ಸಚಿವ-ಶಾಸಕರ ನಡುವೆ ವೇದಿಕೆಯಲ್ಲೆ ವಾಕ್ಸಮರ! ಜನರೆದುರೆ ನಾಯಕರ ಕ್ಲ್ಯಾಶ್

By Kannadaprabha NewsFirst Published Apr 18, 2021, 12:19 PM IST
Highlights

ವೇದಿಕೆಯಲ್ಲೇ  ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವಿನ ವಾಕ್ಸಸಮರ ನಡೆದಿದೆ. ಜನರೆದುರೇ ಜನಪ್ರತಿನಿಧಿಗಳಿಬ್ಬರು ವಾಗ್ವಾದ ನಡೆಸಿಕೊಂಡಿದ್ದಾರೆ. 

ಶ್ರೀರಂಗಪಟ್ಟಣ (ಏ.18):  ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭದ ವೇದಿಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವಿನ ವಾಕ್ಸಸಮರದ ವೇದಿಕೆಯಾಗಿ ಪರಿವರ್ತನೆಗೊಂಡ ಘಟನೆ ಶನಿವಾರ ಪಟ್ಟಣದಲ್ಲಿ ನಡೆಯಿತು.

ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಾ ಅವರನ್ನು ತರಾಟೆಗೆ ತೆಗೆದುಕೊಂಡರೆ, ಅಧಿಕಾರಿಗಳ ಪರ ನಿಂತ ಸಚಿವ ಕೆ.ಸಿ.ನಾರಾಯಣಗೌಡರು ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಏನಾಯ್ತು?

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಂದಾಯ ಅದಾಲತ್‌ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಶನಿವಾರ ಆಯೋಜಿಸಲಾಗಿತ್ತು.

ಜಮೀರ್‌ ಅಹಮದ್‌ಗೆ ಖಡಕ್ ವಾರ್ನಿಂಗ್ : 'ಕ್ಷಮೆ ಕೇಳಿ-ಪರಿಣಾಮ ಗಂಭೀರವಾಗುತ್ತೆ'

ಈ ಸಮಾರಂಭಕ್ಕೆ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪಾಲ್ಗೊಂಡಿದ್ದರು. ಜೊತೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಸೀಲ್ದಾರ್‌ ಎಂ.ವಿ.ರೂಪಾ ಸೇರಿದಂತೆ ಕಂದಾಯ ಅಧಿಕಾರಿಗಳು ಹಾಜರಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಕಂದಾಯ ಅದಾಲತ್‌ ಎಂದು ನಮೂದಿಸಿರುವ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತಹಸೀಲ್ದಾರ್‌ ಎಂ.ವಿ.ರೂಪಾ ಅವರನ್ನು ಪ್ರಶ್ನಿಸಿದರು. ಕಂದಾಯ ಅದಾಲತ್‌ ಎಂದರೇನು? ಅದನ್ನು ಯಾವಾಗ ಮಾಡಿದ್ದೀರಿ, ಅದರಡಿ ಯಾವ ಫಲಾನುಭವಿಯಾದರೂ ಇಲ್ಲಿ ಇದ್ದಾರಾ? ಎಂದು ಸಾರ್ವಜನಿಕರೆದುರೇ ಅವರನ್ನು ತರಾಟೆ ತೆಗೆದುಕೊಂಡರು.

ಜನರನ್ನು ದಾರಿ ತಪ್ಪಿಸಬೇಡಿ:  ಈ ವೇಳೆ ತಹಸೀಲ್ದಾರ್‌ ಎಂ.ವಿ.ರೂಪಾ ಅವರು ಆಹ್ವಾನ ಪತ್ರಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಇದರಿಂದ ಕೋಪಗೊಂಡ ಶಾಸಕರು, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಬೇಡಿ, ನಿಮ್ಮ ಕಾರ್ಯವೈಖರಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡ ತಹಸೀಲ್ದಾರ್‌ ಎಂ.ವಿ.ರೂಪಾ, ನಾನು ನನ್ನ ವ್ಯಾಪ್ತಿಯೊಳಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ಜನರ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇನೆ. ನನ್ನ ಕಾರ್ಯವೈಖರಿ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ಮಾತನಾಡಬೇಡಿ ಎಂದರು.

ದಾಖಲೆಗಳ ಸಹಿತ ಬಹಿರಂಗ:  ಆಗ ಮತ್ತೆ ಶಾಸಕ ರವೀಂದ್ರ ಶ್ರೀಕಂಠಯ್ಯ, ನೀವು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂಬ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವು ಎಲ್ಲೆಲ್ಲಿ ಅವ್ಯವಹಾರ ಮಾಡಿದ್ದೀರಿ ಎನ್ನುವುದನ್ನು ದಾಖಲೆ ಸಹಿತ ಸಾರ್ವಜನಿಕರೆದುರು ಬಹಿರಂಗಪಡಿಸುತ್ತೇನೆ ಎಂದು ಬಹಿರಂಗವಾಗಿಯೇ ಸವಾಲು ಹಾಕಿದರು.

ಈ ಸಮಯದಲ್ಲಿ ಏನೇ ಸಮಸ್ಯೆ ಇದ್ದರೂ ಸಹ ಕೊಠಡಿಯಲ್ಲೇ ಕುಳಿತು ಬಗೆ ಹರಿಸಿಕೊಳ್ಳೋಣ. ಅದನ್ನು ಬಿಟ್ಟು ಹೀಗೆ ಸಾರ್ವಜನಿಕವಾಗಿ ಅಧಿಕಾರಿಗಳನ್ನು ನಿಂದಿಸುವುದು ಶೋಭೆ ತರುವುದಿಲ್ಲ ಎಂದು ಉಸ್ತುವಾರಿ ಸಚಿವರು ಶಾಸಕರನ್ನು ಸಮಾಧಾನಪಡಿಸಲು ಮುಂದಾದರು.

ವೈಯಕ್ತಿಕ ಸಮಸ್ಯೆ ಕೇಳುತ್ತಿಲ್ಲ:  ಈ ವೇಳೆ ಮತ್ತೆ ಕೆಂಡಾಮಂಡಲವಾದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೊಠಡಿಯಲ್ಲಿ ಕುಳಿತು ಮಾತನಾಡಲು ನನ್ನ ವೈಯಕ್ತಿಕ ಸಮಸ್ಯೆಯನ್ನು ಕೇಳುತ್ತಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿಯೇ ಕೇಳಬೇಕು, ಅದನ್ನೇ ನಾನು ಮಾಡುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ನಿಮಗೇನು ತಿಳಿದಿದೆ ಎಂದು ಸಚಿವರನ್ನೇ ಪ್ರಶ್ನಿಸಿದರು.

ಮೊದಲನೇ ಹಂತದ ಕೋವಿಡ್‌ ವೇಳೆ ಊಟ ಸರಬರಾಜು ಮಾಡಿದವರಿಗೆ ಹಣ ಕೊಟ್ಟಿಲ್ಲ, ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಆಗಲಿ, ಸೂಕ್ತ ಬೆಡ್‌ ವ್ಯವಸ್ಥೆಯಾಗಲಿ ಮಾಡಿಲ್ಲ ಎಂದು ತಮ್ಮ ಅಸಮದಾನ ಹೊರಹಾಕಿದರು. ಸಚಿವರಾದ ನೀವು ಸಾರ್ವಜನಿಕರ ಪರವಾಗಿರಬೇಕೇ ಹೊರತು, ಅಧಿಕಾರಿಗಳ ಪರವಾಗಿ ಇರಬಾರದು ಎಂದು ಸಚಿವರನ್ನು ಪ್ರಶ್ನಿಸಿದರು.

ನಾನೂ ಗುಂಪು ಕಟ್ಟಿಗಲಾಟೆ ಮಾಡಬಲ್ಲೆ:  ಸರ್ಕಾರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವಿರುದ್ಧ ಜನರನ್ನು ಗುಂಪು ಕಟ್ಟಿಕೊಂಡು ಅಧಿಕಾರಿಗಳ ವಿರುದ್ಧ ಹರಿಹಾಯುವುದು ಸರಿಯಲ್ಲ. ನನಗೂ ರಾಜಕೀಯ ಗೊತ್ತಿದೆ. ನಾನೂ ಸಹ ಗುಂಪು ಕಟ್ಟಿಕೊಂಡು ಗಲಟೆ ಮಾಡಬಲ್ಲೆ ಎಂದು ಸಚಿವ ನಾರಾಯಣಗೌಡರು ಖಾರವಾಗಿಯೇ ಹೇಳಿದರು.

ನಾನು ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಬಗ್ಗೆ ಅಪಾರ ಗೌರವವಿದೆ. ಆದರೆ, ನೀವು ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಆಕ್ಷೇಪವಿದೆ ಎಂದರು. ಬಳಿಕ ಶಾಸಕರನ್ನು ಸಮಾಧಾನಪಡಿಸಿದ ಸಚಿವರು, ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಹೊರನಡೆದರು.

click me!