ಕಳೆದ 20 ವರ್ಷಗಳಲ್ಲಿ ಒಮ್ಮೆಯೂ ಬತ್ತದ ನಮ್ಮ ಜಮೀನಿನಲ್ಲಿನ ಬಾವಿ ಈ ಬಾರಿ ಸಂಪೂರ್ಣವಾಗಿ ಒಣಗಿಹೋಗಿದೆ. ಕೊಳವೆಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆ ಆಗಿದ್ದು, ತೋಟದಲ್ಲಿರುವ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಕುಡಿಸಲು ನೀರು ಸಿಗದ ಸ್ಥಿತಿಗೆ ಬಂದಿದೆ.
ಶಶಿಕಾಂತ ಮೆಂಡೆಗಾರ
ವಿಜಯಪುರ(ಮಾ.28): ಭವಿಷ್ಯದ ದೃಷ್ಟಿಯಿಂದ ನೀರನ್ನು ಹಿತ-ಮಿತವಾಗಿ ಬಳಸಿ ಸಂರಕ್ಷಣೆ ಮಾಡಿ, ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ಮಾಡಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನರು ಮಾತ್ರ ವಿನಾಕಾರಣ ನೀರು ಹಾಳು ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಇದೀಗ ಭೂಮಿಯ ಆಳದಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡು ವಿಜಯಪುರ ಜಿಲ್ಲಾದ್ಯಂತ ಕುಡಿಯಲು ನೀರು ಸಿಗದ ಸ್ಥಿತಿ ಎದುರಾಗಿದೆ.
ಹೌದು, ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ನೆಲ ಮಟ್ಟದಿಂದ ಕೆಳಗೆ 10.20 ಮೀಟರ್ ಅಂತರಾಳದಲ್ಲಿ ಜಲದ ಮೂಲವಿತ್ತು. ಆದರೆ ಈ ವರ್ಷ ಫೆಬ್ರುವರಿ ಅಂತ್ಯಕ್ಕೆ 16.57 ಮೀಟರ್ ಗೆ ಕುಸಿತವಾಗಿದ್ದು, ಒಂದೇ ವರ್ಷದಲ್ಲಿ 6.38 ಮೀಟರ್ ಭೂಮಿಯ ಆಳದಲ್ಲಿ ನೀರು ಕುಸಿತವಾಗಿದೆ. ದಿನೇದಿನೇ ಭೂಮಿಯ ಆಳಕ್ಕೆ ನೀರು ಇಳಿಯುತ್ತಿರುವುದನ್ನು ಗಮನಿಸಿದರೆ ಇನ್ನೆರಡು ತಿಂಗಳಿನಲ್ಲಿ ಗ್ರೌಂಡ್ ವಾಟರ್ ಖಾಲಿಯಾದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಅಂತರ್ಜಲದ ಮೂಲಗಳು.
ವಿಜಯಪುರ: ಭೀಕರ ಬರಕ್ಕೆ ಬಾಯ್ದೆರೆದ ಜಲಮೂಲಗಳು..!
ಮನೆಗೊಂದು ಬೋರ್‌ವೆಲ್:
ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಮಿತಿ ಮೀರಿ ಮನೆಗೊಂದರಂತೆ ಬೋರ್‌ವೆಲ್‌ಗಳನ್ನು ಕೊರೆಸಲಾಗುತ್ತಿದೆ. ಬಾವಿಗಳಲ್ಲಿ ಹಾಗೂ ಇತರೇ ಜಲಮೂಲಗಳಲ್ಲಿ ನೀರು ಸಿಗದ ಹಿನ್ನೆಲೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು 500ರಿಂದ 1 ಸಾವಿರ ಅಡಿಗೂ ಆಳದಲ್ಲಿ ಕೊಳವೆಬಾವಿ ಕೊರೆಸುತ್ತಿದ್ದಾರೆ. ಸಾರ್ವಜನಿಕ ಜಲಮೂಲಗಳ ಸುತ್ತಲೂ 500 ಮೀಟರ್ ಅಂತರದ ಒಳಗೆ ಖಾಸಗಿ ಕೊಳವೆಬಾವಿ ಕೊರೆಯುವಂತಿಲ್ಲ ಎಂಬ ನಿಯಮ ಇದ್ದರೂ ಇಲ್ಲಿ ಅದು ಪಾಲನೆ ಆಗುತ್ತಿಲ್ಲ.
ಜಿಲ್ಲಾ ಅಂತರ್ಜಲ ಸ್ಥಿತಿಗತಿ:
2022 ಡಿಸೆಂಬರ್‌ನಲ್ಲಿ 8.21 ಮೀಟರ್ ಇದ್ದ ಗ್ರೌಂಡ್ ವಾಟರ್ ಲೆವೆಲ್, 2023 ಫೆಬ್ರುವರಿ ತಿಂಗಳಿನಲ್ಲಿ 10.20 ಮೀಟರ್‌ಗೆ ಇಳಿದಿತ್ತು. ಇದೀಗ 2024 ಫೆಬ್ರುವರಿಗೆ 16.57 ಮೀಟರ್ ಗೆ ಕುಸಿದಿದ್ದು, ಕಳೆದ ಒಂದೇ ವರ್ಷದಲ್ಲಿ 6.38 ಮೀಟರ್ ಆಳಕ್ಕೆ ಅಂತರ್ಜಲ ಮಟ್ಟ ಇಳಿದಿದೆ. ಕಳೆದ ಮೂರು ವರ್ಷಗಳ ಅಂಕಿಸಂಖ್ಯೆ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ನೆಲ ಮಟ್ಟದಿಂದ ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಅಂತರ್ಜಲ ನಿರ್ದೇಶನಾಯಲದ ಅಧ್ಯಯನ
ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಒಟ್ಟು 53 ಅಧ್ಯಯನ ಕೊಳವೆ ಬಾವಿಗಳಿದ್ದು, ಅವುಗಳಲ್ಲಿ ಅಧ್ಯಯನ ನಡೆಸಿದಾಗ ಕಳೆದ ವರ್ಷಕ್ಕಿಂತ ಈ ವರ್ಷ ಅಂತರ್ಜಲ ಮಟ್ಟ ಕಡಿಮೆಯಾಗಿರುವುದು ಗೊತ್ತಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೋಲಿಕೆ ಮಾಡಿ ನೋಡಿದಾಗ ಈ ವರ್ಷ ಅತೀ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಆಳದಲ್ಲಿ ನೀರಿನ ಪ್ರಮಾಣ ಕುಸಿದಿರುವುದು ಕಂಡುಬಂದಿದೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನ ಮಹೇಶ ಬಿರಜನವರ ತಂಡ ಅಧ್ಯಯನ ಮಾಡಿ ಗ್ರೌಂಡ್ ವಾಟರ್ ನ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಿದೆ.
ಅಂತರ್ಜಲ ವಿಜ್ಞಾನಿಗಳಿಂದ ಸಲಹೆ
ಮನೆಯ ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸುವುದು. ಮಳೆನೀರು ಕೊಯ್ಲು ಮಾಡಿ, ಮಳೆ ನೀರು ಸಂರಕ್ಷಣೆ ಮಾಡುವುದು. ಹೊಲ, ಗದ್ದೆ, ತೋಟ, ಗಾರ್ಡನ್, ಖಾಲಿ ಜಾಗ, ಅರಣ್ಯ ಪ್ರದೇಶಗಳಲ್ಲಿ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮುಂದೆ ಗಿಡ ನೆಡುವುದು. ಅವಕಾಶಗಳು ಇದ್ದಲ್ಲಿ ಚೆಕ್ ಡ್ಯಾಂ, ನಾಲಾಬಂಡ ನಿರ್ಮಾಣ ಮಾಡುವುದು. ಹಳ್ಳ-ಕೊಳ್ಳಗಳು ಹಾಗೂ ಕೆರೆಗಳಲ್ಲಿನ ಹೂಳೆತ್ತಿ, ನೀರು ತುಂಬಿಸುವುದು ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಅಂತರ್ಜಲ ವಿಜ್ಞಾನಿಗಳು ಹೇಳುತ್ತಾರೆ.
ಬೆಂಗಳೂರಿನಲ್ಲಿ ಬಿಜೆಪಿಗರು ಹೇಳುವಷ್ಟು ನೀರಿನ ಹಾಹಾಕಾರ ಇಲ್ಲ: ಡಿ.ಕೆ.ಶಿವಕುಮಾರ್
ಕಳೆದ 20 ವರ್ಷಗಳಲ್ಲಿ ಒಮ್ಮೆಯೂ ಬತ್ತದ ನಮ್ಮ ಜಮೀನಿನಲ್ಲಿನ ಬಾವಿ ಈ ಬಾರಿ ಸಂಪೂರ್ಣವಾಗಿ ಒಣಗಿಹೋಗಿದೆ. ಕೊಳವೆಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆ ಆಗಿದ್ದು, ತೋಟದಲ್ಲಿರುವ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಕುಡಿಸಲು ನೀರು ಸಿಗದ ಸ್ಥಿತಿಗೆ ಬಂದಿದ್ದೇವೆ. ಮಳೆಗಾಲದವರೆಗೂ ತೋಟವನ್ನು, ಸಾಕುಪ್ರಾಣಿಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದೇ ಚಿಂತೆಯಾಗಿದೆ ಎಂದು ಯುವರೈತ ಶ್ರೀಕಾಂತ ಎಸ್ ಎಂ ತಿಳಿಸಿದ್ದಾರೆ.
ಅಂತರ್ಜಲ ಯಾವಾಗಲೂ ಮಳೆಯ ಮೇಲೆ ಅವಲಂಬಿತವಾಗಿದ್ದು, ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ. ಇದರ ಜೊತೆಗೆ ನೀರಾವರಿ ಪ್ರದೇಶ ಕೂಡ ಹೆಚ್ಚಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಸಿಕ್ಕಸಿಕ್ಕಲ್ಲಿ ಕೊಳವೆಬಾವಿಗಳನ್ನು ಕೊರೆಯದೆ, ಈಗಾಗಲೇ ಇರುವ ಜಲ ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಅಂತರ್ಜಲ ಹೆಚ್ಚಿಸಲು ಪ್ರತಿಯೊಬ್ಬರು ಸಹಕರಿಸಬೇಕಿದೆ ಎಂದು ವಿಜಯಪುರ ಜಿಲ್ಲಾ ಅಂತರ್ಜಲ ಕಚೇರಿ ಹಿರಿಯ ಭೂ ವಿಜ್ಞಾನಿ ಮಹೇಶ ಬಿರಜನವರ ಹೇಳಿದ್ದಾರೆ.