
ಗಂಗಾಧರ ಹಿರೇಮಠ
ಆಲಮಟ್ಟಿ(ಮಾ.28): ರಾಜ್ಯದಲ್ಲಿ ಬರ ಉಂಟಾಗಿ ಜಲಮೂಲಗಳು ಬರಿದಾಗುತ್ತಿವೆ. ಹೀಗಾಗಿ ಜನರು ನೀರಿಗಾಗಿ ಹಾಹಾಕಾರ ಅನುಭವಿಸುತ್ತಿದ್ದಾರೆ. ಆದರೆ, ಆಲಮಟ್ಟಿ ಜಲಾಶಯದಲ್ಲಿ ವಿವಿಧ ಉದ್ದೇಶಕ್ಕಾಗಿ ನೀರು ಬಳಕೆ ಮಾಡಿದರೂ ಇಲ್ಲಿಯವರೆಗೂ ನೀರಿನ ಸಮಸ್ಯೆ ಉಂಟಾಗಿಲ್ಲ. ಜುಲೈನಲ್ಲಿ ವಾಡಿಕೆಯ ಮಳೆ ಬಾರದಿದ್ದರೂ ನೀರಿನ ಸಮಸ್ಯೆ ಉದ್ಭವಿಸುವ ಪರಿಸ್ಥಿತಿ ಇಲ್ಲವಾಗಿದೆ.
ಜಲಾಶಯದ ಹಿನ್ನೀರಿನಲ್ಲಿ ಪಂಪ್‌ಸೆಟ್‌ಗಳ ಮೂಲಕ ಕೃಷಿ ಮತ್ತಿತರ ಚಟುವಟಿಕೆಗಳ ಬಳಕೆಯೂ ಹೆಚ್ಚುತ್ತಿದೆ. ಸೂರ್ಯನ ಪ್ರಖರತೆ ಹೆಚ್ಚಿದ್ದು, ನೀರಿನ ಭಾಷ್ಪೀಭವನವೂ ಹೆಚ್ಚಿದೆ. ಇದರಿಂದಾಗಿ ಜಲಾಶಯದ ಮಟ್ಟ ಕಡಿಮೆಯಾಗುತ್ತಿದೆ. ಆದರೂ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ವಿಜಯಪುರ ಜಿಲ್ಲೆಯ 99 ಕೆರೆಗಳ ಭರ್ತಿಗೆ ಹರಿದ ನೀರು
ಜುಲೈನಲ್ಲಿಯೂ ಮಳೆಬಾರದಿದ್ದರೂ ನೀರಿನ ಸಮಸ್ಯೆಯಿಲ್ಲ:
ಪ್ರಸಕ್ತ ಋತುಮಾನದಲ್ಲಿ ಭೀಕರ ಬರಗಾಲ ನಾಡನ್ನು ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೃಷಿಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಮಾ.26ರಂದು ಆಲಮಟ್ಟಿ ಜಲಾಶಯದಲ್ಲಿ ಇನ್ನೂ 40.78 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ದಿನದಂದು ಜಲಾಶಯದಲ್ಲಿ ಬಹುತೇಕ ಇಷ್ಟೇ ಪ್ರಮಾಣದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
ಕೆರೆ ಭರ್ತಿಗೆ 2 ಟಿಎಂಸಿ ಅಡಿ ನೀರು:
ಮಾ.21ರವರೆಗೂ ಕೆರೆಗಳ ಭರ್ತಿಗಾಗಿ ನಾನಾ ಕಡೆ ಕಾಲುವೆಯ ಮೂಲಕ ನೀರು ಹರಿಸಲಾಗಿದೆ. ಭರ್ತಿಯಾಗದ ಕೆರೆಗಳಿಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆಯಿದೆ. ಆದರೆ, ಮೇನಲ್ಲಿ ಮತ್ತೊಮ್ಮೆ ಎಲ್ಲ ಕೆರೆಗಳ ಭರ್ತಿ ಮಾಡಲು 2 ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲಾಗಿದೆ. ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದರೆ ಕೆರೆಗಳ ಭರ್ತಿಗೆ ನೀರು ಹರಿಸಲಾಗುತ್ತದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ತಿಳಿಸಿದರು.
ಅನುಮತಿ ನೀಡಿದರೆ ನೀರು ಬಿಡುಗಡೆ:
ನಾರಾಯಣಪುರ ಜಲಾಶಯ ವ್ಯಾಪ್ತಿಯ ಇಂಡಿ ಶಾಖಾ ಕಾಲುವೆಯ ಮೂಲಕ ಕೆರೆಗಳ ಭರ್ತಿಗೆ ಮತ್ತಷ್ಟು ನೀರು ಹರಿಸಬೇಕೆಂಬ ಬೇಡಿಕೆ ಹಾಗೂ ಆ ಭಾಗದ ಜನಪ್ರತಿನಿಧಿಗಳ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಅವರ ಪಾಲಿನ ನೀರಿನ ಸಂಗ್ರಹದಲ್ಲಿ ಸರ್ಕಾರ ಅನುಮತಿ ನೀಡಿದರೆ 2 ಟಿಎಂಸಿ ಅಡಿಯಷ್ಟು ನೀರನ್ನು ಆ ಭಾಗಕ್ಕೆ ಹರಿಸಲು ಉದ್ದೇಶಿಸಲಾಗಿದೆ.
ಹಿಂದೆ ಡೆಡ್ ಸ್ಟೋರೇಜ್ ನೀರು ಬಳಕೆ:
ಮೊದಲೆಲ್ಲಾ ನೀರಿನ ಕೊರತೆ ಎದುರಾದಾಗ ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಿರುವ ಸುಮಾರು 17 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ನೀರಿನಲ್ಲಿಯೂ ಕೆಲ ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗಿದೆ. 2016-17ರಲ್ಲಿ ಜಲಾಶಯದ ಮಟ್ಟ 505.13 ಮೀ ಎತ್ತರದವರೆಗೆ ಕುಸಿದಿತ್ತು. ಆಗ ಡೆಡ್ ಸ್ಟೋರೇಜ್‌ನಲ್ಲಿನ 5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗಿತ್ತು.
99 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರು: ಸರ್ಕಾರಕ್ಕೆ ಸೆಡ್ಡು ಹೊಡೆದು ಸುಪ್ರೀಂ ಕೋರ್ಟ್ ಮೊರೆ ಹೋದ ರೈತ ಸಂಘ
17 ಟಿಎಂಸಿ ವಿವಿಧ ಉದ್ದೇಶಕ್ಕೆ ನೀರು
ಸದ್ಯ ಜಲಾಶಯದಲ್ಲಿ 40.78 ಟಿಎಂಸಿ ಅಡಿ ನೀರು ಸಂಗ್ರಹದಲ್ಲಿ, 23.166 ಟಿಎಂಸಿ ಅಡಿ ನೀರು ಬಳಕೆಯೋಗ್ಯ ನೀರಿದೆ. ಈ ಪೈಕಿ 6 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಕಾಲಕಾಲಕ್ಕೆ ಹರಿಸಲು ಇಲ್ಲಿ ಸಂಗ್ರಹಿಸಲಾಗಿದೆ. ನಂತರ ಉಳಿಯುವ 17 ಟಿಎಂಸಿ ಅಡಿ ನೀರಲ್ಲಿ ಭಾಷ್ಪಿಭವನ, ಕೈಗಾರಿಕೆ, ಎನ್ ಟಿಪಿಸಿ, ಕೆರೆ ಭರ್ತಿ, ಜುಲೈವರೆಗೂ ಕುಡಿಯುವ ನೀರು ಮತ್ತೀತರ ಉದ್ದೇಶಗಳಿಗೆ ಮೀಸಲಿರಿಸಲಾಗಿದೆ.
ನೀರು ಎತ್ತುವ ಪರವಾನಗಿ ಸ್ಥಗಿತ
ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿಕೊಂಡು ನೀರಾವರಿ ಕೃಷಿಗೆ ಬಳಕೆ ಮಾಡುವುದನ್ನು ನಿಷೇಧಿಸಿದ್ದು, ಪಂಪ್‌ಸೆಟ್‌ಗೆ ನೀಡಿದ ಅನುಮತಿ ರದ್ದುಗೊಳಿಸಿದ್ದಾರೆ ಎಂದು ಅಣೆಕಟ್ಟು ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಆದೇಶಿಸಿದ್ದಾರೆ.
ಕಳೆದ ಕೆಲ ವರ್ಷಗಳ ನೀರಿನ ಸಂಗ್ರಹಕ್ಕೆ ಹೋಲಿಸಿದರೆ, ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಕುಡಿಯುವ ನೀರಿಗಾಗಿ ಸಾಕಷ್ಟು ನೀರು ಜಲಾಶಯದಲ್ಲಿದೆ. ಮೇ ತಿಂಗಳಲ್ಲಿ ಪ್ರಾದೇಶಿಕ ಆಯುಕ್ತರ ಅನುಮತಿ ಪಡೆದು ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಲಮಟ್ಟಿ ಅಣೆಕಟ್ಟು ವಲಯ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ತಿಳಿಸಿದ್ದಾರೆ.