
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.25): ಕುಸ್ತಿ ಅಂದ್ರೆ ಸಾಕು ಮೈಸೂರು ದಸರಾ ನೆನಪಾಗುತ್ತೆ. ಆದ್ರೆ ಮಧ್ಯ ಕರ್ನಾಟಕದ ಮಿನಿ ದಸರಾ ಎಂದೇ ಖ್ಯಾತಿ ಪಡೆದಿರೋ ಕೋಟೆನಾಡು ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ನಡೆದ ಜಯದೇವ ಜಂಗಿ ಕುಸ್ತಿ ಕಾಳಗ ನೆರೆದಿದ್ದ ಪ್ರೇಕ್ಷಕರನ್ನು ಕಣ್ಮನ ಸೆಳೆಯಿತು.
ನಾವೇನು ಯಾರಿಗಿಂತ ಕಮ್ಮಿ ಇಲ್ಲ ಎಂದು ಒಬ್ಬರಿಗೊಬ್ಬರು ವಿಶೇಷ ಪಟ್ಟುಗಳನ್ನು ಹಾಕುತ್ತಾ ನೆಲಕ್ಕೆ ಹುರುಳಿಸ್ತಿರೋ ಕುಸ್ತಿ ಪಟುಗಳು. ಮತ್ತೊಂದೆಡೆ ಕೋಟೆನಾಡಿನಿಂದ ಸ್ಪರ್ಧಿಸಿದ್ದ ಏಕೈಕ ರಾಷ್ಟ್ರಿಯ ಕುಸ್ತಿ ಪಟು ಎದುರಾಳಿಯನ್ನು ಕೆಲವೇ ನಿಮಿಷಗಳಲ್ಲಿ ಸೆದೆಬಡಿದು ಅಂಕಣದ ತುಂಬಾ ಕುಣಿದು ಕುಪ್ಪಳಿಸ್ತಿರೋದು, ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ. ಮಧ್ಯ ಕರ್ನಾಟಕದ ಮಿನಿ ದಸರಾ ಎಂದೇ ಖ್ಯಾತಿ ಪಡೆದಿರೋ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನ ಅಂದ್ರೆ ಇಂದು, ಜಯದೇವ ಜಂಗಿ ಕುಸ್ತಿ ಕಾಳಗ ನಡೆಸಲಾಗ್ತದೆ.
ಪ್ರತೀ ವರ್ಷದಂತೆ ಈ ವರ್ಷವೂ ರಾಜ್ಯದ ನಾನಾ ಭಾಗಗಳಿಂದಲ್ಲದೇ, ಹೊರ ರಾಜ್ಯಗಳಾದ ಮಹಾರಾಷ್ಟ್ರ ಸಾಂಗ್ಲಿ, ಪಂಜಾಬ್ ಹಾಗೂ ಹರಿಯಾಣ ರಾಜ್ಯದಿಂದಲೂ ಕುಸ್ತಿ ಪಟುಗಳು ಸ್ಪರ್ಧಿಸಿದ್ದರು. ಅದ್ರಲ್ಲಂತೂ ಕೋಟೆನಾಡಿನ ಹೆಮ್ಮೆತ ಕುವರ ರಾಷ್ಟ್ರೀಯ ಕುಸ್ತಿ ಪಟು ಸದ್ದಾಂ ಹುಸೇನ್ ಆಟವಂತು ರೋಚಕವಾಗಿತ್ತು. ಎದುರಾಳಿ ಮಹಾರಾಷ್ಟ್ರದ ಸಾಂಗ್ಲಿಯ ಸುನೀಲ್ ಅವರನ್ನು ಕೆಲವೇ ನಿಮಿಷಗಳಲ್ಲಿ ತನ್ನ ವಿಶೇಷ ಪಟ್ಟುಗಳಿಂದ ನೆಲಕ್ಕೆ ಅಪ್ಪಳಿಸಿ ಮಣಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡರು.
ಇಡೀ ಇಂಡಿಯಾದಲ್ಲಿ ನಾನು ಎಲ್ಲಿ ಕುಸ್ತಿ ಆಡಿದ್ರು ನನಗೆ ಅಷ್ಟೊಂದು ಖುಷಿ ಸಿಗಲ್ಲ. ಆದ್ರೆ ನನ್ನೂರು ದುರ್ಗದಲ್ಲಿ ಕುಸ್ತಿ ಮಾಡೋದ್ರಿಂದ ಜನರು ನನ್ನನ್ನ ಅಪಾರ ಪ್ರೀತಿಸ್ತಾರೆ. ಎಲ್ಲಾ ನನ್ನನ್ನು ಸಹೋದರನ ರೀತಿ ಪ್ರೋತ್ಸಾಹ ನೀಡೋದು ನನಗೆ ಹೆಚ್ಚು ಶಕ್ತಿ ತುಂಬಲಿದೆ. ನಾನು ಯಾವತ್ತಿಗೂ ನನ್ನ ಜಿಲ್ಲೆಗೆ ಜನಕ್ಕೆ ಚಿರ ಋಣಿ ಆಗಿರ್ತೀನಿ ಎಂದು ತಿಳಿಸಿದರು.
ಉಡುಪಿ ರೈಲ್ವೆ ಮೇಲ್ವೇತುವೆಯಲ್ಲಿ ಆತ್ಮಹತ್ಯೆ ತನಿಖೆಗೆ ಪೊಲೀಸರು ಹೋದಾಗ ಸಡನ್ ಟ್ರೈನ್ ಎಂಟ್ರಿ!
ಇನ್ನೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಅದಕ್ಕೆ ತಕ್ಕನಾಗಿ ಪ್ರತಿಯೊಬ್ಬ ಗೆದ್ದ ಕ್ರೀಡಾಪಟುಗೆ ಬಹುಮಾನ ಸಹ ನೀಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕುಸ್ತಿ ಆಟವಾಡುವ ಯುವಕರ ಸಂಖ್ಯೆ ತುಂಬಾ ವಿರಳವಾಗಿದೆ. ನಾವು ಸುಮಾರು ವರ್ಷಗಳಿಂದ ಕುಸ್ತಿ ಆಡಿಕೊಂಡು ಬರ್ತಿದ್ದೀವಿ. ಬೇರೆ ರಾಜ್ಯಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಕೊಡ್ತಾರೆ. ಅಲ್ಲದೇ ಸರ್ಕಾರದ ವತಿಯಿಂದಲೇ ಉನ್ನತ ಹುದ್ದೆ ಕೂಡ ನೀಡ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಕುಸ್ತಿ ಆಟಗಾರರಿಗೆ ಇದುವರೆಗೂ ಯಾವುದೇ ಸವಲತ್ತು ಸಿಗ್ತಿಲ್ಲ. ಇನ್ನಾದ್ರು ಸರ್ಕಾರಗಳು ನಮ್ಮ ಕಡೆ ಗಮನ ಹರಿಸಿ ದೇಸಿಯ ಕ್ರೀಡೆ ಉಳಿಯುವ ನಿಟ್ಟಿನಲ್ಲಿ ಕುಸ್ತಿ ಆಟಗಾರರಿಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡರು.