
ಬೆಂಗಳೂರು (ಜು.14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರೀಡಾ ಪ್ರೇಮಿಗಳಿಗೆ, ಅದರಲ್ಲೂ ವಿಶೇಷವಾಗಿ ಫುಟ್ಬಾಲ್ ಅಭಿಮಾನಿಗಳಿಗೆ ಪೊಲೀಸ್ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. 2026ರ ಫಿಫಾ (FIFA) ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ವ್ಯವಹಾರದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳಲ್ಲಿ ಜಂಟಿಯಾಗಿ ಆಯೋಜಿಸಲಾಗಿರುವ 2026ರ ಫಿಫಾ ವಿಶ್ವಕಪ್ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ಅಥವಾ ಮುಂಜಾನೆ ನಡೆಯಲಿವೆ. ಈ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಆಹಾರ ಸೇವೆಗಳ ಅವಧಿಯನ್ನು ವಿಸ್ತರಿಸುವಂತೆ 'ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ' (NRAI) ಮನವಿ ಮಾಡಿತ್ತು.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮುಂಜಾನೆ 1:00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಆದರೆ ಈ ವಿಶೇಷ ದಿನಗಳಂದು ಮುಂಜಾನೆ 3:30 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 31 ಹಾಗೂ 2(15) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ನೀಡಲಾಗಿದೆ. ಪಂದ್ಯಾವಳಿಯ ವೇಳೆ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ನಾಗರಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳು ತಡರಾತ್ರಿ ಹಸಿವಾದಾಗ ಆಹಾರಕ್ಕಾಗಿ ಪರದಾಡುವುದನ್ನು ತಪ್ಪಿಸಲು ಈ ನಿರ್ಧಾರ ಸಹಕಾರಿಯಾಗಲಿದೆ.
ಈ ಆದೇಶವು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಅನ್ವಯಿಸಲಿದೆ. ಈ ಮೂಲಕ ಕ್ರೀಡಾ ಹಬ್ಬದ ಸಂಭ್ರಮವನ್ನು ಸವಿಯಲು ಸಜ್ಜಾಗಿರುವ ಬೆಂಗಳೂರಿಗರಿಗೆ ಪೊಲೀಸ್ ಇಲಾಖೆ ಸಾಥ್ ನೀಡಿದೆ.