ಸಿಲಿಕಾನ್ ಸಿಟಿಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಕಾಟ ಯಾವತ್ತೂ ಕಡಿಮೆಯಾಗಿಲ್ಲ. ಅಕ್ರಮ ಕಟ್ಟಡಗಳ ನಿರ್ಮಾಣ ಎಲ್ಲೆಲ್ಲೂ ನಡೆಯುತ್ತಿದೆ. ಇದೀಗ ಭೂಗಳ್ಳತನ, ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಹೆಮ್ಮಿಗೆಪುರ ವಾರ್ಡ್ ನಿವಾಸಿಗಳು ಸಮರ ಸಾರಿದ್ದು, ಹೋರಾಟಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ.
ಬೆಂಗಳೂರು (ಮಾ.28): ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಹೆಚ್ಚುತ್ತಿದ್ದು, ಅಕ್ರಮ ಕಟ್ಟಡಗಳ ನಿರ್ಮಾಣದಿಂದ ಫುಟ್‌ಪಾತ್ ಹಾಗೂ ಚರಂಡಿ, ಕೆರೆಯನ್ನೂ ಬಿಡದಂತೆ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದರಿಂದ ಪರಿಸರದ ಸೌಂದರ್ಯವೇ ಹಾಳಾಗುತ್ತಿದ್ದು ಗಿಡ-ಮರಗಳಿಗೂ ಕುತ್ತು ತರುತ್ತಿದೆ. ಈ ಭೂಗಳ್ಳತನ, ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಹೆಮ್ಮಿಗೆಪುರ ವಾರ್ಡ್ ನಿವಾಸಿಗಳು ಸಮರ ಸಾರಿದ್ದು, ಭೂ ದರೋಡೆಕೋರರು ನಮ್ಮ ಬಡಾವಣೆಯೊಳಗೆ ಪ್ರವೇಶಿಸದಂತೆ ಸಾರ್ವಜನಿಕರು ಎಚ್ಚರಿಸಿದ್ದಾರೆ. ಹೆಮ್ಮಿಗೆಪುರ ವಾರ್ಡ್‌ನ ಸುಮಾರು 400 ನಿವಾಸಿಗಳು ಈ ಸಂಬಂಧ ಸಭೆ ಸೇರಿ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಭೂಮಿಯ ಒತ್ತುವರಿ ವಿರುದ್ಧ ಸಮರ ಸಾರಿದ್ದು, ಬಹುತೇಕ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಭೂ ಅತಿಕ್ರಮಿಸಿದವರಿಗೆ ಬಿಬಿಎಂಪಿ ನೋಟಿಸ್ ನೀಡಿದ್ದು, ಕಟ್ಟಡ ನಿರ್ಮಾಣವೇ ಸ್ಥಗಿತಗೊಂಡಿದೆ.
ಈ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೆಮ್ಮಿಗೆಪುರದಲ್ಲಿ ಜಾಥಾ ನಡೆಸಲಾಯಿತು. ಜಾಥಾಕ್ಕೂ ಮುನ್ನ ಏರಿಯಾ ಪ್ರವೇಶದ್ವಾರದ ಬಳಿ ‘ಭೂಗಳ್ಳರಿಗೆ ಪ್ರವೇಶವಿಲ್ಲ’ ಎಂಬ ನಾಮಫಲಕವನ್ನು ನಿವಾಸಿಗಳು ಪ್ರದರ್ಶಿದರು. ಸರ್ಕಾರಿ ಭೂಮಿ ಅತಿಕ್ರಿಮಿಸಿ, ಆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸುವುದರಿಂದ ಆಗುವ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ಈ ಬಗ್ಗೆ ಹೆಮ್ಮಿಗೆಪುರ ವಾರ್ಡಿನಲ್ಲಿ ಬರುವ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. .
ಅಕಸ್ಮಾತ್ ಭೂಕಬಳಿಕೆ ಅಥವಾ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಗಮನಕ್ಕೆ ಬಂದರೆ ಸಂಬಂಧಿಸಿದ ಸಂಸ್ಥೆಗಳು ಕೈಗೊಳ್ಳಬೇಕಾದ ಮುಂದಿನ ಕ್ರಮದ ಬಗ್ಗೆಯೂ ನಿರ್ಧಾರ ತೆಗಡೆದುಕೊಂಡಿದ್ದು, ಬಿಬಿಎಂಪಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಲಾಗುತ್ತಿದೆ. ಈ ಮೂಲಕ ರಾಜಕಾರಣಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಾ ಎಚ್ಚರಿಸುವ ಕಾರ್ಯಕ್ಕೆ ಇಲ್ಲಿಯ ನಿವಾಸಿಗಳು ಮುಂದಾಗಿದ್ದು, ಭೂಗಳ್ಳತನ ಮತ್ತು ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ನಿರಂತರ ಹೋರಾಟಕ್ಕೆ ನಿವಾಸಿಗಳು ನಿರ್ಧರಿಸಿದ್ದಾರೆ.
ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗವನ್ನು ಬಳಸಿಕೊಂಡು ಸಮರ್ಥವಾಗಿ ಹೋರಾಡಲು ಸಾರ್ವಜನಿಕರು ನಿರ್ಧರಿಸಿದ್ದು, ಯುಎಂ.ಕಾವಲ್ ಹೆಮ್ಮಿಗೆಪುರ ಹಾಗೂ ಗಾರ್ಡನ್ ಸಿಟಿ ಬೆಂಗಳೂರಲ್ಲಿ ನಡೆಯುತ್ತಿರುವ ಅಕ್ರಮ ಭೂಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವ ಮೂಲಕ ಮುಂದಿನ ಪೀಳಿಗೆಗೆ ಪಾರ್ಕ್, ಪಾದಚಾರಿ ಮಾರ್ಗ, ಸುಸಜ್ಜಿತ ನಗರವನ್ನು ಉಳಿಸುವುದು ಹೋರಾಟದ ಉದ್ದೇಶ ಎಂದು ಸ್ಥಳೀಯ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ.
ಇನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿಯೂ #NotInMyOoru ಎಂಬ ಹ್ಯಾಶ್‌ಟ್ಯಾಗ್‌ನಡಿ ತಮ್ಮ ಅಭಿಪ್ರಾಯಗಳನ್ನು ನಿವಾಸಿಗಳು ಹಂಚಿಕೊಳ್ಳುತ್ತಿದ್ದು, ಬಿಬಿಎಂಪಿ ಆಯುಕ್ತರನ್ನು ಟ್ಯಾಗ್ ಮಾಡಲಾಗುತ್ತಿದೆ. ಯು.ಎಂ.ಕಾವಲ್‌ನಲ್ಲಿ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿರುವುದು ನಮ್ಮ ಸಮುದಾಯಕ್ಕೆ ಕಂಟಕವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ನೆರೆಹೊರೆಯ ನಮ್ಮ ಹಕ್ಕಿಗಾಗಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಕ್ರಮಕ್ಕೆ ಒತ್ತಾಯಿಸಲು ನಮ್ಮೊಂದಿಗೆ ಸೇರಿ. #NotInMyOoru ಎಂದು ಟ್ವೀಟರ್ ಅಭಿಯಾನ ನಡೆಸಲು ನಿವಾಸಿಗಳು ಕಟಿಬದ್ಧರಾಗಿದ್ದಾರೆ.
ಹೇಗೆ ನಡೆಯುತ್ತಿದೆ ಟ್ವಿಟರ್ ಅಭಿಯಾನ?
- ಬೆಂಗಳೂರು ಉತ್ತಮ ಅರ್ಹತೆ ಹೊಂದಿದೆ. U.M.ಕಾವಲ್‌ನಲ್ಲಿ ಅಕ್ರಮ ಕಟ್ಟಡಗಳ ಅನಿಯಂತ್ರಿತ ಬೆಳವಣಿಗೆ ನಮ್ಮ ಇಡೀ ನಗರಕ್ಕೆ ಅಪಾಯಕಾರಿ ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ನಿಮ್ಮ ಧ್ವನಿಯನ್ನು ಹೆಚ್ಚಿಸಿ. #NotInMyOoru
- U.M.ಕಾವಲ್‌ನ ಅತಿಕ್ರಮಣದ ವಿರುದ್ಧದ ಹೋರಾಟವು ನಗರಾಭಿವೃದ್ಧಿಯಲ್ಲಿ ಸಮಗ್ರತೆ ಮತ್ತು ಕಾನೂನುಬದ್ಧತೆಗಾಗಿ ಪ್ರತಿಯೊಬ್ಬ ಬೆಂಗಳೂರಿಗನ ಹೋರಾಟವಿದು. ನಮ್ಮೊಂದಿಗೆ ನಿಂತುಕೊಳ್ಳಿ. #NotInMyOoru
-ನಮ್ಮ ಬೀದಿಗಳು, ನಮ್ಮ ಸುರಕ್ಷತೆ, ರಾಜಿ. ಯು.ಎಂ.ಕಾವಲ್‌ನಲ್ಲಿನ ಅಕ್ರಮ ನಿರ್ಮಾಣಗಳು ನಮ್ಮ ಸಮುದಾಯದ ರಚನೆಗೆ ಧಕ್ಕೆ ತರುತ್ತವೆ. ಅಧಿಕಾರಿಗಳು ಕಾರ್ಯೋನ್ಮುಖರಾಗುವ ಸಮಯ ಬಂದಿದೆ. #NotInMyOoru
- ಅಕ್ರಮ ನಿರ್ಮಾಣದಿಂದ ನಮ್ಮ ಚರಂಡಿ ಮುಚ್ಚುವುದರಿಂದ ಪ್ರವಾಹದ ಅಪಾಯಗಳು ಹೆಚ್ಚುತ್ತವೆ. ದುರಂತ ಸಂಭವಿಸುವವರೆಗೆ ನಾವು ಕಾಯಲು ಸಾಧ್ಯವಿಲ್ಲ. ತಕ್ಷಣದ ಮಧ್ಯಸ್ಥಿಕೆಗೆ ಒತ್ತಾಯಿಸಿ. #NotInMyOoru
- U.M.ಕಾವಲ್‌ನ ಸೌಂದರ್ಯವು ಭೂ ದರೋಡೆಕೋರರಿಂದ ಅಪಾಯದಲ್ಲಿದೆ. ಇದು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ಬೆಂಗಳೂರಿಗ ನಷ್ಟ. ತಡವಾಗುವ ಮೊದಲು ಮಾತನಾಡಿ. #NotInMyOoru
ಎಂದೆಲ್ಲಾ ಟ್ಟೀಟ್ ಮಾಡಲಾಗುತ್ತಿದ್ದು, ಇದಕ್ಕೆ ನೆರೆಹೊರೆಯ ನಿವಾಸಿಗಳು ಸಹಕರಿಸಿದರೆ ಮುಂದಿನ ಪೀಳಿಗೆಗೆ ಸ್ವಚ್ಛ, ಸುರಕ್ಷಿತ, ಹಸಿರು ಬೆಂಗಳೂರನ್ನು ಉಳಿಸಬಹುದೆಂದು ಸ್ಥಳೀಯ ಬಡಾವಣೆಗಳ ಕ್ಷೇಮಾಭಿವೃದ್ಧ ಸಂಘ ಕರೆ ನೀಡಿದೆ.