ಉಪ ಚುನಾವಣಾ ಅಖಾಡಕ್ಕೆ ನಿಖಿಲ್ : ಈ ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತನಾ..?

By Suvarna NewsFirst Published Aug 16, 2020, 12:18 PM IST
Highlights

ನಿಖಿಲ್ ಕುಮಾರಸ್ವಾಮಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿ ಹೆಚ್ಚಾಗುತ್ತಿದ್ದು, ಈ ಬಗ್ಗ ಸ್ವತಃ ನಿಖಿಲ್ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೇನು..?

ಬೆಂಗಳೂರು (ಆ.16) :  ‘ಅನಾರೋಗ್ಯದಿಂದಾಗಿ ಇತ್ತೀಚೆಗೆ ಮೃತಪಟ್ಟಜೆಡಿಎಸ್‌ ಶಾಸಕ ಸತ್ಯನಾರಾಯಣ ಸ್ಪರ್ಧಿಸಿದ್ದ ಕ್ಷೇತ್ರದಿಂದ ಉಪ ಚುನಾವಣೆಗೆ ಅಖಾಡಕ್ಕಿಳಿಯುವ ಬಗ್ಗೆ ವದಂತಿ ಹಬ್ಬುತ್ತಿದೆ. ಆದರೆ, ನಾನು ಶಿರಾ ಕ್ಷೇತ್ರದ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ನಾನು ಯಾವುದೇ ಕಾರಣಕ್ಕೂ ಅಲ್ಲಿ ಸ್ಪರ್ಧಿಸಲ್ಲ’ ಎಂದು ಜೆಡಿಎಸ್‌ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವದಂತಿಗಳನ್ನು ಹಬ್ಬಿಸಿರುವುದನ್ನು ಕಟುವಾಗಿ ಟೀಕಿಸಿರುವ ಅವರು, ಇಂತಹ ಕಪೋಲಕಲ್ಪಿತ ಸುದ್ದಿ, ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಇದರಿಂದ ಕುತ್ಸಿತ ಮನಸುಗಳಿಗೆ ಆಗುವ ಲಾಭ ಏನೆಂಬುದು ನನಗೆ ತಿಳಿಯದಾಗಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಬಾ ಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟಿದ್ದೇನೆ ಎಂಬಂತೆ ವದಂತಿಗಳನ್ನು ಪುಂಖಾನುಪುಂಖವಾಗಿ ಹರಿಯಬಿಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ...

‘ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರು ಅಕಾಲಿಕ ನಿಧನರಾಗಿದ್ದರಿಂದ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. ಹಾಗಂತ ಅಕಾಲಿಕವಾಗಿ ಖಾಲಿ ಬಿದ್ದ ಕ್ಷೇತ್ರಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲವೇ ಅಲ್ಲ. 2018ರ ವಿಧಾನಸಭಾ ಚುನಾವಣೆ ವೇಳೆ ಮೂರು ದಿನಗಳ ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜ. ಆದರೆ, ಕಣಕ್ಕಿಳಿಯುವುದು ಸತ್ಯಕ್ಕೆ ದೂರವಾದುದು’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಿಎಸ್ ವೈಗೆ ಡಿ.ಕೆ.ಶಿವಕುಮಾರ್ ಪತ್ರ...

‘ಸತ್ಯನಾರಾಯಣ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾತೀತ. ಯಾವುದೇ ಆಮಿಷೆಗಳಿಗೆ ಬಲಿಯಾಗದೆ ಕೊನೆ ಉಸಿರಿರುವವರೆಗೂ ನಂಬಿದ ಪಕ್ಷವನ್ನು ಹೆಸರಿಗೆ ತಕ್ಕಂತೆ ಸತ್ಯವಾಗಿಸಿ ಕೊಂಡಿದ್ದರು. ಉಪ ಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಮತ್ತು ಪಕ್ಷದ ಅಭ್ಯರ್ಥಿ ಪರ ಟೊಂಕಟ್ಟಿನಿಂತು ಪ್ರಚಾರ ಮಾಡಲಿದ್ದೇನೆ. ಇದರಲ್ಲಿ ಯಾರಿಗೂ ಎಳ್ಳಷ್ಟುಸಂಶಯ ಬೇಡ. ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ಯಾವುದೇ ಕಾರಣಕ್ಕೂ ನಾನು ಶಿರಾ ಕ್ಷೇತ್ರದ ಅಭ್ಯರ್ಥಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

click me!