ಚಿಕ್ಕಮಗಳೂರು: ಬಾಗಿಲು ಮುಚ್ಚಿದ ಇಂದಿರಾ ಕ್ಯಾಂಟಿನ್‌: ಸಿಬ್ಬಂದಿಗೆ 6 ತಿಂಗಳಿಂದ ಸಂಬಳ ಇಲ್ಲ!

By Kannadaprabha News  |  First Published Feb 4, 2023, 10:07 AM IST

ಆರ್ಥಿಕ ಮುಗ್ಗಟ್ಟು ಹಾಗೂ ಸಿಬ್ಬಂದಿಗೆ ವೇತನ ಮಂಜೂರು ಮಾಡದೆ ಇದ್ದರಿಂದ ಜಿಲ್ಲಾ ಕೇಂದ್ರದಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಬೀಗ ಹಾಕಲಾಗಿದೆ. ಇಂದಿರಾ ಕ್ಯಾಂಟಿನ್‌ ತೆರೆದಿದ್ದರಿಂದ ವಿದ್ಯಾರ್ಥಿಗಳಿಗೆ, ಕೆಲಸದ ನಿಮಿತ್ತ ನಗರಕ್ಕೆ ಬರುವ ಗ್ರಾಮೀಣ ಭಾಗದ ಜನರಿಗೆ, ಕೂಲಿ ಕಾರ್ಮಿಕರಿಗೆ ಉಪಹಾರ ಮತ್ತು ಊಟಕ್ಕೆ ತುಂಬಾ ಅನುಕೂಲವಾಗಿತ್ತು. ಆದರೆ, ಗುರುವಾರದಿಂದ ದಿಢೀರ್‌ ಬಂದ್‌ ಮಾಡಿದ್ದರಿಂದ ಬಹಳಷ್ಟುಜನರಿಗೆ ತೊಂದರೆಯಾಗಿದೆ.


,ಚಿಕ್ಕಮಗಳೂರು (ಫೆ.4) : ಆರ್ಥಿಕ ಮುಗ್ಗಟ್ಟು ಹಾಗೂ ಸಿಬ್ಬಂದಿಗೆ ವೇತನ ಮಂಜೂರು ಮಾಡದೆ ಇದ್ದರಿಂದ ಜಿಲ್ಲಾ ಕೇಂದ್ರದಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಬೀಗ ಹಾಕಲಾಗಿದೆ. ನಗರದ ಹೃದಯ ಭಾಗ, ಬಸ್‌ ನಿಲ್ದಾಣದ ಸಮೀಪದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆದಿದ್ದರಿಂದ ವಿದ್ಯಾರ್ಥಿಗಳಿಗೆ, ಕೆಲಸದ ನಿಮಿತ್ತ ನಗರಕ್ಕೆ ಬರುವ ಗ್ರಾಮೀಣ ಭಾಗದ ಜನರಿಗೆ, ಕೂಲಿ ಕಾರ್ಮಿಕರಿಗೆ ಉಪಹಾರ ಮತ್ತು ಊಟಕ್ಕೆ ತುಂಬಾ ಅನುಕೂಲವಾಗಿತ್ತು. ಆದರೆ, ಗುರುವಾರದಿಂದ ದಿಢೀರ್‌ ಬಂದ್‌ ಮಾಡಿದ್ದರಿಂದ ಬಹಳಷ್ಟುಜನರಿಗೆ ತೊಂದರೆಯಾಗಿದೆ.

ಇಂದಿರಾ ಕ್ಯಾಂಟಿನ್‌ ನಡೆಸುತ್ತಿರುವ ಭಾರತೀಯ ಮಾನವ ಕಲ್ಯಾಣ ಪರಿಷತ್‌ (ಬಿಎಂಕೆಪಿ) ಹಾಗೂ ಚಿಕ್ಕಮಗಳೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಶುಕ್ರವಾರ ಮಾತುಕತೆ ನಡೆಸಿದ್ದು, ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಣ ಕೊಟ್ಟರೆ ಮಾತ್ರ ಕ್ಯಾಂಟಿನ್‌ ರೀ ಓಪನ್‌ ಮಾಡುತ್ತೇವೆ, ಇಲ್ಲದೆ ಹೋದರೆ ತೆರೆಯುವುದಿಲ್ಲ ಎಂದು ಬಿಎಂಕೆಪಿಯ ಜಿಲ್ಲಾ ವ್ಯವಸ್ಥಾಪಕ ಕೃಷ್ಣೇಗೌಡ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Tap to resize

Latest Videos

ತೀರ್ಥಹಳ್ಳಿ: ಸೋಲಾರ್ ಪ್ಯಾನಲ್ ಪ್ಲೇಟ್ ಕಳವು ಪ್ರಕರಣ: ಗ್ರಾಪಂ ಕಂಪ್ಯೂಟರ್ ಆಪರೇಟರ್ ಸೇರಿ ಇಬ್ಬರ ಬಂಧನ

ವಸ್ತುಸ್ಥಿತಿ

ಜಿಲ್ಲೆಯ ನೂತನ ತಾಲೂಕುಗಳಾದ ಕಳಸ ಹಾಗೂ ಅಜ್ಜಂಪುರ ಹೊರತುಪಡಿಸಿ ಇನ್ನುಳಿದ 7 ತಾಲೂಕುಗಳಲ್ಲಿ ಇಂದಿರಾ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ 35 ಮಂದಿ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ 7 ಕ್ಯಾಂಟಿನ್‌ ನಡೆಸಲು ತಿಂಗಳಿಗೆ 10.50 ಲಕ್ಷ ರುಪಾಯಿ ಬೇಕಾಗುತ್ತದೆ. ಕ್ಯಾಂಟಿನ್‌ ಆರಂಭದಲ್ಲಿ ಬಿಲ್‌ ಮಾಡಿ ಕಳುಹಿಸಿದರೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಹಣ ಬಿಡುಗಡೆಯಾಗುತ್ತಿಲ್ಲ, ಇದರಿಂದಾಗಿ ಕ್ಯಾಂಟಿನ್‌ ನಡೆಸಲು ಕಷ್ಟವಾಗುತ್ತಿದೆ.

ಹಣ ಇಲ್ಲ

ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್‌ ನಡೆಸುವ ಟೆಂಡರ್‌ನ್ನು ಬಿಎಂಕೆಪಿ ಪಡೆದಿತ್ತು. ಕಳೆದ 2022ರಲ್ಲಿ ರಿಮಾಡ್ಯ ಸಂಸ್ಥೆ ಟೆಂಡರ್‌ ಪಡೆದುಕೊಂಡಿದೆ.

ಕಳೆದ ವರ್ಷ ಏಪ್ರಿಲ್‌ ತಿಂಗಳಿಂದ ಸಿಬ್ಬಂದಿಗಳಿಗೆ ಸಂಬಳ ಬಿಡುಗಡೆಯಾಗಿಲ್ಲ, ತಮ್ಮ ಮನೆಯಲ್ಲಿ ಎಷ್ಟೇ ಹಣಕಾಸಿನ ತೊಂದರೆ ಇದ್ರು ಪ್ರತಿ ದಿನ ಕೆಲಸಕ್ಕೆ ಬರುತ್ತಿದ್ದಾರೆ. ಇಂದಿಲ್ಲಾ ನಾಳೆ, ವೇತನ ಬರಬಹುದೆಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ವೇತನ ಮಂಜೂರಾಗುತ್ತಿಲ್ಲ. ಹಲವು ಮಂದಿ ಕೈಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಹೊರಗೆ ಬರಲು ಹಲವು ಮಂದಿ ಕೆಲಸ ಬಿಟ್ಟು ಹೋಗಿದ್ದಾರೆ.

ಇದು, ಕಾರ್ಮಿಕರ ಗೋಳಾಗಿದ್ದರೆ, ಕ್ಯಾಂಟಿನ್‌ಗಳಿಗೆ ದಿನಸಿ ಪದಾರ್ಥ ಹಾಗೂ ತರಕಾರಿ ಸರಬರಾಜು ಮಾಡುವವರ ಗೋಳು ಹೇಳತೀರದು. ಇವರು ಕೂಡ ಚಾತಕ ಪಕ್ಷಿಯಂತೆ ಬಾಕಿ ಹಣ ಮಂಜೂರಿಗಾಗಿ ಕಾಯುತ್ತಿದ್ದಾರೆ.ಈಗಾಗಲೇ ಚಿಕ್ಕಮಗಳೂರಿನ ಇಂದಿರಾ ಕ್ಯಾಂಟಿನ್‌ ಮುಚ್ಚಲಾಗಿದ್ದು, ಹಣ ಮಂಜೂರು ಮಾಡದೆ ಹೋದರೆ ಇನ್ನುಳಿದ ತಾಲೂಕುಗಳಲ್ಲಿರುವ ಕ್ಯಾಂಟಿನ್‌ಗಳು ಮುಚ್ಚಬೇಕಾದ ಪರಿಸ್ಥಿತಿ ಬರುವ ಕಾಲ ದೂರ ಇಲ್ಲ.

ಕಡೂರಿನ ಹುಲಿಕೆರೆಯಲ್ಲಿಂದು ಸಚಿವ ಅಶೋಕ್‌ ಗ್ರಾಮವಾಸ್ತವ್ಯ

ವೇತನ ಇಲ್ಲದೆ ಸಿಬ್ಬಂದಿ ಕ್ಯಾಂಟಿನ್‌ ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಇದೆ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದೇವೆ. ಇನ್ನು ಮುಂದುವರೆಯಲು ಸಾಧ್ಯವಿಲ್ಲ, ಬಹಳಷ್ಟುಕಾರ್ಮಿಕರು ತೊಂದರೆಯಲ್ಲಿದ್ದಾರೆ. ಪೇಮೆಂಟ್‌ ಬಂದರೆ ಮಾತ್ರ ಕ್ಯಾಂಟಿನ್‌ ರೀ ಓಪನ್‌, ಇಲ್ಲವಾದ್ರೆ ಇಲ್ಲ.

- ಕೃಷ್ಣೇಗೌಡ - ಜಿಲ್ಲಾ ವ್ಯವಸ್ಥಾಪಕರು, ಬಿಎಂಕೆಸಿ

ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುತ್ತಿದ್ದು, ದುಪ್ಪಟ್ಟು ಹಣವನ್ನು ನೀಡಿ ಹೋಟೆಲಿನಲ್ಲಿ ಊಟ ಮಾಡಲು ಸಾಧ್ಯವಿಲ್ಲ. ಇಂದಿರಾ ಕ್ಯಾಂಟೀನಿನಲ್ಲಿ ಕಡಿಮೆ ಬೆಲೆಗೆ ತಿಂಡಿ, ಊಟ ಸಿಗುವುದರಿಂದ ಮಧ್ಯಾಹ್ನ ಇಲ್ಲಿಯೇ ಊಟ ಮಾಡುತ್ತಿದ್ದು, ಈಗ ನಮಗೆ ಊಟಕ್ಕೆ ತೊಂದರೆಯಾಗುತ್ತಿದೆ.

- ರಮೇಶ್‌ ವಿದ್ಯಾರ್ಥಿ, ಹೊಸಪೇಟೆ

click me!