ಬಹಳ ಮಹತ್ವದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ಕೊಡಗು ಜಿಲ್ಲೆಯ ಬರೋಬ್ಬರಿ 28, 800 ಕ್ಕೂ ಫಲಾನುಭವಿಗಳಿಗೆ ದೊರೆತ್ತಿಲ್ಲ ಎನ್ನುವುದು ಗೊತ್ತಾಗಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.26): ಬಹಳ ಮಹತ್ವದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ಕೊಡಗು ಜಿಲ್ಲೆಯ ಬರೋಬ್ಬರಿ 28, 800 ಕ್ಕೂ ಫಲಾನುಭವಿಗಳಿಗೆ ದೊರೆತ್ತಿಲ್ಲ ಎನ್ನುವುದು ಗೊತ್ತಾಗಿದೆ. ಜೊತೆಗೆ 1089 ಫಲಾನುಭವಿಗಳು ಅರ್ಜಿ ಹಾಕಿದ್ದರೂ ಅವರಿಗೆ ಇಕೆವೈಸಿ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಯೋಜನೆ ತಲುಪುತ್ತಿಲ್ಲ ಎನ್ನುವ ವಿಷಯ ತೀವ್ರ ಚರ್ಚೆಗೆ ಕಾರಣವಾಯಿತು. ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಪುಷ್ಪಾ ಅಮರನಾಥ್ ಅವರು ಅಧಿಕಾರಿಗಳನ್ನು ಕೆಲವು ಬಾರಿ ತರಾಟೆಗೂ ತೆಗೆದುಕೊಂಡರು.
ಕಾರ್ಯಕ್ರಮಗಳನ್ನು ಜಾರಿ ಮಾಡುವಲ್ಲಿ ಮುಖ್ಯವಾಗಿರುವ ತಾಲ್ಲೂಕು ಮಟ್ಟದ ಇಓಗಳು ಸಭೆಗೆ ಹಾಜರಾಗದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಪುಷ್ಪ ಅಮರನಾಥ್ ಅಸಮಾಧಾನ ವ್ಯಕ್ತಪಡಿಸಿದರು. 500 ಜನರು ನಾವು ಜಿಎಸ್ ಟಿ ಅಥವಾ ಐಟಿ ಪಾವತಿದಾರರಲ್ಲ ಎಂದು ದಾಖಲೆ ನೀಡಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದಾರೆ. ಅದನ್ನು ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಪುಷ್ಪ ಅಮರನಾಥ್ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 1,05,000 ಸಾವಿರ ಬಿಪಿಎಲ್ ಕಾರ್ಡ್ ಗಳು ಇವೆ ಎಂಬ ಮಾಹಿತಿ ಇದ್ದು ಅದರಲ್ಲಿ ಎಷ್ಟೋ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ ಎಂಬ ಅನುಮಾನವಿದೆ. ಇದನ್ನು ಪರಿಶೀಲಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಆಗ್ರಹಿಸಿದರು.
ಶಾಲಾ ಮಕ್ಕಳಿಗೆ ಬಿಸಿ ಊಟದ ಜೊತೆ ವಾರದಲ್ಲಿ 6 ದಿನ ಮೊಟ್ಟೆ: ಸಚಿವ ಮಹದೇವಪ್ಪ
ಕೆಲವರಿಗೆ ಆರಂಭದಲ್ಲಿ ಹಣಬಂದಿದ್ದು, ಈಗ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಐಟಿ, ಜಿಎಸ್ ಟಿ ಪಾವತಿದಾರರು ಎಂಬ ಮಾಹಿತಿ ನೀಡುತ್ತಿದ್ದಾರೆ. ಆದರೆ ಫಲಾನುಭವಿಗಳು ಮಾತ್ರ ನೈಜವಾಗಿ ಅರ್ಹರಾಗಿದ್ದಾರೆ ಎನ್ನುವದನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಗಮನಕ್ಕೆ ತಂದರು. ಎಲ್ಲವನ್ನು ಗಮನಿಸಿದ ಪುಷ್ಪ ಅಮರನಾಥ್ ಅವರು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕವನ್ನು ಸಿಎಂ, ಡಿಸಿಎಂ ಭಾವಚಿತ್ರದೊಂದಿಗೆ ಕಡ್ಡಾಯವಾಗಿ ಹಾಕಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯ ಬಿ.ಡಿ. ಅಣ್ಣಯ್ಯ ಮಾತನಾಡಿ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟಗಳಲ್ಲಿ ಇರುವ ಆದಿವಾಸಿ ಬುಡಕಟ್ಟು ಕುಟುಂಬಗಳು ವಿರಾಜಪೇಟೆ ತಾಲ್ಲೂಕಿನಿಂದ ಕುಶಾಲನಗರ ತಾಲ್ಲೂಕಿಗೆ ಬಂದವರಾಗಿದ್ದಾರೆ. ಅವರ ಆಧಾರ ಕಾರ್ಡ್ ರೇಷನ್ ಕಾರ್ಡುಗಳನ್ನು ಇಂದಿಗೂ ಪ್ರಸ್ತುತ ವಿಳಾಸಕ್ಕೆ ಬದಲಾವಣೆ ಮಾಡಿಕೊಟ್ಟಿಲ್ಲ. ಇದರಿಂದ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿ ಡಿ ಅಣ್ಣಯ್ಯ ಒತ್ತಾಯಿಸಿದರು.
ಸಭೆಯ ಬಳಿಕ ಮಾತನಾಡಿದ ಪುಷ್ಪಾ ಅಮರನಾಥ್ ಅವರು ಯೋಜನೆಗಳಿಂದ ಅಧಿಕಾರಿಗಳ ಜಾರಿಗಾಗಿ ಬಜೆಟಿನಲ್ಲಿಯೇ 52 ಸಾವಿರ ಕೋಟಿ ಮೀಸಲು ಇರಿಸಲಾಗಿದೆ. ಯೋಜನೆಯ ಅನುದಾನವೇ ಬೇರೆ, ವಿವಿಧ ಇಲಾಖೆಗಳ ಸಿಬ್ಬಂದಿಯ ವೇತನದ ಅನುದಾನವೇ ಬೇರೆ. ಹಾಗಾಗಿ ಗ್ಯಾರೆಂಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿಲ್ಲ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಒತ್ತಾಯಿಸುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು ಮುಡಾ ವಿಚಾರದಲ್ಲಿ ರಾಜೀನಾಮೆ ಕೊಡಬೇಕು ಅಂತೇನು ಇಲ್ಲ.
ತನಿಖೆ ಪಾಡಿಗೆ ತನಿಖೆ ನಡೆಯುತ್ತದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕೆಂದು ವಿಪಕ್ಷಗಳು ಹೇಳಿದ ತಕ್ಷಣ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಬೇಕು ಅಂತೇನು ಇಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು. ಬಿಜೆಪಿ, ಜೆಡಿಎಸ್ ನ ಸಾಕಷ್ಟು ನಾಯಕರ ಮೇಲೂ ವಿವಿಧ ಆರೋಪವಿದ್ದು, ತನಿಖೆ ನಡೆಯುತ್ತಿವೆ. ಅವರು ಯಾರು ರಾಜೀನಾಮೆ ಕೊಟ್ಟಿಲ್ಲ ಅಲ್ಲವೆ.? ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಜಾಮೀನಿನ ಮೇಲೆ ಆಚೆ ಇದ್ದಾರೆ. ಆದರೆ ಆರೋಪಗಳು ಬಂದು ಕೂಡಲೇ ರಾಜೀನಾಮೆ ಕೊಡಬೇಕು ಅನ್ನೋ ಮಾನದಂಡ ಎಲ್ಲೂ ಇಲ್ಲಾ.
ನಾನು ತಪ್ಪು ಮಾಡಿಲ್ಲಾ, ತನಿಖೆ ಎದುರಿಸುತ್ತೇನೆ ಅಂತ ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಿದ್ದಾರೆ. ನಮಗೂ ನಂಬಿಕೆ ಇದೆ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ, ಜೆಡಿಎಸ್ ಗಳು ಷಡ್ಯಂತ್ರಮಾಡಿ ಅವರ ಆತ್ಮವಿಶ್ವಾಸ ಕುಗ್ಗಿಸಲು ಹೊರಟ್ಟಿವೆ. ಸಿಎಂ ಎಲ್ಲವನ್ನ ಮೆಟ್ಟಿನಿಂತು ಹೊರ ಬರುತ್ತಾರೆಂಬ ನಂಬಿಕೆ ನಮಗೆ ಇದೆ ಎಂದರು. ಆದರೆ ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಸಿಎಂ ಆಗಿದ್ದ ಯಡಿಯೂರಪ್ಪನವರನ್ನು ರಾಜೀನಾಮೆ ಕೇಳಿದ್ದರು. ಈಗ ಅವರು ಕೂಡ ರಾಜೀನಾಮೆ ಕೊಡಬೇಕಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಷ್ಪಾ ಅಮರನಾಥ್, ಯಡಿಯೂರಪ್ಪ ಅವರ ಪ್ರಕರಣವೇ ಬೇರೆ, ಸಿದ್ದರಾಮಯ್ಯನವರ ಪ್ರಕರಣವೇ ಬೇರೆ.
ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆ?: ದಂತಗಳು ನಾಪತ್ತೆ
ಆ ಪ್ರಕರಣದಲ್ಲಿ ಯಡಿಯೂರಪ್ಪನವರೆ ನೇರವಾಗಿ ಆರೋಪಿಯಾಗಿದ್ರು. ಆದರೆ ಸಿದ್ದರಾಮಯ್ಯನವರ ಮೇಲೆ ತನಿಖೆಯಾಗ ಬೇಕು ಅಂತ ನಡೆಯುತ್ತಿದೆ ಅಷ್ಟೇ. ಸಿದ್ದರಾಮಯ್ಯನವರ ಪಾತ್ರ ನೇರವಾಗಿದೆ ಅನ್ನೋದು ಇನ್ನೂ ಅಸ್ಪಷ್ಟ. ಗೌವರ್ನರ್ ಮೂಲಕ ಸರ್ಕಾರ ಅಲ್ಲಾಡಿಸಲು ಹೊರಟಿರುವುದು ಮಹಾ ಅಪರಾಧ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ತನಿಖೆ ಎದುರಿಸಿ ಸಿದ್ದರಾಮಯ್ಯನವರು ಪ್ರಕರಣದಿಂದ ಹೊರಬರ್ತಾರೆ ಸತ್ಯ ಗೆಲ್ಲುತ್ತದೆ ಎಂದು ಮಡಿಕೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪುಷ್ಪ ಅಮರನಾಥ್ ಅವರು ಬ್ಯಾಟ್ ಬಿಸಿದರು.