ಮಾಜಿ ಸಿಎಂ ಬಂಗಾರಪ್ಪ ಮನೇಲಿ ನಾನು ಪೇಯ್ಡ್ ಸರ್ವೆಂಟ್ ಆಗಿರ್ಲಿಲ್ಲ: ಹರತಾಳು ಹಾಲಪ್ಪ

Published : Nov 19, 2026, 08:25 AM IST
Haratalu Halappa

ಸಾರಾಂಶ

ಹರತಾಳು ಹಾಲಪ್ಪ ಅವರು ಎಸ್. ಬಂಗಾರಪ್ಪ ಅವರ ಮನೆಯಲ್ಲಿ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಧು ಬಂಗಾರಪ್ಪ ಅವರ ಆರೋಪವನ್ನು ಅವರು ನಿರಾಕರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ನಾವು ನಾಯಕನಾಗಿದ್ದೇನೆ. ಕಾಲೇಜಿಗೆ ಹೋಗುತ್ತಿರುವಾಗಲೇ ಕೂಲಿ ಕೆಲಸ ಮಾಡಿ 3 ರುಪಾಯಿ ಪಡೆಯುತ್ತಿದ್ದೆ.

ಶಿವಮೊಗ್ಗ: ವಿದ್ಯಾರ್ಥಿ ಜೀವನದಲ್ಲೇ ನಾವು ನಾಯಕನಾಗಿದ್ದೇನೆ. ಕಾಲೇಜಿಗೆ ಹೋಗುತ್ತಿರುವಾಗಲೇ ಕೂಲಿ ಕೆಲಸ ಮಾಡಿ 3 ರುಪಾಯಿ ಪಡೆಯುತ್ತಿದ್ದೆ. ಆದರೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮನೆಯಲ್ಲಿ ನಾನು ಎಂದಿಗೂ ಪೇಯ್ಡ್ ಸರ್ವೆಂಟ್ ಆಗಿ ಕೆಲಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲೆಯ ಅಭಿವೃದ್ಧಿ, ವಿಮಾನ ನಿಲ್ದಾಣ ಹಾಗೂ ರಾಜಕೀಯ ವಿಚಾರಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿ, ಬಂಗಾರಪ್ಪ ಅವರ ಮನೆಯಲ್ಲಿ ಹಾಲಪ್ಪ ನೆಲ ಒರೆಸುವ ಕೆಲಸ ಮಾಡುತ್ತಿದ್ದ ಎಂದು ಹೇಳಿರುವುದು ಅವಿವೇಕದ ಮತ್ತು ತಿಳಿವಳಿಕೆ ಇಲ್ಲದ ಹೇಳಿಕೆ ಎಂದು ಆಕ್ಷೇಪಿಸಿದರು.

ಮನೆಯಲ್ಲಿ ಕೆಲಸಗಾರನಾಗಿ ಎಂದಿಗೂ ಇರಲಿಲ್ಲ

ಕಾಲೇಜು ದಿನಗಳಿಂದಲೇ ಬಂಗಾರಪ್ಪ ಅವರ ಅಭಿಮಾನಿಯಾಗಿದ್ದೆ. 1985ರಲ್ಲಿ ಪದವಿ ಪೂರ್ಣಗೊಳಿಸುವ ವೇಳೆಗೆ ಕಾಲೇಜು ವಿದ್ಯಾರ್ಥಿ ನಾಯಕನಾಗಿದ್ದೆ. 1987ರಲ್ಲಿ ಸ್ವಂತವಾಗಿ ಮಾರುತಿ ಕಾರು ಖರೀದಿಸಿ ಬಂಗಾರಪ್ಪ ಅವರ ಮನೆಗೆ ಹೋಗುತ್ತಿದ್ದೆ. ರಾಜಕೀಯ ನಾಯಕನ ಮೇಲಿನ ಅಭಿಮಾನದಿಂದ ಅವರೊಂದಿಗೆ ಒಡನಾಟ ಹೊಂದಿದ್ದೆ. ಅವರ ಮನೆಯಲ್ಲಿ ಕೆಲಸಗಾರನಾಗಿ ಎಂದಿಗೂ ಇರಲಿಲ್ಲ. ಬಂಗಾರಪ್ಪ ಅವರಿಂದ ನನಗೆ ಯಾವುದೇ ಹಣ ಅಥವಾ ವೈಯಕ್ತಿಕ ಅನುಕೂಲ ಪಡೆದಿಲ್ಲ. ಬದಲಿಗೆ, ಅನೇಕ ಸಂದರ್ಭಗಳಲ್ಲಿ ಇತರರಿಗೆ ಹಣ ಕೊಡಿಸಲು ಮತ್ತು ಪಡೆದ ಹಣವನ್ನು ವಾಪಸ್ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದರು.

ನಾವು ಮುಳುಗಡೆ ಸಂತ್ರಸ್ತ ಕುಟುಂಬದಿಂದ ಬಂದವರು. ಆರಂಭದಲ್ಲಿ ಉಪ್ಪಳ್ಳಿಯ ಗಣೇಶರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿದ್ದೇನೆ. ಕಾಲೇಜಿಗೆ ಹೋಗುವಾಗಲೂ ಕೆಲಸ ಮಾಡುತ್ತಿದ್ದೆ. ಅಂದು ದಿನಕ್ಕೆ 3 ರು. ಕೂಲಿ ಪಡೆಯುತ್ತಿದ್ದೆ. ಆದರೆ, ಬಂಗಾರಪ್ಪ ಅವರ ಮನೆಯಲ್ಲಿ ಪೇಯ್ಡ್ ಸರ್ವೆಂಟ್ ಆಗಿದ್ದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.

ಬಂಗಾರಪ್ಪ ಅವರ ರಾಜಕೀಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಅವರ ನ್ಯಾಯಾಲಯದ ಪ್ರಕರಣಗಳ ಸಂದರ್ಭದಲ್ಲಿಯೂ ಹಲವು ಬಾರಿ ಅವರೊಂದಿಗೆ ತೆರಳಿದ್ದೇನೆ. ಪ್ರಕರಣಗಳಿಗಾಗಿ ವರ್ಷಗಟ್ಟಲೆ ಓಡಾಡಿದ್ದೇನೆ. ಆದರೆ, ಸಚಿವ ಮಧು ಬಂಗಾರಪ್ಪ ಅವರು ಎಷ್ಟು ಬಾರಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂಬುದನ್ನು ತಿಳಿಸಲಿ. ನನ್ನ ವಿರುದ್ಧದ ಪ್ರಕರಣವೊಂದರಲ್ಲಿ ದೂರುದಾರರಿಗೆ ಬಂಗಾರಪ್ಪ ಮನೆಯಿಂದ 192 ಬಾರಿ ಕರೆ ಮಾಡಿರುವ ದೂರವಾಣಿ ದಾಖಲೆಗಳಿವೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಪ್ರಶಾಂತ್ ಕುಗ್ವೆ, ದರ್ಶನ್,ಪೆರಿಮಳ್, ರವಿಕುಮಾರ್, ಕೇಶವ್, ಅರುಣ್ ಕುಗ್ವೆ, ಚಂದ್ರಶೇಖರ್, ಶರತ್ ಕಲ್ಯಾಣಿ, ದಿನೇಶ್ ಆಚಾರ್ಯ ಇದ್ದರು.

ಸಂಸ್ಕಾರವಿಲ್ಲದ ಮಧು ಬಂಗಾರಪ್ಪ: ಹಾಲಪ್ಪ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸಂಸ್ಕಾರವಂತ ರಾಜಕಾರಣಿಯಾಗಿದ್ದರು. ಅದೇ ರೀತಿ, ಯಡಿಯೂರಪ್ಪ ಅವರ ಮಕ್ಕಳು ಸಂಘ ಪರಿವಾರದ ಸಂಪರ್ಕದಿಂದ ಸಂಸ್ಕಾರ ಬೆಳೆಸಿಕೊಂಡಿದ್ದಾರೆ. ಆದರೆ, ಸಚಿವ ಮಧು ಬಂಗಾರಪ್ಪ ಅವರಿಗೆ ಇವೆರಡೂ ಇಲ್ಲ ಎಂದು ಹಾಲಪ್ಪ ಟೀಕಿಸಿದರು.

ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಧು ಬಂಗಾರಪ್ಪ ಹೆಚ್ಚಾಗಿ ಮನೆಯಲ್ಲಿಯೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

PREV
Read more Articles on
click me!

Recommended Stories

ನಾನು ಆ ಸ್ಥಾನ ಕೇಳಿಯೂ ಇಲ್ಲ, ಲಾಭಿಯೂ ಮಾಡ್ತಿಲ್ಲ: ಮಾಜಿ ಸಚಿವ ಮುರುಗೇಶ್ ನಿರಾಣಿ!
Davanagere: ಕುಡಿಯುವ ನೀರಿನ ಸಮಸ್ಯೆ: ಕೊಳವೆಬಾವಿ ಬಾಡಿಗೆ ಪಡೆದ ಸಚಿವ KS ಬಸವಂತಪ್ಪ