ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಇಂಚರಾ ಕುಟುಂಬ ನಗರಕ್ಕೆ ಮರಳುವಾಗ ಯಲಹಂಕದ ರೈತ ಸಂತೆ ಸಮೀಪ ಮೇಲ್ಸೇತುವೆಯಲ್ಲಿ ನಡೆದ ಅವಘಡ
ಬೆಂಗಳೂರು(ಅ.25): ರಸ್ತೆ ವಿಭಜಕ್ಕೆ ದಾಟಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಕಾರಿಗೆ ಮತ್ತೊಂದು ಕಾರು ಅಪ್ಪಳಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಜಯನಗರದ ನಿವಾಸಿ ಶೇಖ್ ಅಹಮ್ಮದ್ (21) ಮೃತ ದುರ್ದೈವಿ. ಈ ಘಟನೆಯಲ್ಲಿ ಇಂಚರಾ ಹಾಗೂ ಆಕೆಯ ತಂದೆ ನರೇಂದ್ರ ಗಾಯಗೊಂಡಿದ್ದು, ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಎರಡು ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಇಂಚರಾ ಕುಟುಂಬ ನಗರಕ್ಕೆ ಮರಳುವಾಗ ಯಲಹಂಕದ ರೈತ ಸಂತೆ ಸಮೀಪ ಮೇಲ್ಸೇತುವೆಯಲ್ಲಿ ಈ ಅವಘಡ ನಡೆದಿದೆ.
ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಅಪಘಾತ: ಚಾಲಕ ಸಾವು, ಪ್ರಾಣಾಪಾಯದಿಂದ ಪಾರಾದ ಆನೆ
ಜಯನಗರದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದ ಶೇಖ್ ಅಹಮ್ಮದ್, ಸೆಕೆಂಡ್ ಹ್ಯಾಂಡ್ ಕಾರಗಳನ್ನು ಮಾರಾಟದ ವ್ಯವಹಾರದಲ್ಲಿ ತೊಡಗಿದ್ದ. ತನ್ನ ನಾಲ್ವರು ಗೆಳೆಯರ ಜತೆ ಭಾನುವಾರ ದೇವನಹಳ್ಳಿ ಕಡೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶೇಖ್ ತೆರಳುತ್ತಿದ್ದ. ಅದೇ ಹೊತ್ತಿಗೆ ವಿಮಾನ ನಿಲ್ದಾಣದಿಂದ ನಗರಕ್ಕೆ ಇಂಚರಾ ಕುಟುಂಬ ಮರಳುತ್ತಿತ್ತು. ಆಗ ಮಾರ್ಗ ಮಧ್ಯೆ ರೈತ ಸಂತೆಯ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಶೇಖ್ ಪ್ರಯಾಣಿಸುತ್ತಿದ್ದ ಕಾರು, ರಸ್ತೆ ವಿಭಜಕಕ್ಕೆ ದಾಟಿ ಮತ್ತೊಂದು ಬದಿಗೆ ನುಗ್ಗಿದೆ. ಆ ವೇಳೆ ಅಲ್ಲಿಗೆ ಬಂದ ಇಂಚರಾ ಅವರ ಕಾರಿಗೆ ಗುದ್ದಿ ಸೀದಾ ಮೇಲ್ಸೇತುವೆಯ ತಡೆಗೋಡೆಗೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದ ಶೇಖ್ ಅವರಿಗೆ ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇಂಚರಾ ಹಾಗೂ ಆಕೆಯ ತಂದೆ ನರೇಂದ್ರ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದವು. ಇನ್ನು ಅದೃಷ್ಟವಾಶಾತ್ ಅಪಾಯದಿಂದ ಶೇಖ್‌ನ ಗೆಳೆಯರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.