ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ

Published : Nov 19, 2026, 07:35 AM IST
Flyover

ಸಾರಾಂಶ

ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಕಡಿಮೆ ಮಾಡಲು ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜೊತೆಗೆ ನಗರದ 111 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಜಕ್ಕೂರು ಮೇಲ್ಸೇತುವೆಯನ್ನು ಉದ್ಘಾಟಿಸಲಾಗಿದೆ.

ಬೆಂಗಳೂರು: ಉತ್ತರ ಭಾಗದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಗೆದ್ದಲಹಳ್ಳಿಯಿಂದ ವಿಮಾನ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗೆದ್ದಲಹಳ್ಳಿ ಸಮೀಪ ಮಳೆ ನೀರು ಕಾಲುವೆ ಉದ್ಘಾಟಿಸಿ ಮಾತನಾಡಿ, ಹೆಬ್ಬಾಳ ಮೇಲ್ಸೇತುವೆ ಮಾದರಿ ಉತ್ತರ ಭಾಗದ ಜನರು ವಿಮಾನನಿಲ್ದಾಣಕ್ಕೆ ತೆರಳಲು ಮೇಲ್ಸೇತುವೆ ನಿರ್ಮಾಣದ ಅಗತ್ಯವಿದೆ. ಸುಮಾರು 20 ಕಿ.ಮೀ. ವ್ಯಾಪ್ತಿ ಈ ಸಮಸ್ಯೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳಲು ಈಗಿರುವ ಮಾರ್ಗವನ್ನೇ ಎಲ್ಲರೂ ಅವಲಂಬಿಸಬೇಕಾಗಿದೆ. ಹೀಗಾಗಿ ಇಲ್ಲಿ ಹೊಸ ಮೇಲ್ಸೇತುವೆನಿರ್ಮಿಸುವ ಅಗತ್ಯವಿದೆ ಎಂದು ತೀರ್ಮಾನಿಸಿದ್ದೇವೆ ಎಂದರು.

ನಾಗರಿಕರ ಬದುಕು ಹಸನಾಗಿಸಲು ಬದ್ಧ!

ನಗರದ ನಾಗರಿಕರ ಬದುಕು ಹಸನಾಗಿಸಲು ಸರ್ಕಾರ ಕಂಕಣಬದ್ಧವಾಗಿದ್ದು, ಅದಕ್ಕಾಗಿಯೇ 1.5 ಲಕ್ಷ ಕೋಟಿ ವೆಚ್ಚದಲ್ಲಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ 69 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜಕ್ಕೂರು ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ನೀಡುವ ಸಲಹೆ, ಟೀಕೆಗಳಿದ್ದರೆ ಸ್ವಾಗತಿಸುತ್ತೇನೆ, ಏನೇ ಸಮಸ್ಯೆ ಇದ್ದರೂ ತಮಗೆ ಹೇಳಬೇಕು ಎಂದು ಮನವಿ ಮಾಡಿದರು. ಜಕ್ಕೂರು ಮೇಲ್ಸೇತುವೆ ನಿರ್ಮಾಣಕ್ಕೆ ಇದ್ದ ಭೂಸ್ವಾಧೀನ, ಗುತ್ತಿಗೆದಾರರ ಬೆಲೆ, ಮುಂತಾದ ಸಮಸ್ಯೆ ಬಗೆಹರಿಸಿಕೊಂಡು ಈ ಸೇತುವೆ ನಿರ್ಮಾಣವಾಗಿದೆ. 450 ಮೀಟರ್ ಡಬಲ್ ರಸ್ತೆಯ ನಿರ್ಮಾಣದಿಂದ ಈ ಭಾಗದ ಜನರಿಗೆ ಸಮಯ ಉಳಿಯುತ್ತೆ ಎಂದರು.

ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ ಸೇರ್ಪಡೆ

ಬೆಂಗಳೂರಿಗೆ ಹೊಸ ರೂಪ ಕೊಡಬೇಕು ಎಂದು ತೀರ್ಮಾನಿಸಿ 111 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ. ಇದಕ್ಕಾಗಿ 5000 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ನೀಡಲಾಗಿದೆ.ಕಾವೇರಿ ಆರನೇ ಹಂತ ಕೂಡ ಸಿದ್ಧವಾಗಿದೆ. ನೀರಿನ ಬವಣೆ ನೀಗಲು ಅಂತರ್ಜಲ ಕಾಪಾಡಬೇಕು. ಅದಕ್ಕಾಗಿ ಕೆರೆಗಳ ಅಭಿವೃದ್ಧಿಯಾಗಬೇಕು. ಒಳಚರಂಡಿ ನಿರ್ಮಾಣಕ್ಕಾಗಿ 2000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಇದೀಗ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿಶ್ವ ಬ್ಯಾಂಕ್ ನಿಂದ ಸಾಲ ಪಡೆಯಲಾಗಿದೆ ಎಂದರು.

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಮುಖ್ಯಮಂತ್ರಿಗಳ ಸಹಕಾರದಿಂದ ತಮ್ಮ ಕ್ಷೇತ್ರಕ್ಕೆ ಈ ಮೇಲ್ಸೇತುವೆ ಆಗಿದೆ. ಇನ್ನೂ ಒಂದು ಸೇತುವೆ, ಪದವಿ ಕಾಲೇಜು, ಶಾಲೆ ಎಲ್ಲಾ ಸೌಲಭ್ಯಗಳನ್ನೂ ನೀಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಸೇರಿದಂತೆ ಮುಖ್ಯ ಎಂಜಿನಿಯರ್ ಹಾಗೂ ಅಧಿಕಾರಿಗಳು ಹಾಜರಿದ್ದರು.

PREV
Read more Articles on
click me!

Recommended Stories

ಬಳ್ಳಾರಿಯಲ್ಲಿ ಅಳಿವಿನಂಚಿನ ಅಪರೂಪದ ಹೆಬ್ಬಾಕ ಪಕ್ಷಿಗಳ ಸಂರಕ್ಷಣೆಗೆ ಹೈಕೋರ್ಟ್ ಮಹತ್ವದ ನಿರ್ದೇಶನ.
ರನ್‌ವೇಯಲ್ಲಿ ವಿಮಾನ ಕೆಟ್ಟು ನಿಂತರೆ ತೆರವು ಮಾಡೋದೇಗೆ? ಕೊಲ್ಕತ್ತಾ to ಬೆಂಗಳೂರಿಗೆ 45 ದಿನಗಳ ಸುದೀರ್ಘ ‘ಫೀನಿಕ್ಸ್’ ಪ್ರಯಾಣ!