ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಕೂರುವೆ: ಮಾಜಿ ಪ್ರಧಾನಿ ಗೌಡರಿಂದ ಸರ್ಕಾರಕ್ಕೆ ಎಚ್ಚರಿಕೆ

Published : Jul 14, 2026, 06:02 PM IST
HD Deve Gowda

ಸಾರಾಂಶ

ಬಿಡದಿ ಉಪನಗರ ಯೋಜನೆಯ ಭೂಸ್ವಾಧೀನವನ್ನು ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಬಳಿ ಧರಣಿ ಕೂರುವುದಾಗಿ ಎಚ್ಚರಿಸಿರುವ ಅವರು, ಇದು ₹20,000 ಕೋಟಿಯ ಯೋಜನೆಯಾಗಿದ್ದು, ಬಡ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ಭಾಗದ ರೈತರು ನಡೆಸುತ್ತಿರುವ ಹೋರಾಟಕ್ಕೆ ಈಗ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ನೇರವಾಗಿ ಧುಮುಕಿದ್ದಾರೆ. ಬಿಡದಿ ಯೋಜನೆಯನ್ನು ತಕ್ಷಣವೇ ಕೈಬಿಡದಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ತಾವೇ ಖುದ್ದಾಗಿ ಧರಣಿ ಕೂರುವುದಾಗಿ ದೇವೇಗೌಡರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ವಿವರಗಳನ್ನು ಬಹಿರಂಗಪಡಿಸಿದರು. ಬಿಡದಿ ಭಾಗದ ಬಡ ರೈತರ ಪರವಾಗಿ ಜೆಡಿಎಸ್ ಸಂಪೂರ್ಣವಾಗಿ ನಿಲ್ಲಲಿದ್ದು, ಸರ್ಕಾರದ ಮುಂದಿನ ನಿರ್ಧಾರಕ್ಕಾಗಿ 4 ರಿಂದ 5 ದಿನಗಳ ಗಡುವು ನೀಡುವುದಾಗಿ ಪ್ರಕಟಿಸಿದರು.

ಪತ್ರ ಬರೆದು 20 ದಿನವಾದ್ರೂ ಹಿಂಬರಹ ನೀಡುವ ಸೌಜನ್ಯ ಸಿಎಂಗೆ ಇಲ್ಲ!

ಸುದ್ದಿಗೋಷ್ಠಿಯಲ್ಲಿ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, "ಕಳೆದ ಜೂನ್ 25 ರಂದೇ ನಾನು ಬಿಡದಿ ಉಪನಗರ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಪತ್ರ ಬರೆದು 20 ದಿನ ಕಳೆದರೂ ಸಿಎಂ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕನಿಷ್ಠ ಪಕ್ಷ ಪತ್ರ ತಲುಪಿದೆ ಎಂಬ ಹಿಂಬರಹ (Endorsement) ನೀಡುವ ಸೌಜನ್ಯವೂ ಸಿಎಂಗೆ ಇಲ್ಲದಂತಾಗಿದೆ. ನನಗೀಗ ಯಾವುದೇ ಅಧಿಕಾರ ಇಲ್ಲದಿರಬಹುದು, ಆದರೆ ನಾನು ಒಬ್ಬ ಮಾಜಿ ಪ್ರಧಾನಿ ಎನ್ನುವ ಕನಿಷ್ಠ ಪ್ರಜ್ಞೆಯೂ ಸರ್ಕಾರಕ್ಕೆ ಇದ್ದಂತಿಲ್ಲ. ಮುಖ್ಯಮಂತ್ರಿಗಳೂ ಕೂಡ ರೈತನ ಮಗನೇ ಆಗಿದ್ದು, ರೈತರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ನಂಬಿಕೆ ನನಗಿನ್ನೂ ಇದೆ ಎಂದರು.

₹20,000 ಕೋಟಿ ಯೋಜನೆಯ ಅಸಲಿ ರಹಸ್ಯವೇನು?

ಬಿಡದಿ ಟೌನ್‌ಶಿಪ್ ಯೋಜನೆಯ ಹಿಂದೆ ಬೃಹತ್ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ ದೇವೇಗೌಡರು, ಕಾಂಗ್ರೆಸ್ ಹೈಕಮಾಂಡ್ ಒಲಿಸಿಕೊಳ್ಳಲು ಏನೇನು ಆಶ್ವಾಸನೆಗಳನ್ನು ಕೊಟ್ಟು ಬಂದಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆ ವ್ಯವಸ್ಥೆಯನ್ನು ಪೂರ್ಣಗೊಳಿಸಲು ಮತ್ತು ಹೈಕಮಾಂಡ್‌ಗೆ ನೀಡಿರುವ ಭರವಸೆ ಈಡೇರಿಸಲು ಈ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬರೋಬ್ಬರಿ ₹20,000 ಕೋಟಿ ಮೊತ್ತದ ಬೃಹತ್ ಯೋಜನೆ. ಇದನ್ನು ಬಹಳ ದಿನ ಬಚ್ಚಿಡಲು ಸಾಧ್ಯವಿಲ್ಲ. ಹೈಕಮಾಂಡ್‌ಗೆ ಕೊಟ್ಟ ಆಶ್ವಾಸನೆ ಪೂರೈಸಲು ಬೇರೆ ಮಾರ್ಗಗಳು ಸಾಕಷ್ಟಿವೆ, ಅದನ್ನು ಬಳಸಿಕೊಳ್ಳಿ. ಆದರೆ ಬಡ ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಡಿ.ಕೆ. ಶಿವಕುಮಾರ್ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಹತ್ತಿರ ಜಮೀನು ಸರ್ವೆ ಮಾಡಲು ಜನರನ್ನು ಕಳಿಸಿರಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಬಂದ ಕೇವಲ ಒಂದು ತಿಂಗಳೊಳಗೆ ಇದೆಲ್ಲಾ ಯಾಕೆ ಶುರುವಾಗಿದೆ? ಇದರ ಹಿಂದಿನ ಉದ್ದೇಶವೇನು ಎಂಬುದು ಜಗಜ್ಜಾಹೀರಾಗಿದೆ ಎಂದರು.

40 ಸಾವಿರ ಸೈಟುಗಳು ಖಾಲಿ ಇರುವಾಗ ಬಿಡದಿ ಮೇಲೇಕೆ ಕಣ್ಣು?

ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ನಿವೇಶನಗಳು ಹಂಚಿಕೆಯಾಗದೆ ಉಳಿದಿರುವಾಗ ಹೊಸದಾಗಿ ರೈತರ ಜಮೀನು ಕಿತ್ತುಕೊಳ್ಳುವ ಅಗತ್ಯವೇನಿದೆ ಎಂದು ದೇವೇಗೌಡರು ಪ್ರಶ್ನಿಸಿದರು. ಸರ್ಕಾರದ ಹಿರಿಯ ಸಚಿವರೇ ಹೇಳಿರುವ ಪ್ರಕಾರ, ಬಿಡಿಎ ಅಭಿವೃದ್ಧಿಪಡಿಸಿರುವ ಲೇಔಟ್‌ಗಳಲ್ಲಿ 20 ಸಾವಿರಕ್ಕೂ ಹೆಚ್ಚು ನಿವೇಶನಗಳು ಖಾಲಿ ಇವೆ. ನಾಡಪ್ರಭು ಕೆಂಪೇಗೌಡ ಲೇಔಟ್ ಹಾಗೂ ಡಾ. ಶಿವರಾಮ್ ಕಾರಂತ ಲೇಔಟ್ ಸೇರಿದಂತೆ ಹೊಸ ಬಡಾವಣೆಗಳನ್ನೆಲ್ಲಾ ಸೇರಿಸಿದರೆ ಒಟ್ಟು 40 ಸಾವಿರಕ್ಕೂ ಹೆಚ್ಚು ನಿವೇಶನಗಳು ಹಂಚಿಕೆಯಾಗದೆ ಖಾಲಿ ಬಿದ್ದಿವೆ. ಪರಿಸ್ಥಿತಿ ಹೀಗಿದ್ದರೂ ಬಿಡದಿ ಟೌನ್‌ಶಿಪ್ ಮೇಲೆ ಇವರಿಗೆ ಯಾಕೆ ಇಷ್ಟೊಂದು ಕಣ್ಣು? ಎಂದು ಖಾರವಾಗಿ ಪ್ರಶ್ನಿಸಿದರು.

ಸಣ್ಣ ಹಿಡುವಳಿದಾರರ ಬದುಕು ಬೀದಿಗೆ ಸುಳ್ಳು ಹೇಳ್ತಿದೆ ಸರ್ಕಾರ!

ಸರ್ಕಾರ ಜಮೀನು ಸ್ವಾಧೀನದ ವಿಚಾರದಲ್ಲಿ ಸತ್ಯಾಂಶವನ್ನು ಮುಚ್ಚಿಟ್ಟು ಮಾತನಾಡುತ್ತಿದೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು:

2 ಸಾವಿರಕ್ಕೂ ಹೆಚ್ಚು ಸಣ್ಣ ರೈತರು: ಈ ಯೋಜನೆಯಡಿ ಸುಮಾರು 2,800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಟಿದೆ. ಈ ಭಾಗದಲ್ಲಿ ಕೇವಲ 1 ರಿಂದ 5 ಗುಂಟೆ ಜಮೀನು ಹೊಂದಿರುವ 2,000ಕ್ಕೂ ಹೆಚ್ಚು ಬಡ ಸಣ್ಣ ಹಿಡುವಳಿದಾರರಿದ್ದಾರೆ. ಆ ಭಾಗದಲ್ಲಿ ಪ್ರತಿದಿನ 50 ಸಾವಿರ ಲೀಟರ್ ಹಾಲು ಕರೆಯಲಾಗುತ್ತದೆ. ರೈತರು ಇದನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತೀರಿಯೇ? ಎಂದು ಪ್ರಶ್ನಿಸಿದರು.

17 ಎಕರೆಯ ಸುಳ್ಳು ಲೆಕ್ಕ: "ಕೇವಲ ಶೇ. 40 ರಷ್ಟು ಜನರು ಮಾತ್ರ ದುಡ್ಡು ಕೊಡಿ, ನಮ್ಮ ತಕರಾರಿಲ್ಲ ಎನ್ನುತ್ತಿದ್ದಾರೆ. ಅಂತಹವರ ಒಟ್ಟು ಜಮೀನು ಇರುವುದು ಕೇವಲ 17 ಎಕರೆ ಮಾತ್ರ! ಅದರಲ್ಲಿ ಉಳಿದದ್ದು ಸರ್ಕಾರದ ಗೋಮಾಳ. ಆದರೆ ಸರ್ಕಾರ ಮಾತ್ರ ಈಗಾಗಲೇ 500 ಎಕರೆ ಸ್ವಾದೀನ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದೆ. ಉಳಿದ ಬಡ ಹೆಣ್ಣುಮಕ್ಕಳು ಮತ್ತು ರೈತರು ತಮ್ಮ ಜೀವನಾಧಾರವಾದ ಭೂಮಿಯನ್ನು ಉಳಿಸಿಕೊಳ್ಳಲು ಅಧಿಕಾರಿಗಳನ್ನು ತಡೆದು ಹೋರಾಟ ಮಾಡುತ್ತಿದ್ದಾರೆ.

ಎಚ್‌ಡಿಕೆ ಅವಧಿಯಲ್ಲೇ ಯೋಜನೆ ಕೈಬಿಡಲಾಗಿತ್ತು: "ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಾಯಕರೇ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆ ಸಂದರ್ಭದಲ್ಲಿ ರೈತರ ಹಿತದೃಷ್ಟಿಯಿಂದ ಕುಮಾರಸ್ವಾಮಿಯವರು ನೋಟಿಫಿಕೇಶನ್ ಮಾಡುವುದನ್ನು ಕೈಬಿಟ್ಟಿದ್ದರು. ಆದರೆ ಈಗಿನ ಸಿಎಂ ತಾವೇನೋ ಕುಮಾರಸ್ವಾಮಿ ಮಾಡಿದ್ದನ್ನು ಮುಂದುವರಿಸುತ್ತಿರುವುದಾಗಿ ಮಾತನಾಡುತ್ತಿದ್ದಾರೆ.

ರೈತರ ಮೇಲಿನ ಎಫ್‌ಐಆರ್ (FIR) ವಾಪಸ್ ಪಡೆಯಿರಿ

ಬಿಡದಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಕಲ್ಲು ತೂರಾಟ ನಡೆದು, ಇನ್ಸ್‌ಪೆಕ್ಟರ್‌ಗೆ ಸಣ್ಣ ಗಾಯವಾಗಿರುವ ಘಟನೆಗೆ ಸಂಬಂಧಿಸಿದಂತೆ ರೈತರ ಮೇಲೆ ದಾಖಲಾಗಿರುವ ಎಫ್‌ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ದೇವೇಗೌಡರು ಒತ್ತಾಯಿಸಿದರು."ನಿನ್ನೆಯ ಘಟನೆಯಿಂದಾಗಿ ಕುಮಾರಸ್ವಾಮಿ ಅವರಿಗೆ ತೀವ್ರ ನೋವಾಗಿದೆ. ಅವರು ರೈತರಿಗೆ ಹೋರಾಟ ಮುಂದುವರಿಸಲು ಧೈರ್ಯ ತುಂಬಿದ್ದು, ನಾವೂ ಜೊತೆಗಿರುತ್ತೇವೆ ಎಂದಿದ್ದಾರೆ. ರೆವೆನ್ಯೂ ಅಧಿಕಾರಿಗಳ ಕಂಪ್ಲೇಂಟ್ ಆಧರಿಸಿ ರೈತರ ಮೇಲೆ ಎಫ್‌ಐಆರ್ ಹಾಕಲಾಗಿದೆ. ಆದರೆ ಎಸ್ಪಿ ಅವರು ಡಿಸಿ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಇನ್ಸ್‌ಪೆಕ್ಟರ್‌ಗೆ ಸಣ್ಣ ಗಾಯವಾಗಿದೆಯೇ ಹೊರತು ಆಸ್ಪತ್ರೆಯಲ್ಲಿ ಮಲಗುವಂತ ಪೆಟ್ಟು ಯಾರಿಗೂ ಬಿದ್ದಿಲ್ಲ. ರೈತರ ನೋವನ್ನ ಅರ್ಥ ಮಾಡ್ಕೋಬೇಕು, ಅವರು ಜೀವನ ಮಾಡಬೇಕಲ್ಲ. ರೈತರ ಆಕ್ರೋಶದ ಪ್ರಚೋದನೆಗೆ ಕಾರಣ ಯಾರು ಎಂಬುದನ್ನು ಸರ್ಕಾರ ಯೋಚಿಸಬೇಕು. ಸದ್ಯಕ್ಕೆ ಸರ್ವೆ ಕಾರ್ಯವನ್ನು ನಿಲ್ಲಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ವಿಪಕ್ಷಗಳ ಒಗ್ಗಟ್ಟು: 5 ದಿನಗಳ ಗಡುವು

ಬಿಡದಿ ರೈತರ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಸಹ ಬೆಂಬಲ ಸೂಚಿಸಿದ್ದು, ಯೋಜನೆ ಕೈಬಿಡುವಂತೆ ಹೇಳಿದ್ದಾರೆ. ಅಲ್ಲದೆ, ಈ ಹೋರಾಟಕ್ಕೆ ಬಿಜೆಪಿ ನಾಯಕರು ಹಾಗೂ ಪ್ರಮುಖವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿ, ರೈತರಿಗೆ ಬೆಂಬಲ ನೀಡಿದ್ದಕ್ಕಾಗಿ ದೇವೇಗೌಡರು ಧನ್ಯವಾದ ಸಲ್ಲಿಸಿದರು.

"ನಾನು ಹೋರಾಟದ ಜಾಗಕ್ಕೆ ಹೋದರೆ ತಕ್ಷಣವೇ ದೇವೇಗೌಡರು ಬಂದು ರೈತರನ್ನು ಪ್ರಚೋದಿಸಿದರು ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ಕುಮಾರಸ್ವಾಮಿ ರಾಮನಗರದಲ್ಲಿ ಬಂದು ನೆಲೆಸಿ 30 ವರ್ಷಗಳಾಗಿವೆ. ನಮಗೆ ಆ ಭಾಗದ ರೈತರ ನೋವು ಗೊತ್ತು. ಈಗ ಸರ್ಕಾರಕ್ಕೆ 4 ರಿಂದ 5 ದಿನಗಳ ಕಾಲಾವಕಾಶ ನೀಡುತ್ತೇನೆ. ಸರ್ಕಾರದ ನಡವಳಿಕೆ ಮತ್ತು ನಿರ್ಧಾರವನ್ನು ಕಾದು ನೋಡಿ, ಮುಂದಿನ ಹೋರಾಟದ ಕಾರ್ಯರೂಪವನ್ನು ಸಿದ್ಧಪಡಿಸುತ್ತೇನೆ. ಬಿಡದಿ ಯೋಜನೆ ಕೈಬಿಡದಿದ್ದರೆ ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದು ಶತಸಿದ್ಧ ಎಂದು ಮಾಜಿ ಪ್ರಧಾನಿ ಹೆಚ್‌ ಡಿಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಿರಿಯ ನಾಯಕ ದೇವೇಗೌಡರ ಈ ಧರಣಿ ಎಚ್ಚರಿಕೆಯು ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಾವೇರಿರುವ ಬಿಡದಿ ಭೂಸ್ವಾಧೀನದ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.

PREV
Read more Articles on
click me!

Recommended Stories

ವಿಶ್ವದ ಗಮನ ಸೆಳೆದ ಕರ್ನಾಟಕದ ಆಲೂಬೋಂಡಾ: 'ಮಾಸ್ಟರ್‌ಷೆಫ್'​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ
ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!