ತುಮಕೂರು: ಅಕ್ಷರ ದಾಸೋಹದಲ್ಲಿ ಲಕ್ಷಾಂತರ ರು. ಅವ್ಯವಹಾರ

By Kannadaprabha NewsFirst Published Aug 9, 2019, 8:42 AM IST
Highlights

ಅಕ್ಷರ ದಾಸೋಹದ ಅನುದಾನವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿ ಸಾವಿರಾರು ವಿದ್ಯಾರ್ಥಿಗಳ ಅನ್ನದ ಅನುದಾನದಲ್ಲಿ ವಂಚನೆ ಎಸಗಿರುವುದು ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೇರಬೇಕಾದ ಅನುದಾನದಲ್ಲಿ ವಂಚನೆ ಮಾಡಿದ್ದಾರೆಂದು ಜಿಪಂ ಸದಸ್ಯ ಮಹಲಿಂಗಪ್ಪ ಆರೋಪಿಸಿದ್ದಾರೆ.

ತುಮಕೂರು(ಆ.09): ಚಿಕ್ಕನಾಯಕನಹಳ್ಳಿಯಲ್ಲಿ ಅಕ್ಷರ ದಾಸೋಹದ ಅನುದಾನವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿ ಸಾವಿರಾರು ವಿದ್ಯಾರ್ಥಿಗಳ ಅನ್ನದ ಅನುದಾನದಲ್ಲಿ ವ್ಯವಸ್ಥಿತವಾಗಿ ಲಕ್ಷಾಂತರ ರು. ವಂಚಿಸಿದ್ದಾರೆ ಎಂದು ಆರೋಪಿಸಿದ ಜಿಪಂ ಸದಸ್ಯ ಮಹಲಿಂಗಪ್ಪ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ದಾಸೋಹದ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಎರಡು ವರ್ಷದ ಹಿಂದೆಯೇ ಆರೋಪಿಸಿದ್ದೆ. ಜಿಪಂ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸರಿಯಾಗಿ ಆಹಾರ ದೊರೆಯುತ್ತಿಲ್ಲ. ಇದರಿಂದ ಲಕ್ಷಾಂತರ ರು. ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಮೂರು ಬಾರಿ ತನಿಖೆ ಮಾಡುವ ನೆಪದಲ್ಲಿ ಪರಿಶೀಲಿಸದೇ ಬೇರೆ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಅ​ಧಿಕಾರಿ ವಲಯ ಸತ್ಯ ಮುಚ್ಚಿಟ್ಟು ಪ್ರಕರಣವನ್ನೆ ಮುಚ್ಚಿ ಹಾಕಿತ್ತು ಎಂದು ದೂರಿದರು.

ಬೇರೆ ಖಾತೆಗಳಿಗೆ ಹಣ ವರ್ಗಾವಣೆ:

ಪ್ರಕರಣದಲ್ಲಿ ಅನುದಾನವನ್ನು ವ್ಯವಸ್ಥಿತವಾಗಿ ಅ​ಧಿಕಾರಿಗಳೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಣ ವಂಚಿಸುವ ಉದ್ದೇಶದಿಂದ ವ್ಯವಸ್ಥಿತವಾಗಿ ಜಾಲ ಹಣೆದು ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಅಮಾಯಕರನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಕ್ಷರ ದಾಸೋಹದ ಅನುದಾನ ಶಿಕ್ಷಣ ಇಲಾಖೆಯ ನಿಯಮದಂತೆ ನೇರವಾಗಿ ಸದರಿ ಶಾಲೆಯ ಖಾತೆಗೆ ಜಮಾವಣೆಯಾಗಬೇಕು. ಹಣ ವಂಚಿಸುವ ಉದ್ದೇಶದಿಂದ ಬೇನಾಮಿ ಖಾತೆಗಳನ್ನು ಸೃಷ್ಟಿಸಲಾಗಿದೆ. ಹಲವು ವರ್ಷದಿಂದ ಈ ಖಾತೆಗಳಿಗೆ ಹಣ ಹಾಕಿ ಡ್ರಾ ಮಾಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿದೆ ಎಂದು ಪ್ರದರ್ಶಿಸಿದರು.

ಬೇನಾಮಿ ಖಾತೆಗೆ ಹಣ ಹಾಕಿ ವಂಚನೆ:

ಅಕ್ಷರ ದಾಸೋಹದ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್‌ ಹಾಗೂ ಟೈಪಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿರುವ, ಶೃತಿ ಎಂಬುವವರು ಹಾಗೂ ತಾಯಿ ಲಕ್ಷ್ಮಮ್ಮ ಮತ್ತು ಹುಳಿಯಾರಿನ ಜಯ ಎಂಬುವರ ಹೆಸರಿನಲ್ಲಿ ಬ್ಯಾಂಕ್‌ಖಾತೆ ತೆರೆಸಿ 3-4 ತಿಂಗಳ ಅಕ್ಷರ ದಾಸೋಹದಿಂದ ಮೊಟ್ಟೆ, ಹಾಲು, ತರಕಾರಿಕೊಳ್ಳಲು ನೀಡುವ ಸಾವಿರಾರು.ರು. ಶಾಲಾ ಅನುದಾನವನ್ನು ಬ್ಯಾಂಕ್‌ ಸಿಬ್ಬಂದಿ ಸಹಾಯದಿಂದ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು.

ಅಮಾಯಕರಿಗೆ ಬೆದರಿಸಿ ಲಕ್ಷಾಂತ ರು, ಹಣ ಒಡವೆ ಸುಲಿಗೆ:

ಅಕ್ಷರ ದಾಸೋಹದ ಹಣ ಈ ಮೂರು ಅಮಾಯಕರ ಖಾತೆಯಿಂದ ಹಿಂಪಡೆದು ಗುಳುಂ ಮಾಡಿದ್ದ ಅಕ್ಷರ ದಾಸೋಹದ ಅಧಿ​ಕಾರಿಗಳು ಅಮಾಯಕ ಖಾತೆದಾರರ ಮನೆಗೆ ತೆರಳಿ ನೀವು ಸರ್ಕಾರದ ಹಣ ಬಳಸಿದ್ದೀರಿ, ಜೈಲು ಪಾಲಾಗುತ್ತೀರಿ ಮತ್ತು ಮಾಧ್ಯಮದಲ್ಲಿ ಬೆಳಕಿಗೆ ಬರುತ್ತದೆ ಎಂದು ಈ ಮೂವರನ್ನು ಬೆದರಿಸಿ ಅವರಿಂದ ಮನೆಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡಿದ್ದಲ್ಲದೆ, ಎತ್ತುಗಳು ಹಾಗೂ ಸ್ವತ್ತನ್ನು ಮಾರಿಸಿ ಈವರೆಗೆ ಸುಮಾರು .16.4 ಲಕ್ಷ ಹಣವನ್ನು ಬಲವಂತದಿಂದ ಹಿಂಪಡೆದಿದ್ದಾರೆ ಎಂದು ದೂರಿದರು.

ಈ ಅವ್ಯವಹಾರದಲ್ಲಿ ಅಕ್ಷರ ದಾಸೋಹದ ಈ ಹಿಂದಿನ ಅ​ಧಿಕಾರಿ ತಿಮ್ಮರಾಜು, ಜಿಲ್ಲಾ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ಈಗಿನ ಅ​ಧಿಕಾರಿ ನಾಗಭೂಷಣ್‌, ನಿವೃತ್ತ ನೌಕರ ಕೃಷ್ಣಯ್ಯ, ಬ್ಯಾಂಕ್‌ ಡಿ ಗ್ರೂಪ್‌ ನೌಕರ ಶಿವಕುಮಾರ್‌ ಹಾಗೂ ಬೇನವಿಹಳ್ಳಿಯ ಶಿವಕುಮಾರ್‌ ಭಾಗಿಗಳಾಗಿದ್ದಾರೆ ಎಂದು ಆರೋಪಿಸಿದರು.

ಹಣಕ್ಕಾಗಿ ಪುನಃ ಒತ್ತಾಯ:

ಅಮಾಯಕರ ಖಾತೆಗೆ ಹಣ ವರ್ಗಾಯಿಸಿ ಲಕ್ಷಾಂತರ ರು. ನುಂಗಿದ್ದು ಅಲ್ಲದೆ ಈಗ ಮತ್ತೆ 15 ಲಕ್ಷ ರು. ಹಣ ಕಟ್ಟಿಎಂದು ಇದೇ ದುಷ್ಟಕೂಟ ಟೈಪಿಸ್ಟ್‌ ಶೃತಿಯನ್ನು ಮಾನಸಿಕವಾಗಿ ಹಿಂಸೆ ನೀಡುತ್ತಾ ಪ್ರತಿದಿನವೂ ಕಿರುಕುಳ ನೀಡುತ್ತಿದ್ದಾರೆ. ಬೆದರಿಕೆಗೂ ಮಣಿಯದೆ ಶೃತಿ ತನಗಾದ ಅನ್ಯಾಯ ಶಾಸಕರಿಗೂ ಸೇರಿದಂತೆ ಜನಪ್ರತಿನಿ​ಧಿಗಳಿಗೆ ತಿಳಿಸಿದ್ದಾರೆ ಎಂದರು.

ಈ ಎಲ್ಲಾ ಆರೋಪಗಳಿಗೂ ನನ್ನಲ್ಲಿ ದಾಖಲೆಯಿದ್ದು ಜಿಪಂ ಸಭೆಯಲ್ಲಿ ಎಲ್ಲಾ ವಿವರವನ್ನು ಬಹಿರಂಗ ಗೊಳಿಸಲಿದ್ದೇನೆ. ಅವ್ಯವಹಾರಗಳು ತಿಳಿದೂ ಸುಮ್ಮನಿರುವ ತಾಪಂ ಕಾರ್ಯನಿರ್ವಹಣಾಧಿ​ಕಾರಿ ಸೇರಿದಂತೆ ಸಂಬಂ​ದಿಸಿದ ಅ​ಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆಗೆ ಸಿಇಓ ಶುಭಾ ಕಲ್ಯಾಣ್‌ ಅವರನ್ನು ಮಹಲಿಂಗಪ್ಪ ಒತ್ತಾಯಿಸಿದ್ದಾರೆ.

ನನ್ನ ಖಾತೆಯಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳು

ಟೈಪಿಸ್ಟ್‌ ಶ್ರುತಿ ಮಾತನಾಡಿ, ಅಧಿಕಾರಿಗಳನ್ನು ನಂಬಿ ಅವರು ಹೇಳಿದಂತೆ ನಾನು ನನ್ನ ಬ್ಯಾಂಕ್‌ ಖಾತೆಗೆ ಬಂದ ಹಣವನ್ನು ಆಗಾಗ್ಗೆ ಬಿಡಿಸಿಕೊಡುತ್ತಿದ್ದೆ. ಹಣವನ್ನು ಬಿಡಿಸಿಕೊಟ್ಟಿದ್ದರೂ ಸದರಿ ಅ​ಧಿಕಾರಿಗಳು ನನ್ನ ಮನೆಗೆ ಬಂದು ಮಾನಸಿಕ ಕಿರುಕುಳ ನೀಡಿ ಮತ್ತೆ ಹಣಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ. ಕಟ್ಟದಿದ್ದರೆ ನನಗೆ ತೊಂದರೆ ಕೊಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹಣ ವಂಚಿಸುವ ಉದ್ದೇಶದ ಬಗ್ಗೆ ನನಗೆ ಮುಂಚೆ ತಿಳಿದಿರಲಿಲ್ಲ ಎಂದರು.

ಜಿಯೋಗೆ ವಂಚನೆ: ಏರ್‌ಟೆಲ್ ವೊಡಾಫೋನ್‌, ಐಡಿಯಾಗೆ 3050 ಕೋಟಿ ರು. ದಂಡ

ಬಳಿಕ ಎಚ್ಚೆತ್ತುಕೊಂಡ ಕಾರಣ, ವಿಷಯ ಹೊರಗೆ ಬರುವ ಭಯದಿಂದ ಅವರು ನನಗೆ ಹಾಗೂ ನನ್ನ ತಂದೆ ತಾಯಿಗೆ ಮಾನಸಿಕ ಹಿಂಸೆ ನೀಡುತ್ತಾ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ನನ್ನ ಖಾತೆಗೆ ಬಂದ ಎಲ್ಲಾ ಹಣ ಅವರಿಗೆ ನೀಡಿದ್ದೇನೆ. ಈ ಬಗ್ಗೆ ನಾನು ಯಾವುದೇ ತನಿಖೆಗೆ ಸಿದ್ಧಳಿದ್ದು, ಎಲ್ಲವನ್ನು ತಿಳಿಸುತ್ತೇನೆ ಎಂದು ಶ್ರುತಿ ಹೇಳಿದರು.

ಒಂದೇ ಸ್ಥಳದಲ್ಲಿ ಸತತವಾಗಿ 13 ವರ್ಷದಿಂದ ಅಕ್ಷರ ದಾಸೋಹದಲ್ಲಿ ಇರುವುದೇ ನಿಯಮ ಬಾಹಿರವಾಗಿದ್ದು, ತಾಲೂಕಿನ ಶಾಲಾ ಮಕ್ಕಳ ಅದರಲ್ಲಿ ಎಸ್ಸಿ, ಎಸ್ಟಿಹಾಗೂ ಬಡ ವಿದ್ಯಾರ್ಥಿಗಳ ಊಟದ ಹಣ ಬಿಡದೆ ಹಲವಾರು ವರ್ಷದಿಂದ ಲಪಾಟಾಯಿಸಿದ್ದಾರೆ ಎಂದು ಆರೋಪಿಸಿದರು.

ಸಿಲಿಂಡರ್‌ಗೆ ಹೆಚ್ಚುವರಿ ವಸೂಲಿ ಮಾಡಿ ಗ್ರಾಹಕರಿಗೆ ವಂಚನೆ

click me!