ಬೆಂಗಳೂರು ಭಾಗದ ಅಭಿವೃದ್ಧಿಗೆ ಮಾತ್ರ ವೇಗ ನೀಡಿದರೆ ಸಾಲದು, ಸಚಿವ ಎಂ.ಬಿ. ಪಾಟೀಲ ಈ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಂತಹ ನಗರ ಕೇಂದ್ರೀಕರಿಸಿ ಉತ್ತಮ ಯೋಜನೆ ರೂಪಿಸಲು ಮುತುವರ್ಜಿ ವಹಿಸಲಿ ಎನ್ನುವುದು ಉತ್ತರ ಕರ್ನಾಟಕದ ಜನತೆಯ ಆಶಯ.
ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ(ಡಿ.18): ಇದೇ ವರ್ಷದಲ್ಲಿ ಸರ್ಕಾರದಿಂದ ಬೆಂಗಳೂರು ಭಾಗಕ್ಕೆ ಬಂಪರ್ ಆಫರ್ ಗಳ ಸುರಿಮಳೆ, ಮೊದಲು ಕ್ವೀನ್ ಸಿಟಿ, ಆಮೇಲೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇತ್ತೀಚಿಗಷ್ಟೇ ತುಮಕೂರು, ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಚಾಲನೆ, ಇನ್ನು ಶನಿವಾರವಷ್ಟೇ ಬೆಂಗಳೂರಿಗೆ ಘೋಷಣೆಯಾಗಿದೆ ಸ್ವಿಫ್ಟ್ ಸಿಟಿ. ಆದರೆ, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡಕ್ಕೆ ಮತ್ತೆ ಸೋಡಾ ಚೀಟಿ!
undefined
ಹೌದು, ಕಳೆದ 3-4 ತಿಂಗಳ ಹಿಂದಿನ ಮಾತು. ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಕ್ವಿನ್ ಸಿಟಿ (Knowledge, Wellbeing, and Innovation City- KWIN City ) ಘೋಷಿಸಲಾಗಿದೆ. ಸುಸ್ಥಿರತೆ, ಮನೆ, ಕೆಲಸದ ಸ್ಥಳ ಮತ್ತು ಅತ್ಯಾಧುನಿಕ ನಗರ ಸೇರಿದಂತೆ ಬದುಕಿನ ವಿವಿಧ ಸಂಗತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ದಕ್ಷತೆ ಹಾಗೂ ಅನುಕೂಲತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸುಧಾರಿಸುವ ʼಸ್ಮಾರ್ಟ್ ಲಿವಿಂಗ್ʼ ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಈ ಸಿಟಿ ಅಸ್ತಿತ್ವಕ್ಕೆ ತರಲಾಗುತ್ತಿದೆ.
ಹುಬ್ಬಳ್ಳಿ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಗೆ ಇನ್ಸ್‌ಸ್ಪೆಕ್ಟರ್‌ನಿಂದ ಲೈಂಗಿಕ ಕಿರುಕುಳ?
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಮೈಸೂರು, ತುಮಕೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ಕಾಮಗಾರಿ ಆರಂಭಿಸಲಾಗಿದೆ. ತುಮಕೂರಿನಲ್ಲಿ ಬರೋಬ್ಬರಿ ₹150 ಕೋಟಿ ವೆಚ್ಚದ ಸುಸಜ್ಜಿತ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದೇ ವೇಳೆ, ಮೈಸೂರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಚಾಲನೆ ದೊರೆತಿದೆ.
ಉಕಕ್ಕೆ ಸೋಡಾ ಚೀಟಿ:
ಉತ್ತರ ಕರ್ನಾಟಕ ಭಾಗಕ್ಕೆ ಇಂಥ ಒಂದೇ ಒಂದು ಯೋಜನೆ ಇಲ್ಲಿ ವರೆಗೆ ಘೋಷಣೆಯಾಗಿಲ್ಲ. ಘೋಷಣೆ ಹೋಗಲಿ ಆ ಕುರಿತು ಚರ್ಚೆಯೂ ಸರ್ಕಾರದ ಮಟ್ಟದಲ್ಲಿ ಇಲ್ಲ ಅನಿಸುತ್ತಿದೆ. ಇದರಿಂದ ಬೆಂಗಳೂರು ಭಾಗಕ್ಕೆ ಬೆಣ್ಣೆ ಉತ್ತರ ಕರ್ನಾಟಕಕ್ಕೆ ಸುಣ್ಣ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಸಚಿವ ಎಂ.ಬಿ. ಪಾಟೀಲ ಕರ್ನಾಟಕವನ್ನು ಸಿಲಿಕಾನ್ ರಾಜ್ಯ ಮಾಡುವುದಾಗಿ ಹೇಳಿದ್ದಾರೆ. ಆದರೆ, ಬೆಂಗಳೂರನ್ನೇ ಮುಖ್ಯವಾಗಿಟ್ಟುಕೊಂಡು ಎಲ್ಲ ರೀತಿಯ ಅಭಿವೃದ್ಧಿ ಮಾಡಿರೆ ಸಮಗ್ರ ಕರ್ನಾಟಕ ಅಭಿವೃದ್ಧಿ ಸಂಕಲ್ಪ ಸಾಕಾರವಾಗುವುದು ಯಾವಾಗ?
ಉತ್ತರ ಕರ್ನಾಟಕ ಭಾಗದವರೇ ಆದ ಸಚಿವ ಎಂ.ಬಿ. ಪಾಟೀಲ ಅವರಿಗೆ ಇಂತಹ ಕ್ವೀನ್ ಸಿಟಿ, ಸ್ವಿಫ್ಟ್ ಸಿಟಿ ಘೋಷಣೆ ಮಾಡುವ ಮೊದಲು ಕರ್ನಾಟಕದಲ್ಲಿ ಹಿಂದುಳಿದ ಉತ್ತರ ಕರ್ನಾಟಕ ಎನ್ನುವ ಒಂದು ಭಾಗವಿದೆ. ಅಲ್ಲಿಗೂ ಸ್ವಲ್ಪ ಪಾಲು ಕೊಡಬೇಕು ಎನ್ನುವ ಆಲೋಚನೆ ಬರಲಿಲ್ಲವೇ? ದೇವರೇ ಬಲ್ಲ.
ಬೆಂಗಳೂರು ಕೇಂದ್ರವಾಗಿರಿಸಿಕೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕ್ವಿನ್ ಸಿಟಿ, ಸ್ವಿಫ್ಟ್ ಸಿಟಿ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಿದೆ. ಅಭಿವೃದ್ಧಿಯಲ್ಲಿ ಮತ್ತಷ್ಟು ಅಸಮತೋಲವಾಗುವುದಿಲ್ಲವೇ?
ಈಗಾಗಲೇ ಬೆಂಗಳೂರು ನಗರ ಅಭಿವೃದ್ಧಿಯ ಉತ್ತುಂಗದ ಹಂತದಲ್ಲಿದೆ. ಐಟಿ-ಬಿಟಿ ಹಬ್ ಆಗಿ ಪರಿವರ್ತನೆಗೊಂಡಿರುವ ಭಾಗದಲ್ಲೇ ಮತ್ತಷ್ಟು ಯೋಜನೆ ಜಾರಿ ಮಾಡಬೇಕೇ ಎನ್ನುವ ಕುರಿತು ಆಲೋಚನೆ, ಚರ್ಚೆ ಬೇಕಿದೆ.
ನಿರ್ಲಕ್ಷ್ಯ ಸಲ್ಲದು:
ಕ್ವಿನ್ ಸಿಟಿಯ ಜ್ಞಾನ ಜಿಲ್ಲೆಯ ಕಲ್ಪನೆಯಡಿ 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿಗದ್ದು, ಇದರಡಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎನ್ನಲಾಗಿದೆ. ಇನ್ನು ಆರೋಗ್ಯ ಮತ್ತು ಸಂಶೋಧನಾ ಜಿಲ್ಲೆಯ ಕಲ್ಪನೆಯಡಿ ಸೃಷ್ಟಿಯಾಗುವ ಉದ್ಯೋಗಗಳನ್ನು ಲೆಕ್ಕ ಹಾಕುವುದು ಅಸಾಧ್ಯ. ಕ್ವಿನ್ ಸಿಟಿಯನ್ನೇ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಇಷ್ಟು ಪ್ರಮಾಣದ ಉದ್ಯೋಗಗಳ ಸೃಷ್ಟಿಸುವ ಒಂದೇ ಒಂದು ಯೋಜನೆ ಇಲ್ಲಿ ಕಾಣಸಿಗುವುದಿಲ್ಲ.
ಬಿಜೆಪಿಗೆ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಆಸಕ್ತಿಯಿಲ್ಲ: ಡಿ.ಕೆ.ಶಿವಕುಮಾರ್
ಈ ಭಾಗದಲ್ಲಿ ಇಂತಹದೊಂದು ಕ್ರೀಡಾಂಗಣ ನಿರ್ಮಾಣವಾಗಿ ಇಲ್ಲಿಯೂ ಪಂದ್ಯಗಳನ್ನು ಆಯೋಜಿಸಿದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಈ ಮೂಲಕ ದೇಶದ ಇತರೇ ಭಾಗಗಳಿಗೂ ಇಲ್ಲಿ ವೈಶಿಷ್ಟ್ಯತೆಗಳ ಪರಿಚಯವಾಗಲಿದೆ. ಇದರಿಂದ ವ್ಯಾಪಾರ-ವಹಿವಾಟು ಮತ್ತಷ್ಟು ಹೆಚ್ಚಲಿದೆ. ಒಂದು ಉತ್ತಮ ಕ್ರೀಡಾಂಗಣದಿಂದ ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮಕ್ಕೂ ವೇಗ ದೊರೆಯಲಿದೆ.
ಬೆಂಗಳೂರು ಭಾಗದ ಅಭಿವೃದ್ಧಿಗೆ ಮಾತ್ರ ವೇಗ ನೀಡಿದರೆ ಸಾಲದು, ಸಚಿವ ಎಂ.ಬಿ. ಪಾಟೀಲ ಈ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಂತಹ ನಗರ ಕೇಂದ್ರೀಕರಿಸಿ ಉತ್ತಮ ಯೋಜನೆ ರೂಪಿಸಲು ಮುತುವರ್ಜಿ ವಹಿಸಲಿ ಎನ್ನುವುದು ಈ ಮಹಾನಗರದ ಜನತೆಯ ಆಶಯ.