ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನಲೆಯಲ್ಲಿ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ರಾತ್ರಿ ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಕ್ಕಮಗಳೂರು (ಫೆ.4) : ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನಲೆಯಲ್ಲಿ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ (ಇಂದು)ಶನಿವಾರ ರಾತ್ರಿ ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಚಿಕ್ಕಮಗಳೂರು ಹಾಗೂ ಕಡೂರು ತಾಲೂಕುಗಳ ಗಡಿ ಭಾಗದಲ್ಲಿರುವ ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಚಿವರು ವಾಸ್ತವ್ಯ ಮಾಡಲಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ. ಶನಿವಾರ ಬೆಳಿಗ್ಗೆ ಚಿಕ್ಕಮಗಳೂರಿಗೆ ಆಗಮಿಸುವ ಸಚಿವರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಅಂಬಳೆ ಹಾಗೂ ವಸ್ತಾರೆ ನಾಡ ಕಚೇರಿಗಳನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ದಂಟರಮಕ್ಕಿಯಲ್ಲಿ ಸುಮಾರು 70 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಸಂಕೀರ್ಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಿವಮೊಗ್ಗ: ಕಂದಾಯ ಸಚಿವರ ಗ್ರಾಮ ವಾಸ್ತವ್ಯ ರದ್ದು..!
ಅಭಿನಂದನೆ:
ಕಾಫಿ ಬೆಳೆಗಾರರು ಒತ್ತುವರಿ ಮಾಡಿರುವ ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನ ಕೈಗೊಂಡಿರುವ ಹಿನ್ನಲೆಯ ಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚಾ ನಗರದ ಎಐಟಿ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಅಭಿನಂದನಾ ಸಮಾರಂಭ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಂಜೆ 4 ಗಂಟೆಗೆ ಸಚಿವರು ಕಡೂರು ತಾಲೂಕಿನ ಹುಲಿಕೆರೆ ಗ್ರಾಮಕ್ಕೆ ತೆರಳಲಿದ್ದಾರೆ. ಗ್ರಾಮಕ್ಕೆ ಆಗಮಿಸುವ ಸಚಿವರು ಹಾಗೂ ಶಾಸಕರನ್ನು ಸಾಂಪ್ರದಾಯಿಕವಾಗಿ ಕಲಾ ತಂಡಗಳೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುವುದು. ಇಲ್ಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಂಜೆ 5 ಗಂಟೆಗೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ 8 ತಾಂಡ್ಯಗಳನ್ನು ಕಂದಾಯ ಗ್ರಾಮವನ್ನಾಗಿ ಸಚಿವರು ಘೋಷಣೆ ಮಾಡಲಿದ್ದಾರೆ. ಸಖರಾಯಪಟ್ಟಣ ಹೋಬಳಿಯಲ್ಲಿ ಜೋಡಿ ಲಿಂಗದಹಳ್ಳಿ ತಾಂಡವನ್ನು ಸೇವಾಲಾಲ್ ನಗರ, ಎಸ್.ಬಿದರೆ ಬಳಿ ಇರುವ ತಾಂಡವನ್ನು ಕೃಷ್ಣಾಪುರ ಗ್ರಾಮವನ್ನಾಗಿ ಘೋಷಣೆ ಮಾಡಿ, 59 ಮನೆಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.
ಗ್ರಾಮವಾಸ್ತವ್ಯ ನಂತರ ದಲಿತರ ಮನೇಲಿ ಅಶೋಕ್ ಉಪಾಹಾರ
ಇದೇ ಸಂದರ್ಭದಲ್ಲಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಸೇರಿದಂತೆ ಸರ್ಕಾರಿ ಸವಲತ್ತು ವಿತರಿಸಲಿದ್ದಾರೆ. ಸಮಾರಂಭದ ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಶಾಲೆಯಲ್ಲಿ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಮರು ದಿನ ಬೆಳಿಗ್ಗೆ ದಲಿತರ ಮನೆಯಲ್ಲಿ ತಿಂಡಿ ಮಾಡಿ, ಸಾರ್ವಜನಿಕರ ಆಹವಾಲು ಸ್ವೀಕರಿಸಿ, ನಂತರ ಬೆಂಗಳೂರಿಗೆ ತೆರಳಲಿದ್ದಾರೆ.