತಗೊಳಿಸಲು ತಾಲೂಕಾಡಳಿತ ಆದೇಶಿಸಿದರೂ ನಿಂತಿಲ್ಲ
* ಕೊರೋನಾ ಉಲ್ಬಣದ ಆತಂಕ
ಕೂಡ್ಲಿಗಿ(ಮೇ.09): ಕೊರೋನಾ ನಿಯಮ ಉಲ್ಲಂಘಿಸಿ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಸಿಮನ್ಸ್ ಗಮೇಸ್ ವಿಂಡ್ ಪವರ್ ಕಂಪನಿ’ ಅನ್ಯ ರಾಜ್ಯದ ಕಾರ್ಮಿಕರಿಂದ ರಾತ್ರಿ ವೇಳೆ ಕೆಲಸ ಮಾಡಿಸುತ್ತಿದ್ದರೂ ತಾಲೂಕಾಡಳಿತ ಇವರ ವಿರುದ್ಧ ಕ್ರಮಕೈಗೊಳ್ಳದೆ ಜಾಣಕುರುಡತನ ತೋರುತ್ತಿದೆ.
ಇದರಿಂದ ತಾಲೂಕಿನಲ್ಲಿ ಕೊರೋನಾ ಸೋಂಕು ಉಲ್ಬಣವಾಗುವ ಎಲ್ಲ ಸಾಧ್ಯತೆ ಇದ್ದು ಸುತ್ತಮುತ್ತಲಿನ ಹಳ್ಳಿಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರು ಸಾಂಸ್ಥಿಕ ಕ್ವಾರಂಟೈನ್ ಆಗಬೇಕೆಂಬ ಸರ್ಕಾರದ ನಿಯಮವಿದ್ದರೂ ಕಂಪನಿಯಲ್ಲಿ ಹೊರರಾಜ್ಯದ 500ಕ್ಕೂ ಹೆಚ್ಚು ಕೂಲಿಕಾರ್ಮಿಕರು ಈ ಗ್ರಾಮದಲ್ಲಿದ್ದು ಯಾವ ವೇಳೆ ಅವರು ಇಲ್ಲಿಗೆ ಬರುತ್ತಾರೆ. ಯಾವಾಗ ಮರಳಿ ಹೋಗುತ್ತಾರೆ ಎಂಬ ಯಾವುದೇ ಮಾಹಿತಿ ಇಲ್ಲ. ಜತೆಗೆ ಇಲ್ಲಿಯೇ ಮನೆ ಬಾಡಿಗೆ ಪಡೆದು ಬಿಡುಬಿಟ್ಟಿದ್ದಾರೆ.
undefined
ರಾತ್ರಿ ಕೆಲಸ, ಹಗಲು ನಿದ್ದೆ:
ಸಿಮನ್ಸ್ ಗಮೇಸ್ ವಿಂಡ್ ಕಂಪನಿಯಲ್ಲಿ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ನೂರಾರು ಕಾರ್ಮಿಕರು ಇಲ್ಲಿದ್ದಾರೆ. ಹಗಲಿನಲ್ಲಿ ಕೆಲಸ ಮಾಡಿಸದ ಕಂಪನಿ ರಾತ್ರಿಯಾಗುತ್ತಿದ್ದಂತೆ ನೂರಾರು ಸಂಖ್ಯೆಯ ಭಾರೀ ವಾಹನ, ಕ್ರಷರ್ ಲಾರಿ, ಪವನಶಕ್ತಿ ಪ್ಲಾಂಟ್‌ಗೆ ಬೇಕಾದ ವಿಶಾಲ ರೆಕ್ಕೆಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮೀಣ ರಸ್ತೆಗೆ ಇಳಿಯುತ್ತವೆ. ಕೆಲವು ಪ್ಲಾಂಟ್‌ಗಳಲ್ಲಿ ಹಗಲು ಸಹ ಕಾಮಗಾರಿ ಮಾಡಲಾಗಿದೆ. ಕೆಲವು ರೈತರೊಂದಿಗೆ ಫಲವತ್ತಾದ ಜಮೀನುಗಳಲ್ಲಿ ಇಂತಿಷ್ಟುತಿಂಗಳ ವರೆಗೆ ಜಮೀನುಗಳಲ್ಲಿ ಲಾರಿಗಳು ಸಂಚರಿಸಲು ಈ ಕಂಪನಿ ಹಣ ನೀಡುವ ಮೂಲಕ ಒಪ್ಪಂದ ಮಾಡಿಕೊಂಡಿದೆ. ಕೆಲವು ಕಡೆ ಸರ್ಕಾರಿ ಜಮೀನುಗಳನ್ನು ಸಹ ಮಣ್ಣು ರಸ್ತೆಗಳನ್ನಾಗಿ ಮಾಡಿಕೊಳ್ಳುವ ಮೂಲಕ ಈ ಕಂಪನಿ ತನಗೆ ಬೇಕಾದ ಹಾಗೇ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದೆ.
ಹೂವಿನಹಡಗಲಿ: ರೈಲಿಗೆ ತಲೆ ಕೊಟ್ಟು ತಾಪಂ ಎಂಜಿನಿಯರ್ ಆತ್ಮಹತ್ಯೆ
ಕೊರೋನಾತಂಕ:
ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ಸಿಮನ್ಸ್ ಗಮೇಸ್ ಕಂಪನಿ 70ಕ್ಕೂ ಹೆಚ್ಚು ವಿಂಡ್ ಪ್ಲಾಂಟ್ ಅಳವಡಿಸಲು ಮುಂದಾಗಿದ್ದು ಈಗಾಗಲೇ ಶೇ. 40ರಷ್ಟು ಕಾಮಗಾರಿ ನಡೆದಿದೆ. ಇನ್ನೂ ಕಾಮಗಾರಿ ನಡೆಯುವುದು ಬಾಕಿ ಇದೆ. ಹೀಗಾಗಿ 500ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ಇವರಲ್ಲಿ ಬಹುತೇಕ ತಮಿಳುನಾಡು ಸೇರಿದಂತೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರು ಸಹ ಇದ್ದಾರೆ. ಇವರು ಪ್ರತಿದಿನ ಆಲೂರು ಸುತ್ತಮುತ್ತಲ ಹಳ್ಳಿಗಳ ಜನತೆಯ ಸಂಪರ್ಕಕ್ಕೆ ಬರುತ್ತಾರೆ. ಆದರೂ ಸ್ಥಳೀಯ ಆಡಳಿತ ಇವರ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಂಡ್ ಪವರ್ ಕಂಪನಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡುತ್ತಿದೆ. ಹೊರ ರಾಜ್ಯದ ಕಾರ್ಮಿಕರು ಆಲೂರು ಸುತ್ತಮುತ್ತ ವಾಸಿಸುತ್ತಿದ್ದು ಜನತೆಗೆ ಕೊರೋನಾ ಆತಂಕ ಮೂಡಿದೆ. ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಕೂಡ್ಲಿಗಿ ತಾಪಂ ಅಧ್ಯಕ್ಷೆ ಕೆ. ನಾಗರತ್ನಮ್ಮ ಲಿಂಗಪ್ಪ ತಿಳಿಸಿದ್ದಾರೆ.
ಕೊರೋನಾ ಇರುವುದರಿಂದ ವಿಂಡ್ ಪವರ್ ಕಂಪನಿಗೆ ಕೆಲಸ ಸ್ಥಗಿತಗೊಳಿಸಲು ತಿಳಿಸಲಾಗಿದೆ. ಆದರೂ ಸಹ ರಾತ್ರಿ ಕೆಲಸ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಹೇಳಿದ್ದಾರೆ.
ನಮ್ಮ ಕಂಪನಿಯಿಂದ ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ರೈತರ ಜಮೀನುಗಳಲ್ಲಿ ಕಾನೂನುಬದ್ಧವಾಗಿ ಪವನಶಕ್ತಿ ಘಟಕ ಅಳವಡಿಸಲಾಗಿದೆ. ಸರ್ಕಾರಿ ಜಮೀನುಗಳಲ್ಲಿ ರಸ್ತೆ ಮಾಡಿಲ್ಲ. ರೈತರ ಜಮೀನುಗಳಲ್ಲಿ 11 ತಿಂಗಳು ಕರಾರು ಮಾಡಿಕೊಂಡು ಕಾಮಗಾರಿ ಮುಗಿಯುವವರೆಗೆ ವಾಹನ ಓಡಿಸಲಾಗುತ್ತಿದೆ ಎಂದು ಸಿಮನ್ಸ್ ಗಮೇಸ್ ಕಂಪನಿಯ ಪರ್ಮಿಟಿವ್ ಲೀಗಲ್ ಅಧಿಕಾರಿ ಗೋಪಾಲ್ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona