
ಬೆಂಗಳೂರು(ಜೂ.21): ಉಪನಗರ ರೈಲು (ಸಬ್ ಅರ್ಬನ್) ಯೋಜನೆಯು ಹಲವು ಏಳು ಬೀಳುಗಳ ನಡುವೆ ಪ್ರಸ್ತಾವನೆಯಾಗಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಬಳಿಕ ಸೋಮವಾರ ಉದ್ಘಾಟನೆಯಾಗಿದೆ. ಇನ್ನು ಆರು ವರ್ಷಗಳ ಬಳಿಕ (2028 ವೇಳೆಗೆ) ಮೊದಲ ಉಪನಗರ ರೈಲು ರಾಜಧಾನಿಯಲ್ಲಿ ಸಂಚಾರ ಆರಂಭಿಸಲಿದೆ.
ಈ ಯೋಜನೆಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾವನೆ ಸಿದ್ಧಪಡಿಸಿತ್ತು. 2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಗಿತ್ತು. 2020ರ ಅಕ್ಟೋಬರ್ 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆ ದೊರೆಯಿತು. ಪ್ರಸ್ತಾವನೆಯಾಗಿ 39 ವರ್ಷಗಳ ಬಳಿಕ ಒಂದೂವರೆ ವರ್ಷಗಳ ಪ್ರಧಾನಿ ಮೋದಿಯವರಿಂದ ಬಳಿಕ ಶಂಕು ಸ್ಥಾಪನೆಯಾಗಿದೆ.
Bengaluru Suburban Rail: 500 ದಿನವಾದ್ರೂ ನಿಂತಲ್ಲೇ ನಿಂತ ಸಬ್ ಅರ್ಬನ್ ರೈಲು
ದೇಶದ ಮೊದಲ ಹೈಟೆಕ್ ಸಬ್ ಅರ್ಬನ್:
ಇದು ದೇಶದ ಮೊದಲ ಹೈಟೆಕ್ ಸಬ್ ಅರ್ಬನ್ ಯೋಜನೆಯಾಗಿದೆ. ಆ ಯೋಜನೆಯಡಿ ರೈಲು, ನಿಲ್ದಾಣಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಹವಾನಿಯಂತ್ರಿತ ಬೋಗಿ, ನಿಲ್ದಾಣ, ಪೇಪರ್‌ಲೆಸ್ ಟಿಕೆಟ್ ವ್ಯವಸ್ಥೆ ಸೇರಿದಂತೆ ಮೆಟ್ರೋ ಮಾದರಿಯಲ್ಲಿಯೇ ಹಲವು ಅಪ್‌ಡೇಟ್, ಹೈಟೆಕ್ ಅಂಶ ಇರಲಿದೆ.
*ಏನಿದು ಉಪನಗರ ರೈಲು?
ನಗರದ ಒಳ ಮತ್ತು ಹೊರವಲಯದ ರೈಲ್ವೆ ನಿಲ್ದಾಣಗಳ ಮಧ್ಯೆ ಅಗತ್ಯವಿರುವ ಬಡಾವಣೆಗಳಲ್ಲಿ ನಿಲುಗಡೆ ಮಾಡಿಕೊಂಡು ಸೀಮಿತ ಬೋಗಿಗಳ ಮೆಮೊ ಮಾದರಿಯ ರೈಲು ಓಡಾಟ ನಡೆಸಲಿದೆ. ಸದ್ಯ ಲಭ್ಯವಿರುವ ರೈಲು ಮಾರ್ಗಗಳಲ್ಲಿ ಜತೆಗೆ ಅಗತ್ಯವಿರುವ ಕಡೆ ಹೊಸ ಪ್ರತ್ಯೇಕ ರೈಲು ಮಾರ್ಗ ಜತೆಗೆ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. 147.17 ಕಿ.ಮೀನಲ್ಲಿ ನಾಲ್ಕು ಮಾರ್ಗ ರೂಪಿಸಿದ್ದು, 57 ನಿಲ್ದಾಣಗಳ ನಡುವೆ ರೈಲು ಓಡಾಟ ನಡೆಸಲಿವೆ. ಮೆಟ್ರೊ ರೈಲಿನ ಮಾದರಿಯಲ್ಲಿ ಈ ರೈಲುಗಳು ನಗರದ ವಿವಿಧೆಡೆ ಸಂಚರಿಸಲಿದ್ದು, ರೈಲಿನಲ್ಲಿ ಶೌಚಾಲಯ, ಲಗೇಜ್ ಸಾಗಾಣಿಕೆಗೆ ಅನುಕೂಲವಾಗಲಿದೆ.
*ಅನುಕೂಲ ಹೇಗೆ?
ಮೆಟ್ರೊಗಿಂತಲೂ ಕಡಿಮೆ ದರ ಇರಲಿದೆ. ಮೆಟ್ರೊ ಲಭ್ಯವಿರದ ಹೊರ ವಲಯಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ಜತೆಗೆ ಮೆಟ್ರೊ ರೀತಿಯಲ್ಲಿಯೇ ತ್ವರಿತವಾಗಿ ನಗರದ ವಿವಿಧ ಭಾಗಗಳಿಗೆ ಸಂಚರಿಸಬಹುದು. ಪ್ರಮುಖವಾಗಿ ನಗರ ವಿವಿಧ ಬಡಾವಣೆಗಳಿಂದ ಸುತ್ತಲಿನ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಸಂಪರ್ಕ ಸುಗಮಗೊಳ್ಳಲಿದೆ. ನಗರದ ಸಂಚಾರ ದಟ್ಟಣೆ ತಗ್ಗಿ, ಹೊರವಲಯ ಮತ್ತು ನಗರದ ವಿವಿಧ ಭಾಗಗಳಿಗೆ ಸಂಚಾರ ಸುಗಮವಾಗಲಿದೆ.
ಎಷ್ಟು ವೆಚ್ಚ, ಯಾರ ಪಾಲು ಎಷ್ಟು?
ಸುಮಾರು 15,767 ಕೋಟಿ ರು. ವೆಚ್ಚದ ಯೋಜನೆಯಾಗಿದ್ದು, ಕೇಂದ್ರ, ರಾಜ್ಯ ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳ ಮೂಲಕ 20:20:60 ಅನುಪಾತದಲ್ಲಿ ಇದಕ್ಕೆ ಬಂಡವಾಳ ತೊಡಗಿಸಲಾಗುತ್ತಿದೆ. ರಾಜ್ಯ, ಕೇಂದ್ರ ಸರ್ಕಾರಗಳು ತನ್ನ ಅನುದಾನ ಮತ್ತು ಬಾಹ್ಯ ಸಾಲದ ಮೂಲಕ ಕಾರ್ಯರೂಪಕ್ಕೆ ತರುತ್ತಿವೆ. ಸದ್ಯ ರಾಜ್ಯ ಸರ್ಕಾರ ಮತ್ತು ಕೇಂದ್ರದ ರೈಲ್ವೆ ಸಚಿವಾಲಯದ ಜಂಟಿ ಮಾಲೀಕತ್ವದ ಕೆ-ರೈಡ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಸದ್ಯ ಸಿಕ್ಕಿರುವ ಅನುದಾನ ಎಷ್ಟು?
ಕೇಂದ್ರ ಸರ್ಕಾರವು 2022-23ನೇ ಸಾಲಿನ ಬಜೆಟ್‌ನಲ್ಲಿ 450 ಕೋಟಿ ರೂ. ಈ ಯೋಜನೆಗೆ ಮೀಸಲಿಟ್ಟಿದೆ. ಈ ಪೈಕಿ ಈಗಾಗಲೇ ಅಂದರೆ 2022ರ ಮೇ ವರೆಗೆ .120.23 ಕೋಟಿ ಖರ್ಚು ಕೂಡ ಮಾಡಲಾಗಿದೆ. ಇದಲ್ಲದೆ, ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆಯ ನೆರವಿನಿಂದ ಜರ್ಮನಿಯ ಕೆಎಫ್‌ಡಬ್ಲು ಮತ್ತು ಫ್ರಾನ್ಸ್‌ನ ಎಎಫ್‌ಡಿ ವಿದೇಶಿ ಅಭಿವೃದ್ಧಿ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಕೂಡ ದೊರಕಿದೆ.
ಸದ್ಯ ಯೋಜನೆ ಪ್ರಗತಿ ಯಾವ ಹಂತದಲ್ಲಿದೆ?
ಕೇಂದ್ರ ಸರ್ಕಾರದಿಂದ ಯೋಜನೆಗೆ ಅನುಮೋದನೆ ಸಿಕ್ಕ ಬಳಿಕ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿತ್ತು. ಕಳೆದ 10 ತಿಂಗಳಿಂದ ಕಾಮಗಾರಿಗೆ ಸಂಬಂಧಿಸಿದ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಯೋಜನೆಗೆ ಅಗತ್ಯವಿರುವ ಶೇ. 85ರಷ್ಟು ಭೂಮಿ ಈಗಾಗಲೇ ಲಭ್ಯವಿದ್ದು, ನಿಲ್ದಾಣ ಮತ್ತು ಡಿಪೋಗಳ ಸ್ಥಾಪನೆಗೆ ಭೂಮಿಯ ಅಗತ್ಯವಿದೆ. ಮಾರ್ಗ-2 ಮಾರ್ಗಕ್ಕೆ ಭೂಸ್ವಾಧೀನ ಕಾರ್ಯ ಪ್ರಗತಿ. ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮಾರ್ಗದ ಸಿವಿಲ್ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಓಪನ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭ. ಕಾರಿಡಾರ್- 4ಕ್ಕೆ ಟೆಂಡರ್ ಆಹ್ವಾನಕ್ಕೆ ಅಂತಿಮ ಸಿದ್ಧತೆ ನಡೆದಿದೆ.
Bengaluru Suburban Rail: ಹೀಲಲಿಗೆ-ಯಲಹಂಕ-ರಾಜಾನುಕುಂಟೆ ಸಬ್‌ಅರ್ಬನ್ ರೈಲು ಕಾಮಗಾರಿ ಶೀಘ್ರ
ನಾಲ್ಕು ಮಾರ್ಗಗಳು- 57 ನಿಲ್ದಾಣಗಳು
*ಮಾರ್ಗ-1 (ಸಂಪಿಗೆ) ಬೆಂಗಳೂರು ಸಿಟಿ-ದೇವನಹಳ್ಳಿ (41.40 ಕಿ.ಮೀ)
ಕೆಎಆರ್ ರೈಲು ನಿಲ್ದಾಣ, ಶ್ರೀರಾಮಪುರ, ಮಲ್ಲೇಶ್ವರ, ಯಶವಂತಪುರ, ಮುತ್ಯಾಲ ನಗರ, ಕೊಡಿಗೇಹಳ್ಳಿ, ನ್ಯಾಯಾಂಗ ಬಡಾವಣೆ, ಯಲಹಂಕ, ನಿಟ್ಟೆಕಾಲೇಜು, ಬೆಟ್ಟಹಲಸೂರು, ದೊಡ್ಡಜಾಲ, ಕೆಐಎ ಟ್ರಂಪೆಟ್, ದೇವನಹಳ್ಳಿ.
*ಮಾರ್ಗ-2 (ಮಲ್ಲಿಗೆ) ಬೈಯಪ್ಪನಹಳ್ಳಿ-ಚಿಕ್ಕ ಬಾಣಾವರ (25.01 ಕಿ.ಮೀ)
ಚಿಕ್ಕಬಾಣಾವರ, ಶೆಟ್ಟಿಹಳ್ಳಿ, ಜಾಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಬೈಯಪ್ಪನಹಳ್ಳಿ.
*ಮಾರ್ಗ-3 (ಪಾರಿಜಾತ) ಕೆಂಗೇರಿ-ವೈಟ್‌ಫೀಲ್ಡ್ (35.52 ಕಿ.ಮೀ)
ಕೆಂಗೇರಿ ಆರ್.ವಿ.ಕಾಲೇಜು, ಜ್ಞಾನ ಭಾರತಿ, ನಾಯಂಡಹಳ್ಳಿ, ಕೃಷ್ಣ ದೇವರಾಯ, ಜೆ.ಜೆ.ನಗರ, ಕೆಎಸ್‌ಆರ್, ಬೆಂಗಳೂರು ದಂಡು, ಬೆಂಗಳೂರು ಪೂರ್ವ ಬೈಯಪ್ಪನಹಳ್ಳಿ, ಕೆ.ಆರ್.ಪುರ, ಹೂಡಿ, ವೈಟ್‌ಫೀಲ್ಡ್.
*ಮಾರ್ಗ-4 (ಕನಕಾಂಬರಿ) ಹೀಲಲಿಗೆ -ರಾಜಾನುಕುಂಟೆ (46.24 ಕಿ.ಮೀ)
ಹೀಲಲಿಗೆ, ಬೊಮ್ಮಸಂದ್ರ, ಸಿಂಗೇನ ಅಗ್ರಹಾರ, ಹುಸ್ಕೂರು, ಅಂಬೇಡ್ಕರ್ ನಗರ, ಬೆಳ್ಳಂದೂರು ರಸ್ತೆ, ಮಾರತ್ತಹಳ್ಳಿ, ಕಗ್ಗದಾಸಪುರ, ಬೈಯಪ್ಪನಹಳ್ಳಿ, ಚನ್ನಸಂದ್ರ ಹೊರಮಾವು, ಹೆಣ್ಣೂರು, ಥಣಿಸಂದ್ರ, ಹೆಗಡೆ ನಗರ, ಜಕ್ಕೂರು, ಯಹಲಂಕ, ಮುದ್ದೈನಹಳ್ಳಿ, ರಾಜಾನುಕುಂಟೆ.