ಶಿರಸಿ (ಅ.19) : ಗೂಂಡಾಗಿರಿ ಅಥವಾ ದೇಶದ್ರೋಹಿ ಚಟುವಟಿಕೆ ಯಾರೇ ಮಾಡಿದರೂ ಕ್ಷಮೆ ಇಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದ ರಾಘವೇಂದ್ರ ಮಠದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿರಸಿ ಹೋಬಳಿ ಮಟ್ಟದ ಫಲಾನುಭವಿಗಳ ಸಮಾವೇಶದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಕಾನೂನಿಗಿಂತ ಯಾರೂ ಮೇಲಲ್ಲ. ಪ್ರತಿಯೊಬ್ಬರೂ ಕಾನೂನಿನಂತೆ ನಡೆದುಕೊಳ್ಳಬೇಕು ಎಂದರು.
ಪೊರಕೆ ಹಿಡಿದು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್ ಕಾಗೇರಿ
ಅರಣ್ಯ ಅತಿಕ್ರಮಣ ಮಾಡಿಕೊಂಡವರ ಹಿತರಕ್ಷಣೆ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಮಂಜೂರಾತಿಗೆ ನಾವು ಯತ್ನಿಸುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೆ ಹೋರಾಟಗಾರರಿಗಿಂತ ಜಾಸ್ತಿ ಜವಾಬ್ದಾರಿ ಇದೆ. ಚುನಾವಣೆ ಹತ್ತಿರ ಬಂದಂತೆ ಹೋರಾಟ ಮಾಡುವವರು ಜಾಸ್ತಿ ಆಗುತ್ತಾರೆ. ಸ್ಥಳದಲ್ಲಿ ಏನೂ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಯಾರೋ ಹೇಳುತ್ತಾರೆ ಎಂದು ಹೆದರಿಕೊಳ್ಳಬೇಡಿ ಎಂದು ಭರವಸೆ ನೀಡಿದರು.
ಈ ವರ್ಷ ಅಕಾಲಿಕ ಮಳೆಯಿಂದ ಜನ ಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದಾಗಿ ಕೃಷಿ ಕ್ಷೇತ್ರ, ಗ್ರಾಮೀಣ ಪ್ರದೇಶ ಸಮಸ್ಯೆ ಎದುರಿಸುತ್ತಿದೆ. ಅಡಕೆ ಚುಕ್ಕಿ ರೋಗ ಜಿಲ್ಲೆಯ ಗಡಿ ಭಾಗದಲ್ಲಿ ಇದೆ. ಕಾಡು ಪ್ರಾಣಿಗಳ ಹಾವಳಿ ಸಹ ಮಲೆನಾಡಿನಲ್ಲಿ ಜಾಸ್ತಿ ಇದೆ. ಸವಾಲನ್ನು ಸಂಘಟಿತವಾಗಿ ಎದುರಿಸುವ ಮನೋಸ್ಥಿತಿ ನಾವು ತಂದುಕೊಳ್ಳಬೇಕಿದೆ. ಪಾಲಿ ಹೌಸ್ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಯುವಿಕೆಯನ್ನು ರೈತರು ರೂಢಿಸಿಕೊಳ್ಳಬೇಕು. ಗುಣಮಟ್ಟದ ಉತ್ಪನ್ನದ ಜತೆ ಉತ್ತಮ ದರ ಪಡೆಯಬಹುದಾಗಿದೆ ಎಂದರು. ಸಹಾಯಕ ಆಯುಕ್ತ ದೇವರಾಜ ಆರ್., ತಹಸೀಲ್ದಾರ್ ಶ್ರೀಧರ ಮುಂದಲಮನಿ, ಇಒ ದೇವರಾಜ ಹಿತ್ಲಮಕ್ಕಿ ಇತರರಿದ್ದರು.
ನೀರು ಸರಬರಾಜು ಪೈಪ್‌ಲೈನ್ ಸ್ಥಳಾಂತರಿಸಲು ನಿರ್ಧಾರ
ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ತೊಡಕಾಗಿದ್ದ ನಗರಕ್ಕೆ ನೀರು ಸರಬರಾಜಿನ ಪೈಪ್‌ಲೈನ್ ಬೇರೆಡೆ ಸ್ಥಳಾಂತರಿಸಲು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ನೇತೃತ್ವದಲ್ಲಿ ನಿರ್ಧರಿಸಲಾಯಿತು. ಇಲ್ಲಿಯ ಮಿನಿ ವಿಧಾನಸೌಧದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಪಂಡಿತ ಸಾರ್ವಜನಿಕ ಆಸ್ಪತ್ರೆ ಈಗ 250 ಹಾಸಿಗಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದೆ. ನೂತನ ಕಟ್ಟಡ ಕಾಮಗಾರಿಗೆ ಆಸ್ಪತ್ರೆ ಆವರಣದಲ್ಲಿ ಇದ್ದ ರಾಯಪ್ಪ ಹುಲೇಕಲ್ ಶಾಲಾ ಜಾಗದಲ್ಲಿ ಒಂದು ಎಕರೆ ಭೂಮಿಯನ್ನೂ ನಗರಸಭೆ ನೀಡಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಶೇ. 50ರಷ್ಟುಪೂರ್ಣಗೊಳ್ಳಬೇಕಿತ್ತು. ಆದರೆ, ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸ್ಥಳಾಂತರ ಸಮಸ್ಯೆಯಾಗಿತ್ತು. ಈ ಪೈಪ್ ಸ್ಥಳಾಂತರ ಯೋಜನೆ ನಮ್ಮ ಪ್ಲಾನ್‌ನಲ್ಲಿ ಇಲ್ಲ ಎಂದು ಆಸ್ಪತ್ರೆ ಕಟ್ಟಡ ನಿರ್ಮಿಸುವವರೂ ಸುಮ್ಮನಿದ್ದರು.
ಈ ಕುರಿತು ಆಸ್ಪತ್ರೆ ಸಿಬ್ಬಂದಿ, ನಗರಸಭೆ ಸಿಬ್ಬಂದಿಯೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಪೈಪ್‌ಲೈನ್ ಸ್ಥಳಾಂತರಕ್ಕೆ .40 ಲಕ್ಷ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಪ್ರಕ್ರಿಯೆಗೆ ಟೆಂಡರ್ ನಡೆದು, ಕಾಮಗಾರಿ ಆರಂಭಗೊಳ್ಳುವ ವೇಳೆ ಸಮಯ ಹಿಡಿಯಲಿದೆಯಲ್ಲದೇ ಅಲ್ಲಿಯವರೆಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಲಿದೆ. ಹೀಗಾಗಿ, ನಗರಸಭೆ ಆಸ್ಪತ್ರೆಯವರಿಗೆ ಪೈಪ್‌ಲೈನ್ ತೆರವುಗೊಳಿಸಲು ಅನುಮತಿ ಪತ್ರ ನೀಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಅ. 20ರಂದು ನಗರಸಭೆ ಸಾಮಾನ್ಯ ಸಭೆ ನಡೆಯಲಿದ್ದು, ಅಂದು ಚರ್ಚಿಸಿ ಅನುಮತಿ ಪತ್ರ ನೀಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆ ಹಾಗೂ ಸಮೀಪದ ಚಚ್‌ರ್ ನಡುವೆ ವಿದ್ಯುತ್ ಮಾರ್ಗವಿದ್ದು, .12 ಲಕ್ಷ ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಹವ್ಯಕರು ಎಲ್ಲೇ ಇದ್ದರೂ ನಮ್ಮತನ ಉಳಿಸಿಕೊಳ್ಳಿ: ಕಾಗೇರಿ ಕಿವಿಮಾತು
ಪಂಡಿತ ಸಾರ್ವಜನಿಕ ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದ ಆಡಳಿತಾಧಿಕಾರಿ ಡಾ. ಗಜಾನನ ಭಚ್, ಆಸ್ಪತ್ರೆಗೆ ಪ್ರತಿ ದಿನ 700 ಜನ ಹೊರ ರೋಗಿಗಳು ಆಗಮಿಸುತ್ತಿದ್ದು, 10-12 ಜನ ದಾಖಲಾಗುತ್ತಿದ್ದಾರೆ. ತಿಂಗಳಿಗೆ ಸರಾಸರಿ 250 ಹೆರಿಗೆ ನಡೆಯುತ್ತಿದೆ. ವೈದ್ಯರ ಹುದ್ದೆ 16ರಷ್ಟಿದ್ದು, ಹಾಲಿ 12 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಡಿಯಾಲಾಜಿ, ಫಿಸಿಸಿಯಶನ್ ಕೊರತೆ ಇದೆ. ಶೇ. 51 ಸ್ಟಾಫ್ ಕೊರತೆ ಇದೆ. ಆಫೀಸ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಹುದ್ದೆಗಳು ಭರ್ತಿ ಆಗಬೇಕಿದೆ. ಡಯಾಲಿಸಿಸ್ ವಿಭಾಗದಲ್ಲಿ 27 ಜನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ವೇಟಿಂಗ್ ಲಿಸ್ವ್ 6ನಲ್ಲಿ ಜನ ಇದ್ದಾರೆ. ಇನ್ನೊಂದು ಮಿಷನ್ ಅಗತ್ಯವಿದೆ ಎಂದರು. ರೋಗಿಗಳಿಗೆ ನೀಡುವ ಔಷಧಕ್ಕೆ ಕಳೆದ 2.5 ವರ್ಷದಿಂದ ಹಣ ಬಿಡುಗಡೆ ಆಗಿಲ್ಲ. ಔಷಧಕ್ಕಾಗಿ ಆರೋಗ್ಯ ರಕ್ಷಾ ಸಮಿತಿಯನ್ನೇ ಅವಲಂಬಿಸಬೇಕಿದೆ. ಪ್ರತಿ ತಿಂಗಳು 2 ಲಕ್ಷ ಕೊರತೆ ಆಗುತ್ತಿದೆ ಎಂದರು.