₹120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ: ಸ್ಮಶಾನದ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ11 ಮಂದಿ ಅರೆಸ್ಟ್!

Published : Jul 14, 2026, 05:02 PM IST
Adichunchanagiri Math Land Scam

ಸಾರಾಂಶ

ಆದಿಚುಂಚನಗಿರಿ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಸ್ಮಶಾನದಲ್ಲಿ ಸಮಾಧಿ ಹುಡುಕಿ ನಕಲಿ ವಂಶವೃಕ್ಷ ತಯಾರಿಸಿ, ಸರ್ಕಾರಿ ಅಧಿಕಾರಿಗಳ ನೆರವಿನಿಂದ ಈ ವಂಚನೆ ಎಸಗಲಾಗಿದ್ದು, 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ರಾಜಧಾನಿಯ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಅತ್ಯಂತ ರೋಚಕ ವಂಚನೆ ಪ್ರಕರಣವೊಂದನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸಲು ನಕಲಿ ವಂಶವೃಕ್ಷ ಸೃಷ್ಟಿಸಿ, ಸ್ಮಶಾನದಲ್ಲಿ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ ಬೃಹತ್ ಜಾಲವೊಂದನ್ನು ಪೊಲೀಸರು ಮಟ್ಟಹಾಕಿದ್ದಾರೆ. ಈ ವಂಚನೆ ಜಾಲದಲ್ಲಿದ್ದ 6 ಜನ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಠಕ್ಕೆ ಸೇರಿದ ಬರೋಬ್ಬರಿ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡು ಕಬಳಿಸಿದ್ದರು.

ಮಠದ ಆಸ್ತಿ ಮತ್ತು ವಂಚನೆಯ ಹಿನ್ನೆಲೆ

ಸುಮಾರು 30 ವರ್ಷಗಳ ಹಿಂದೆ ಭಕ್ತಾದಿಗಳು ಆದಿಚುಂಚನಗಿರಿ ಮಠಕ್ಕೆ ಕಾಣಿಕೆ ರೂಪದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೆ ನಂಬರ್ 43 ರಲ್ಲಿ ಒಟ್ಟು 45 ಎಕರೆ ಜಮೀನನ್ನು ನೀಡಿದ್ದರು. ಮಠದ ಹೆಸರಿನಲ್ಲಿದ್ದ ಈ 45 ಎಕರೆಯ ಪೈಕಿ 6 ಎಕರೆ ಜಮೀನನ್ನು ಗುರಿಯಾಗಿಸಿಕೊಂಡ ಖದೀಮರ ದಂಡು, ಖಾಸಗಿ ಬ್ರೋಕರ್‌ಗಳು ಮತ್ತು ಪ್ರಭಾವಿ ಸರ್ಕಾರಿ ಅಧಿಕಾರಿಗಳೊಂದಿಗೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿತ್ತು.

ಸ್ಮಶಾನದಲ್ಲಿ ಸಮಾಧಿ ಹುಡುಕಿ ಸ್ಕೆಚ್ ಹಾಕಿದ ಮಾಸ್ಟರ್ ಮೈಂಡ್!

ಕೆಂಗೇರಿ ಪೊಲೀಸರು ಈ ಪ್ರಕರಣದ ಸುರುಳಿ ಬಿಡಿಸಿದ ಹಾದಿ ಅತ್ಯಂತ ರೋಚಕವಾಗಿದೆ. ಪೊಲೀಸರ ತನಿಖೆಯಲ್ಲಿ ಬಯಲಾಗಿರುವ ದೊಡ್ಡ ಕಥೆಯೇ ಇದೆ. ನೆಲಮಂಗಲ ಮೂಲದ ನರೇಶ್ ಗೌಡ ಈ ಇಡೀ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್. ಮಠದ ಜಾಗವನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಈತ, ತನ್ನ ಪ್ಲಾನ್ ಅನ್ನು ಬ್ರೋಕರ್ ಆರೋಗ್ಯಸ್ವಾಮಿ ಎಂಬಾತನಿಗೆ ತನ್ನ ಯೋಜನೆಯನ್ನು ವಿವರಿಸಿದ್ದ. ಮಠದ ಜಮೀನಿನ ಮೂಲ ಮಾಲೀಕರ ಹೆಸರಿಗೆ ಹೊಂದಾಣಿಕೆಯಾಗುವ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಇವರಿಬ್ಬರಿಗೆ ಸವಾಲಾಗಿತ್ತು. ಅದಕ್ಕಾಗಿ ಇವರು ನೇರವಾಗಿ ಸ್ಮಶಾನಕ್ಕೆ ಲಗ್ಗೆ ಇಟ್ಟಿದ್ದರು! ಸ್ಮಶಾನದಲ್ಲಿ ಜಮೀನಿನ ಮೂಲ ಮಾಲೀಕನ ಹೆಸರನ್ನು ಹೊಂದಿದ್ದ ಸಮಾಧಿಯೊಂದನ್ನು ಪತ್ತೆಹಚ್ಚಿ, ಅವರ ಕುಟುಂಬಸ್ಥರ ವಿವರ ಕಲೆಹಾಕಿದ್ದರು.

ಇದೇ ವೇಳೆ ಬೇಗೂರು ಪೊಲೀಸ್ ಠಾಣೆಯ ರೌಡಿಶೀಟರ್ ಫ್ರಾನ್ಸಿಸ್ ಎಂಬಾತ ಇವರಿಗೆ ಸಿಕ್ಕಿದ್ದ. ಈತನ ತಂದೆಯ ಹೆಸರು ಹಾಗೂ ಮಠದ ಜಮೀನಿನ ಮೂಲ ಮಾಲೀಕನ ಹೆಸರು ಮತ್ತು ವಯಸ್ಸು ಕಾಕತಾಳೀಯವೆಂಬತೆ ಕರೆಕ್ಟ್ ಮ್ಯಾಚ್ ಆಗ್ತಿತ್ತು. ಇದನ್ನು ಬಳಸಿಕೊಂಡ ನರೇಶ್ ಗೌಡ ಮತ್ತು ತಂಡ, ರೌಡಿಶೀಟರ್ ಫ್ರಾನ್ಸಿಸ್ ಹಾಗೂ ಆತನ ತಂಗಿ ಜೋಸ್ವಾನ್ ಇಬ್ಬರೇ ಮೂಲ ಮಾಲೀಕನ ವಾರಸುದಾರರು ಎಂದು ಬಿಂಬಿಸುವ ನಕಲಿ ವಂಶವೃಕ್ಷ (Family Tree) ಮತ್ತು ಸಾಲಾವಳಿ ಪತ್ರಗಳನ್ನು ಸೃಷ್ಟಿಸಿದ್ದರು.

ಕೈಜೋಡಿಸಿದ ಸರ್ಕಾರಿ ಅಧಿಕಾರಿಗಳು: ನಕಲಿ ದಾರಿಗೆ ಸಿಕ್ಕಿತು ಸರ್ಕಾರಿ ಸೀಲು!

ಈ ನಕಲಿ ದಾಖಲೆಗಳಿಗೆ ಸರ್ಕಾರಿ ಕಚೇರಿಯಲ್ಲಿ ಮುದ್ರೆ ಒತ್ತಿಸಲು ಲಂಚದ ಹಣದ ಹೊಳೆಯೇ ಹರಿದಿತ್ತು. ಹಂತ ಹಂತವಾಗಿ ಇಲಾಖೆಯ ಅಧಿಕಾರಿಗಳು ಹಣ ಪಡೆದು ವಂಚನೆಗೆ ಸಾಥ್ ನೀಡಿದ್ದರು. ಮೊದಲ ಹಂತವಾಗಿ ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್‌ಪೆಕ್ಟರ್ ಕಿರಣ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ದೀಪಕ್ ಭಾರಿ ಪ್ರಮಾಣದ ಲಂಚ ಪಡೆದು ನಕಲಿ ವಂಶವೃಕ್ಷಕ್ಕೆ ಅನುಮೋದನೆ ನೀಡಿದ್ದರು. ಎರಡನೇ ಹಂತವಾಗಿ ಈ ನಕಲಿ ದಾಖಲೆಗಳನ್ನು ಆಧರಿಸಿ ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ಅವರು ನಕಲಿ ದಾಖಲಾತಿ ಎಂದು ಗೊತ್ತಿದ್ದರೂ ಕೂಡ ಪೌತಿ ಖಾತೆ (Mutation) ಮಾಡಿಕೊಟ್ಟಿದ್ದರು. ಖಾತೆ ಮಾಡಿಸಿಕೊಂಡ ಬೆನ್ನಲ್ಲೇ ಆರೋಪಿಗಳು ಕೋರ್ಟ್‌ನಿಂದ ಆದೇಶಗಳನ್ನು ಪಡೆದು, ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಬೇರೊಬ್ಬ ಮೂರನೇ ವ್ಯಕ್ತಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಕೂಡ ಮಾಡಿಬಿಟ್ಟಿದ್ದರು!

ಸಿಕ್ಕಿಬಿದ್ದ ಆರೋಪಿಗಳು ಯಾರು?

ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಈ ಪೈಕಿ 11 ಜನರನ್ನು ಕೆಂಗೇರಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಗ್ಯಸ್ವಾಮಿ (ಬ್ರೋಕರ್), ಫ್ರಾನ್ಸಿಸ್ (ರೌಡಿಶೀಟರ್), ಜೋಸ್ವಾನ್ ಹಾಗೂ ಶ್ರೀನಿವಾಸ ನರೇಂದ್ರ ಬಂಧಿತ ಖಾಸಗಿ ವ್ಯಕ್ತಿಗಳಾಗಿದ್ದಾರೆ. ಶಿವಪ್ರಸಾದ್ (ಬೇಗೂರು ವಿಎ), ಕಿರಣ್ (ಬೇಗೂರು ಆರ್‌ಐ), ದೀಪಕ್ (ಬೇಗೂರು ಡೆಪ್ಯೂಟಿ ತಹಶೀಲ್ದಾರ್), ಸತೀಶ್ ಕುಮಾರ್ (ಕೆಂಗೇರಿ ವಿಎ), ಅರುಣ್ ಕುಮಾರ್ (ಕೆಂಗೇರಿ ಆರ್‌ಐ) ಹಾಗೂ ಕೆಂಗೇರಿಯ ಡೆಪ್ಯೂಟಿ ತಹಶೀಲ್ದಾರ್ ಬಂಧಿತ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಪ್ರಕರಣದ ಮುಖ್ಯ ರೂವಾರಿ ನೆಲಮಂಗಲದ ನರೇಶ್ ಗೌಡ ಸದ್ಯ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಸಕ್ರಿಯವಾಗಿದೆ ದಂಧೆಕೋರರ ಜಾಲ: ಡಿಸಿಪಿ ಅನಿತಾ ಹದ್ದಣ್ಣನವರ್

ಈ ಹೈಪ್ರೊಫೈಲ್ ಪ್ರಕರಣದ ಯಶಸ್ವಿ ಪತ್ತೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಮಠದ 45 ಎಕರೆ ಜಮೀನಿನ ಪೈಕಿ 6 ಎಕರೆಯನ್ನು ನಕಲಿ ದಾಖಲೆಗಳು, ನಕಲಿ ವಂಶವೃಕ್ಷ ಹಾಗೂ ನಕಲಿ ಸಾಲಾವಳಿ ಪತ್ರಗಳ ಮೂಲಕ ಕಬಳಿಸಲು ಸಂಚು ರೂಪಿಸಲಾಗಿತ್ತು. ತನಿಖೆ ವೇಳೆ ಕಂದಾಯ ಇಲಾಖೆಯ ರೆಕಾರ್ಡ್ ರೂಮ್ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿ ಹಾಗೂ ಉಪ ತಹಸೀಲ್ದಾರ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಶಾಮೀಲಾತಿ ಬೆಳಕಿಗೆ ಬಂದಿದೆ. ಸದ್ಯ 11 ಜನರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಬೆಂಗಳೂರಿನ ಸುತ್ತಮುತ್ತ ಇಂತಹದ್ದೇ ವ್ಯವಸ್ಥಿತ ಭೂ ಕಬಳಿಕೆ ಜಾಲ ಸಕ್ರಿಯವಾಗಿರುವ ಶಂಕೆ ಇದ್ದು, ಇಂತಹ ಭೂ ಮಾಫಿಯಾಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲಾಗುವುದು." ಎಂದರು. ಕೋಟಿ ಬೆಲೆಬಾಳುವ ಪವಿತ್ರ ಮಠದ ಆಸ್ತಿಯನ್ನೇ ನುಂಗಲು ಹೋದ ಭೂಗಳ್ಳರು ಕೊನೆಗೂ ಪೊಲೀಸರ ತನಿಖಾ ಜಾಲಕ್ಕೆ ಬಿದ್ದು ಕಂಬಿ ಎಣಿಸುತ್ತಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಫಿಫಾ ವಿಶ್ವಕಪ್ ವೇಳೆ ಮುಂಜಾನೆ 3:30ರವರೆಗೆ ಹೋಟೆಲ್‌ಗಳು ಓಪನ್!
ಗಂಗಾವತಿಯಲ್ಲಿ ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಎಚ್.ಆರ್. ಶ್ರೀನಾಥ್ ಬಿಗ್ ಡಿಮ್ಯಾಂಡ್