ಗದಗ: ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ

By Kannadaprabha NewsFirst Published Apr 18, 2021, 12:35 PM IST
Highlights

ರೈತರಿಗೆ ಹಣದ ಆಸೆ ತೋರಿಸಿ ಅಕ್ರಮವಾಗಿ 10ರಿಂದ 15 ಅಡಿ ಆಳ ಭೂಮಿ ಬಗೆದರು| ದೂರು ಕೊಟ್ಟರೂ ಕಣ್ಮುಚ್ಚಿ ಕುಳಿತ ಗಣಿ ಇಲಾಖೆ ಅಧಿಕಾರಿಗಳು| ಅಕ್ರಮ ಮಣ್ಣು ಗಣಿಕಾರಿಕೆ ವಿಷಯವಾಗಿ ಪ್ರತಿಕ್ರಿಯೆ ನೀಡದ ಗಣಿ ಮತ್ತ ಭೂ ವಿಜ್ಞಾನ ಇಲಾಖೆ ಅಧಿಕಾರಿ| 

ಶಿವಕುಮಾರ ಕುಷ್ಟಗಿ

ಗದಗ(ಏ.18): ಗದಗ-ಹೊನ್ನಾಳಿ ಹೆದ್ದಾರಿ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹತ್ತಾರು ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿ ಜಮೀನು ಕಳೆದುಕೊಂಡ ರೈತರ ಜೀವ ಹಿಂಡುತ್ತಲೇ ಅಭಿವೃದ್ಧಿ ಹೆಸರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ.

ಹೆದ್ದಾರಿ ಅಭಿವೃದ್ಧಿಗೆ ಬೇಕಾಗುವ ಮಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಯಾವುದೇ ನಿಯಮ ಬಾಹಿರವಾಗಿ ಪಡೆಯದಂತೆ ಯೋಜನೆಯ ಡಿಪಿಆರ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಸದ್ಭವ ಕಂಪನಿಯ ಅಧಿಕಾರಿಗಳು ಮಾತ್ರ ಯಲಿಶಿರೂರು, ವೆಂಕಟಾಪುರ ಗುಡ್ಡ, ಶಿರುಂಜ ಗ್ರಾಮಗಳ ವ್ಯಾಪ್ತಿಯಲ್ಲಿನ ರೈತರಿಗೆ ಹೆಚ್ಚಿನ ಹಣದ ಆಸೆ ಹಾಗೂ ನಿಮ್ಮ ಜಮೀನುಗಳನ್ನು ಸಮತಟ್ಟಾಗಿ ಮಾಡಿಕೊಡುವುದಾಗಿ ಹೇಳಿ ಅಕ್ರಮವಾಗಿ 10ರಿಂದ 15 ಅಡಿಗಳಷ್ಟು ಆಳದಲ್ಲಿ ಭೂಮಿಯನ್ನು ಬಗೆದಿದ್ದು, ಇದನ್ನು ರೈತರು ಪ್ರಶ್ನೆ ಮಾಡಿದರೆ ನಂತರ ಸರಿ ಮಾಡಿಕೊಡುವುದಾಗಿ ಸಬೂಬು ಹೇಳುತ್ತಲೇ ಒಂದೆಡೆ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡುತ್ತಿದ್ದರೆ, ಇನ್ನೊಂದೆಡೆ ರೈತರ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಮಾಡುತ್ತಾ ಇನ್ನುಳಿದ ರೈತರಿಗೆ ಮತ್ತೊಂದು ರೀತಿಯಲ್ಲಿ ಅನ್ಯಾಯ ಮಾಡುತ್ತಾ ತಮ್ಮ ಕಾರ್ಯ ಸಾಧುವನ್ನು ಮಾತ್ರ ನೋಡಿಕೊಳ್ಳುತ್ತಿದ್ದಾರೆ.

ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಕಂಪನಿಯ ಅಧಿಕಾರಿಗಳು ಶಿರುಂದ ಗ್ರಾಮದ ಸರ್ವೇ 16ರಲ್ಲಿ ಮಣ್ಣು ಗಣಿಗಾರಿಕೆ ಮಾಡಲು ಅನುಮತಿ ಪಡೆದಿದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡುವ ಸಂದರ್ಭದಲ್ಲಿ ಮೇಲ್ಬಾಗದ, ಕೃಷಿಗೆ ಯೋಗ್ಯವಲ್ಲದ ಮಣ್ಣನ್ನು ಕೇವಲ 3 ಅಡಿ ಆಳದಲ್ಲಿ ಮಾತ್ರ ತೆಗೆಯುವಂತೆ ಅನುಮತಿ ನೀಡಿದೆ, ಆದರೆ ಕಂಪನಿಯ ಅಧಿಕಾರಿಗಳ ಮಾತ್ರ ತಮಗೆ ಎಲ್ಲೆಲ್ಲಿ ಉತ್ತಮ ಗುಣಮಟ್ಟದ ಮಣ್ಣು ಸಿಗುತ್ತದೆ. ಆ ರೈತರನ್ನು ಪುಸಲಾಯಿಸಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ಯಾರೇ ಅನುಮತಿ ಬಗ್ಗೆ ಪ್ರಶ್ನಿಸಿದರೆ ಇದೊಂದೇ ಅನುಮತಿ ಪತ್ರವನ್ನು ತೋರಿಸುತ್ತಾ ಈಗಾಗಲೇ ನೂರಾರು ಟಿಪ್ಪರ್‌ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಲ್ಲದೇ ಅನುಮತಿ ಪಡೆದ ಹೊಲದಲ್ಲಿಯೇ ಸಂಪೂರ್ಣ ಗುಡ್ಡವನ್ನೇ ನುಂಗಿ ಹಾಕಿದ್ದಾರೆ.

ಗದಗ: ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಅನ್ಯಾಯ

ಭಾಷಾ ಸಮಸ್ಯೆ

ಸದ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಯುಪಿ, ಬಿಹಾರ, ಆಂಧ್ರಪ್ರದೇಶ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದು, ಇಲ್ಲಿನ ರೈತರು ಏನಾದರೂ ಸಮಸ್ಯೆಯಾಗುತ್ತಿದೆ, ಇದನ್ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಇಲ್ಲಿಯ ರೈತರಿಗೆ ಹಿಂದಿ ಇನ್ನಿತರ ಭಾಷೆ ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲ, ಇದನ್ನೆಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಮಾತ್ರ ರೈತರ ಕೈಗೆ ಸಿಗುವುದೇ ಇಲ್ಲ, ಇದರಿಂದಾಗಿ ಈ ಭಾಗದ ನಾಲ್ಕೈದು ಗ್ರಾಮಗಳ ರೈತರು ರೋಸಿ ಹೋಗಿದ್ದಾರೆ.

ಕಣ್ಮುಚ್ಚಿ ಕುಳಿತ ಗಣಿ ಇಲಾಖೆ

ಜಿಲ್ಲಾ ಕೇಂದ್ರದಿಂದ ಕೂಗಳತೆಯಲ್ಲಿಯೇ ವ್ಯಾಪಕವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ, ಈ ಬಗ್ಗೆ ಹಲವಾರು ರೈತರು ಗಣಿ ಮತ್ತ ಭೂ ವಿಜ್ಞಾನ ಇಲಾಖೆಗೆ ಹೋಗಿ ಲಿಖಿತವಾಗಿ ದೂರು ಕೊಟ್ಟಿದ್ದಾರೆ, ಆದರೆ ಗಣಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಕನಿಷ್ಠ ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿ, ತೊಂದರೆಗೊಳಗಾಗುತ್ತಿರವ ರೈತರ ನೆರವಿಗೆ ಧಾವಿಸುವ ಪ್ರಯತ್ನ ಮಾಡಿಲ್ಲ, ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎನ್ನುವ ಸಿದ್ಧ ಉತ್ತರ ನೀಡುತ್ತಿರುವ ಹಿನ್ನೆಲೆಯಲ್ಲಿ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳ ಬಗ್ಗೆಯೇ ನಮಗೆ ಸಂಶಯ ಮೂಡುತ್ತಿದೆ ಎನ್ನುತ್ತಾರೆ ಅಲ್ಲಿನ ರೈತರು.

ಈ ಕಂಪನಿಯ ಅಧಿಕಾರಿಗಳು ಸಾಕಷ್ಟು ತೊಂದರೆಗಳನ್ನು ನಮ್ಮ ರೈತರಿಗೆ ಸೃಷ್ಟಿಮಾಡುತ್ತಿದ್ದಾರೆ. ಇವರಿಗೆ ಏನು ಹೇಳಿದರೂ ಕೇಳುತ್ತಿಲ್ಲ, ನಾವ್‌ ಯಾರಿಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಎಲ್ಲವನ್ನೂ ಕೂಲಂಕಷಕವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಲ್ಲಪ್ಪ ಮಲ್ಲಣ್ಣವರ, ಫಕ್ಕೀರಡ್ಡೆಪ್ಪ ಚಿಗರಿ, ಮಹೇಶ ಹುಡೇದ ಗ್ರಾಮಗಳ ರೈತರು ಹೇಳಿದ್ದಾರೆ.

ಅಕ್ರಮ ಮಣ್ಣು ಗಣಿಕಾರಿಕೆ ವಿಷಯವಾಗಿ ಗಣಿ ಮತ್ತ ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ ಪ್ರತಿಕ್ರಿಯೆ ಕೊಡುತ್ತಿಲ್ಲ, ಕಚೇರಿಗೆ ತೆರಳಿದರೂ ಅವರು ಲಭ್ಯವಾಗುತ್ತಿಲ್ಲ. ಇದು ಕೂಡಾ ಹಲವು ಸಂಶಯಕ್ಕೆ ಕಾರಣವಾಗಿದೆ.
 

click me!