ಮಾನವೀಯತೆಯಿಂದ ಈದ್ಗಾ ಗೋಡೆ ಕಟ್ಟಿಸಿದ್ದೇನೆ, ಚಿಲ್ಲರೆ ಬುದ್ಧಿ ಬಿಡಿ: ಸಚಿವ ಸೋಮಣ್ಣ

By Kannadaprabha NewsFirst Published Oct 19, 2022, 12:59 PM IST
Highlights

ನಗರದ ಚಂದ್ರಾ ಲೇಔಟ್‌ನಲ್ಲಿ ಸರ್ಕಾರದ ಯೋಜನೆಯಡಿ ಈದ್ಗಾ ಮೈದಾನದ ಗೋಡೆ ನಿರ್ಮಾಣ ಮಾಡಲಾಗಿದೆ ನಿಜ. ಈದ್ಗಾ ಕಟ್ಟಡ ಬಿದ್ದು ಹೋಗುತ್ತದೆ ಎಂಬ ಕಾರಣಕ್ಕೆ ಮಾನವೀಯತೆ ದೃಷ್ಟಿಯಿಂದ ಈ ಕೆಲಸ ಮಾಡಿಸಿದ್ದೇನೆ. 

ಬೆಂಗಳೂರು (ಅ.19): ನಗರದ ಚಂದ್ರಾ ಲೇಔಟ್‌ನಲ್ಲಿ ಸರ್ಕಾರದ ಯೋಜನೆಯಡಿ ಈದ್ಗಾ ಮೈದಾನದ ಗೋಡೆ ನಿರ್ಮಾಣ ಮಾಡಲಾಗಿದೆ ನಿಜ. ಈದ್ಗಾ ಕಟ್ಟಡ ಬಿದ್ದು ಹೋಗುತ್ತದೆ ಎಂಬ ಕಾರಣಕ್ಕೆ ಮಾನವೀಯತೆ ದೃಷ್ಟಿಯಿಂದ ಈ ಕೆಲಸ ಮಾಡಿಸಿದ್ದೇನೆ. ಯಾರ ಸ್ವಂತಕ್ಕೂ ಇದನ್ನು ಕಟ್ಟಿಕೊಟ್ಟಿಲ್ಲ. ಮುಸ್ಲಿಮರ ಹೆಸರು ಮುಂದಿಟ್ಟುಕೊಂಡು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವರರು ತಮ್ಮ ಚಿಲ್ಲರೆ ಬುದ್ಧಿ ಬಿಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಈದ್ಗಾ ಗೋಡೆ ನಿರ್ಮಾಣಕ್ಕೆ ವಿಶ್ವ ಸನಾತನ ಪರಿಷತ್ತು ವಿರೋಧ ವ್ಯಕ್ತಪಡಿಸಿ ಸೋಮಣ್ಣ ಹಾಗೂ ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳಿಗೆ ವಿಧಾನಸೌಧದಲ್ಲಿ ಬುಧವಾರ ಸ್ಪಷ್ಟನೆ ನೀಡಿದ ಅವರು, ನಗರೋತ್ಥಾನ ಯೋಜನೆ ಅಡಿಯಲ್ಲಿ ಸುಮಾರು .6 ಕೋಟಿ ವೆಚ್ಚದಲ್ಲಿ ಈದ್ಗಾ ಗೋಡೆ ನಿರ್ಮಿಸಲಾಗಿದೆ. ಇದರಲ್ಲಿ ಬೇರೆ ಉದ್ದೇಶ ಏನು ಇಲ್ಲ. ನಮ್ಮ ಕ್ಷೇತ್ರದ ಮುಸಲ್ಮಾನರಲ್ಲಿ ಶೇ.90ರಷ್ಟುಅವಿದ್ಯಾವಂತರು. ಆದರೆ, ಇದುವರೆಗೆ ನಾನು ಅವರ ಮತ ಕೇಳಿಲ್ಲ. ಅವರೂ ನನಗೆ ಮತ ಹಾಕಿಲ್ಲ ಎಂದರು.

Latest Videos

ಕಾಂಗ್ರೆಸ್‌ನದ್ದು ಅಲ್ಲಲ್ಲಿ ವಾಹನ ಹತ್ತುವ, ಇಳಿವ ಯಾತ್ರೆ: ಸಚಿವ ಸೋಮಣ್ಣ

ಆದರೆ, ಮಾನವೀಯತೆ ದೃಷ್ಟಿಯಿಂದ ಗೋಡೆ ಕಟ್ಟಲಾಗಿದೆ. ಆದರೆ, ಮುಸಲ್ಮಾನರು ಬಿಜೆಪಿಗೆ ಮತ ಹಾಕಿದರೆ ಖುಷಿ ಪಡುವವರಲ್ಲಿ ನಾನು ಮೊದಲಿಗ. ಮುಸಲ್ಮಾನರು ಕೂಡಾ ದೇಶದಲ್ಲಿ ವಾಸ ಮಾಡಲು, ಭಾವನೆ ವ್ಯಕ್ತಪಡಿಸಲು ಅವಕಾಶ ಇದೆ. ಪ್ರಧಾನಿ ನರೇಂದ್ರ ಮೋದಿ ಕೇವಲ ಹಿಂದೂಗಳಿಗೆ ಸೂರು ಕೊಡಿ, ಸೌಕರ್ಯ ಕೊಡಿ ಎಂದು ಹೇಳಿಲ್ಲ. ಪ್ರತಿಯೊಬ್ಬರಿಗೂ ಸೂರು, ಸೌಲಭ್ಯ ಕಲ್ಪಿಸಿ ಎಂದು ಹೇಳಿದ್ದಾರೆ ಎಂದು ಕೆಲ ಹಿಂದುತ್ವ ಪರ ಸಂಘಟನೆಗಳ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದೇ ವೇಳೆ, ಕೆಲ ದಾಖಲೆಗಳನ್ನು ತೋರಿಸಿದ ಅವರು 1982ರಲ್ಲಿ ಇಲ್ಲಿ 78 ಎಕರೆ ಭೂ ಸ್ವಾಧೀನ ಆಗಿತ್ತು, ಆಗ ಉತ್ತರಹಳ್ಳಿ ಕ್ಷೇತ್ರ ಇತ್ತು. ಆಗ ಈದ್ಗಾ ಮೈದಾನಕ್ಕೆ ಈ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ಡೀಸಿ ಪತ್ರ ಬರೆದಿದ್ದರು. ನಂತರ 1.20 ಗುಂಟೆ ಜಾಗವನ್ನು ಬಿಡಿಎ ಷರತ್ತಿನ ಮೇಲೆ ವಕ್ಫ್‌ ಬೋರ್ಡ್‌ಗೆ ಹಸ್ತಾಂತರ ಮಾಡಿದ್ದಾರೆ. ಅಂದಿನ ಶಾಸಕರಾಗಿದ್ದ ಆರ್‌.ಅಶೋಕ್‌ ಅವರಿಗೆ ಮುಸ್ಲಿಂ ಸಮುದಾಯವು ನೋಂದಣಿ ಶುಲ್ಕ ಮನ್ನಾ ಮಾಡುವಂತೆ ಕೇಳಿತ್ತು. 2012ರಲ್ಲಿ ಅಶೋಕ್‌ ಸಿಎಂಗೆ ಪತ್ರ ಬರೆದು ಉಚಿತವಾಗಿ ನೋಂದಣಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಬಳಿಕ ಶುಲ್ಕ ಕಟ್ಟಲಿಲ್ಲ, ಈ ಕಾರಣಕ್ಕಾಗಿ ಅದು ಹಾಗೆಯೇ ಉಳಿದಿತ್ತು ಎಂದು ವಿವರಿಸಿದರು.

ನಾಳೆ ವಿ.ಸೋಮಣ್ಣ ಅಭಿನಂದನಾ ಗ್ರಂಥ ‘ವಿಜಯಪಥ’ ಬಿಡುಗಡೆ: ಸಚಿವ ವಿ.ಸೋಮಣ್ಣ ಕುರಿತಾದ ‘ವಿಜಯಪಥ’ ಅಭಿನಂದನಾ ಗ್ರಂಥವನ್ನು ಅ.20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡುವರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಸೋಮಣ್ಣ ಅಭಿನಂದನಾ ಸಮಿತಿ ಕಾರ್ಯಕ್ರಮ ಆಯೋಜಿಸಿದೆ. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಮಾರಂಭ ಉದ್ಘಾಟಿಸಲಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆ, ಕಂದಾಯ ಸಚಿವ ಆರ್‌.ಅಶೋಕ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಗ್ರಂಥದ ಕುರಿತು ಮಾತನಾಡಲಿದ್ದಾರೆ. ಸಚಿವ ವಿ.ಸೋಮಣ್ಣ, ಶೈಲಜಾ ಸೋಮಣ್ಣ ಉಪಸ್ಥಿತರಿರುತ್ತಾರೆ ಎಂದರು. ಸುತ್ತೂರು ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. 

ಪೊಲೀಸರೇ ಕತ್ತೆ ಕಾಯ್ತ ಇದ್ದೀರಾ?: ಸಚಿವ ಸೋಮಣ್ಣ ಕೆಂಡಾಮಂಡಲ

‘ವಿಜಯಪಥ’ 160ಕ್ಕೂ ಹೆಚ್ಚು ಲೇಖಕರ ಲೇಖನ ಒಳಗೊಂಡಿದ್ದು, 680ಕ್ಕೂ ಹೆಚ್ಚು ಪುಟದ ಗ್ರಂಥವಾಗಿದೆ. ಸಚಿವ ವಿ.ಸೋಮಣ್ಣ ಅವರ ರಾಜಕೀಯ ಅನುಭವ, ಸೇವಾ ಮನೋಭಾವ, ಸಂಘಟನಾ ಸಾಮರ್ಥ್ಯದ ಬಗ್ಗೆ ಕೃತಿ ತಿಳಿಸುತ್ತದೆ. ಕೃತಿಯು ಸಾರ್ವಜನಿಕ ಸೇವಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಹೇಳಿದರು. ಡಾ.ಬೈರಮಂಗಲ ರಾಮೇಗೌಡ ಹಾಗೂ ಶ್ರೀಪಾಲನೇತ್ರ ಅವರು ಗ್ರಂಥದ ಸಂಪಾದಕರಾಗಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ವೇಳೆ ವಿಧಾನ ಪರಿಷತ್‌ ಸದಸ್ಯ ಎ.ದೇವೇಗೌಡ ಇದ್ದರು.

click me!