ಜಿಲ್ಲೆಯಾಗಿ 13 ವರ್ಷಗಳ ಮುಕ್ತಾಯದಂಚಿನಲ್ಲಿರುವ ಯಾದಗಿರಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಅಂಶ ಕಳವಳಕಾರಿಯಾಗಿದೆ.
ಯಾದಗಿರಿ (ಡಿ.30): ಜಿಲ್ಲೆಯಾಗಿ 13 ವರ್ಷಗಳ ಮುಕ್ತಾಯದಂಚಿನಲ್ಲಿರುವ ಯಾದಗಿರಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಅಂಶ ಕಳವಳಕಾರಿಯಾಗಿದೆ. ಅದರಲ್ಲೂ, ಶಾಲಾ-ವಸತಿ ನಿಲಯಗಳ ಮಕ್ಕಳ ಮೇಲೆ ಇಂತಹ ಪ್ರಕರಣಗಳು ಕಂಡುಬರುತ್ತಿರುವುದು ವಿದ್ಯಾರ್ಥಿ ಹಾಗೂ ಪಾಲಕ-ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಶಾಲೆಯಿಂದ ಹೆಣ್ಣು ಮಕ್ಕಳು ದೂರ ಉಳಿಯಲು ಇದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಕಳೆದೊಂದ ದಶಕದ ಅವಧಿಯ ಗಮನಿಸಿದರೆ, ಜಿಲ್ಲೆಯಲ್ಲಿ 288 ಪೋಕ್ಸೋ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ, 276 ಪ್ರಕರಣಗಳು ಸತ್ಯಾಂಶದಿಂದ ಕೂಡಿದ್ದು, 9 ಪ್ರಕರಣಗಳು ಸುಳ್ಳು ಹಾಗೂ 3 ಪ್ರಕರಣಗಳ ವರ್ಗಾವಣೆಯಾಗಿದೆ.
16 ಜನ ಆರೋಪಿಗಳಿಗೆ ಇಲ್ಲಿ ಶಿಕ್ಷೆಯಾಗಿದೆ ಎಂದು ಇತ್ತೀಚೆಗಷ್ಟೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಜೆ. ನಾಗಣ್ಣಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಈ ಅಂಶಗಳನ್ನು ತಿಳಿಸಿದ್ದಾರೆ. ವಸತಿ ನಿಲಯದ ಮಕ್ಕಳ ಮೇಲೆ ಕಿರುಕುಳ: ಬಡ, ಪ್ರತಿಭಾವಂತ ಮಕ್ಕಳ ಕಲಿಕೆಗೆಂದು ವಸತಿ ವ್ಯವಸ್ಥೆಯುಳ್ಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಕೇಳಿ ಬರುತ್ತಿದೆ. ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜು ಮುಖ್ಯಸ್ಥರು ಅಥವಾ ಸಿಬ್ಬಂದಿಗಳು ಇಂತಹ ಕ್ರೌರ್ಯದ ಆರೋಪಿಗಳಾಗಿರುವುದು ನಿಜಕ್ಕೂ ಆಘಾತ ಮೂಡಿಸುತ್ತದೆ.
undefined
Kalaburagi: ಚಿಂಚೋಳಿ ಮಾದರಿ ತಾಲೂಕಿಗೆ ಬದ್ಧ: ಸಂಸದ ಉಮೇಶ ಜಾಧವ್
ಬೆರಳಣಿಕೆಯಷ್ಟು ಪ್ರಕರಣಗಳು ಬೆಳಕಿಗೆ ಬರುತ್ತವೆಯಾದರೂ, ಬಹುತೇಕ ಪ್ರಕರಣಗಳನ್ನು ಚಿವುಟಿ ಹಾಕಲಾಗುತ್ತದೆ ಎಂಬ ಮಾತುಗಳಿವೆ. ಪೋಕ್ಸೋ ವಿಚಾರ ಬಂದಾಗ, ಆರೋಪಿಗಳ ರಕ್ಷಣೆಗೆಂದು ಮುನ್ನುಗ್ಗುವ ಪ್ರಭಾವಿಗಳ ಒತ್ತಡ, ಸಂತ್ರಸ್ತೆ ದೂರು ನೀಡಲಿಲ್ಲವೆಂದು ’ಸೆಟ್ಲಮೆಂಟ್’ ಮಾಡಿ ಸಾಗಹಾಕುವ ಅಧಿಕಾರಿಗಳ ಬೇಜವಾಬ್ದಾರಿಯುತ ವರ್ತನೆಗಳು ಅನೇಕ ಪ್ರಕರಣಗಳ ಮರೆಮಾಚುವಿಕೆಗೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಈ ವರ್ಷ(2022) ರಲ್ಲಿ 40 ಪೋಕ್ಸೋ (ದಿ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಾಮ್ ಸೆಕ್ಷ್ಯುವಲ್ ಅಫೆನ್ಸಸ್ ಆ್ಯಕ್ಟ್-2012) ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 39 ಪ್ರಕರಣಗಳಲ್ಲಿ ಸತ್ಯಾಂಶ ಅಡಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಹಿತಿ ನೀಡಿದೆ.
ಸಂತ್ರಸ್ತೆ ಕುಟುಂಬದವರಿಗೆ ಒತ್ತಡ, ಬೆದರಿಕೆ: ಯಾದಗಿರಿ ಜಿಲ್ಲೆಯಲ್ಲಿನ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಇನ್ನಿತರ ಪ್ರಮುಖ ಸರ್ಕಾರಿ ವಸತಿ ನಿಲಯಗಳಲ್ಲಿ ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳು ಸಾಮಾನ್ಯ ಎಂದೆನ್ನಲಾಗುತ್ತಿದೆ. ಬಡ ಕುಟುಂಬದ ಮಕ್ಕಳ ಅನಿವಾರ‍್ಯತೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವು ಕಾಮುಕ ಶಿಕ್ಷಕರು, ಸಹಕರಿಸದಿದ್ದರೆ ಅಂಕಗಳ ನೀಡದೆ ಅನುತ್ತೀರ್ಣಗೊಳಿಸುವ ಬೆದರಿಕೆ ಹಾಕುತ್ತಾರೆ. ಇಂತಹ ವರ್ತನೆಗಳಿಂದಾಗಿ ದೈಹಿಕ ಹಾಗೂ ಮಾನಸಿಕ ಘಾಸಿಯಿಂದಾಗಿ ಅನೇಕ ಮಕ್ಕಳು ಶಾಲೆಗಳಿಂದ ದೂರ ಉಳಿಯುತ್ತಾರಲ್ಲದೆ, ಬಾಲ್ಯ ವಿವಾಹಗಳು ನಡೆಯುತ್ತಿರುವುದು ಆಘಾತಕಾರಿ ಎಂದೆನ್ನುವ ಮಕ್ಕಳ ರಕ್ಷಣಾ ಘಟಕದ ಕಲಬುರಗಿಯ ವಿಠಲ್ ಚಿಕಣಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾದಾಗಾ ಮಾತ್ರ ಇಂತಹ ಪ್ರಕರಣಗಳನ್ನು ತಡೆಗಟ್ಟುವು ಸಾಧ್ಯ ಅಂತಾರೆ.ಕಳೆದೊಂದು ದಶಕದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 288 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 276 ಪ್ರಕರಣಗಳಲ್ಲಿ ಸತ್ಯಾಂಶ ಕಂಡುಬಂದಿದೆ. 9 ಪ್ರಕರಣಗಳು ಸುಳ್ಳೆಂದು ಸಾಬೀತಾಗಿದ್ದು, 3 ಪ್ರಕರಣಗಳನ್ನು ವರ್ಗಾವಣೆಗೊಳಿಸಲಾಗಿದೆ. ಒಟ್ಟು 16 ಜನರಿಗೆ ಶಿಕ್ಷೆಯಾಗಿದ್ದು, 92 ಬಿಡುಗಡೆಯಾಗಿದ್ದಾರೆ. 164 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ರಾಜ್ಯದ ಸಾಲ 5.4ಲಕ್ಷ ಕೋಟಿಗೆ ಹೆಚ್ಚಳ: ಕೃಷ್ಣ ಬೈರೇಗೌಡ ಆತಂಕ
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಾಗ ತಕ್ಷಣವೇ ದೂರು ದಾಖಲಿಸಿಕೊಳ್ಳಬೇಕು. ಯಾವುದೇ ಪ್ರಭಾವ ಹಾಗೂ ಒತ್ತಡಕ್ಕೆ ಮಣಿಯಬಾರದು. ಪ್ರಕರಣವನ್ನೂ ತಿರುಚುವ ಯತ್ನ ಮಾಡಿದರೆ ಅಂತಹವ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಆಯೋಗ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ
-ಕೆ. ನಾಗಣ್ಣಗೌಡ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಬೆಂಗಳೂರು.